
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇಡಲಾಗಿದ್ದ ಎಂ.ಎಸ್. ಉಮೇಶ್ ಅವರ ಪಾರ್ಥಿವ ಶರೀರಕ್ಕೆ ಮಗಳು ಜಯಲಕ್ಷ್ಮಿ, ಕಲಾವಿದರಾದ ಗಿರಿಜಾ ಲೋಕೇಶ್, ಡಿಂಗ್ರಿ ನಾಗರಾಜ್, ಕೆ.ವಿ.ನಾಗರಾಜಮೂರ್ತಿ ಅಂತಿಮ ನಮನ ಸಲ್ಲಿಸಿದರು
ಅಶ್ಲೀಲ ಮಾತುಗಳನ್ನು ಆಡದೆ, ತಮ್ಮ ಆಂಗಿಕ ಅಭಿನಯದಿಂದ ನೋಡುಗರನ್ನು ನಗಿಸುವ ಸಾಮರ್ಥ್ಯ ಹೊಂದಿದ್ದ ಕೆಲವೇ ಹಾಸ್ಯನಟರಲ್ಲಿ ಉಮೇಶ್ ಒಬ್ಬರು. ಈ ಹೊತ್ತಿನಲ್ಲಿ ಅಂತಹ ಹಾಸ್ಯ ಕಲಾವಿದರನ್ನು ಕಾಣುವುದು ಸಾಧ್ಯವೇ ಇಲ್ಲ ಎಂಬಂತಹ ಸ್ಥಿತಿ ಇದೆ. ತಮ್ಮ ಅಭಿನಯ, ವಿಶಿಷ್ಟ ಮಾತುಗಾರಿಕೆ, ಆಂಗಿಕದಿಂದಲೇ ನೋಡುಗರ ಸೆಳೆಯುತ್ತಿದ್ದರು.
ಹೊಸ ತಲೆಮಾರಿನವರಿಗೆ ಅವರೊಬ್ಬ ಹಾಸ್ಯನಟ ಎಂದಷ್ಟೇ ಕಾಣುತ್ತದೆ. ಆದರೆ ಅವರೊಬ್ಬ ಅದ್ಭುತ ಸೃಜನಶೀಲ ನಟರಾಗಿದ್ದರು. ‘ಮಕ್ಕಳ ರಾಜ್ಯ’ ಸಿನಿಮಾದಲ್ಲಿ ಬಾಲನಟರಾಗಿ ಅವರು ತಮ್ಮ ಅಭಿಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ನವರಸಗಳನ್ನೂ ಬಹಳ ಅಚ್ಚುಕಟ್ಟಾಗಿ ನಟನೆಯಲ್ಲಿ ತರಬಲ್ಲವರಾಗಿದ್ದರು. ತಮಗೆ ವಹಿಸಿದ ಪಾತ್ರಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಅಭಿನಯಿಸುವುದರ ಜತೆಗೆ, ಆ ಪಾತ್ರಕ್ಕೆ ಒಂದು ಛಾಪು ಮೂಡಿಸುವಂತೆ ಅವುಗಳಿಗೆ ಜೀವ ತುಂಬುತ್ತಿದ್ದರು.
ಬಾಲನಟನಾಗಿ ಅವರು ರಂಗಭೂಮಿ ಮತ್ತು ಸಿನಿಮಾರಂಗ ಎರಡನ್ನೂ ಪ್ರವೇಶಿಸಿದ್ದರು ಎಂಬುದು ಬಹಳ ಮಂದಿಗೆ ತಿಳಿದಿರಲಾರದು. ಮಾಸ್ಟರ್ ಹಿರಣ್ಣಯ್ಯ ಅವರ ನಾಟಕ ಕಂಪನಿಯಿಂದ ರಂಗಪಯಣ ಆರಂಭಿಸಿದರೂ ಅವರು ಹೆಚ್ಚು ಕೆಲಸ ಮಾಡಿದ್ದು ಗುಬ್ಬಿ ವೀರಣ್ಣ ಅವರ ನಾಟಕ ಕಂಪನಿಯಲ್ಲಿ.
ಗುಬ್ಬಿ ವೀರಣ್ಣ ಅವರ ಕಂಪನಿಯಲ್ಲಿ ರಾಜ್ ಕುಮಾರ್, ಬಾಲಕೃಷ್ಣ ಅವರಂತಹ ನಟರ ಜತೆಗೆ ಪಳಗಿದ ಅನುಭವ ಅವರಿಗಿತ್ತು. ಅವರ ರಂಗಜೀವನದಲ್ಲಿ 20ಕ್ಕೂ ಹೆಚ್ಚು ನಾಟಕ ಕಂಪನಿಗಳಲ್ಲಿ ಅವರು ನಟಿಸಿದ್ದರು. ಅವರ ಧ್ವನಿ ಅದ್ಭುತವಾಗಿತ್ತು, ಅವರು ಉತ್ತಮ ಹಾಡುಗಾರರೂ ಆಗಿದ್ದರು. ಇವೆಲ್ಲವೂ ಅವರನ್ನು ವೃತ್ತಿರಂಗಭೂಮಿಗೆ ಹೇಳಿ ಮಾಡಿಸಿದ ನಟನನ್ನಾಗಿಸಿತ್ತು. 35ಕ್ಕೂ ಹೆಚ್ಚು ನಾಟಕ ಕಂಪನಿಗಳಲ್ಲಿ ಅತಿಥಿ ನಟರಾಗಿಯೂ ಅಭಿನಯಿಸಿದ್ದರು.
ಉಮೇಶ್ ಅವರು ಈವರೆಗೆ 800ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು ಎಂಬುದೇ ಅವರು ಎಂತಹ ಕಲಾವಿದ ಎಂಬುದನ್ನು ತೋರಿಸುತ್ತದೆ. ಅಂತಹ ಕಲಾವಿದರೂ ತಮ್ಮ ಬದುಕಿನ ಕೊನೆಗಾಲದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎಂಬುದು ಬಹಳ ಬೇಸರದ ಸಂಗತಿ. ಆದರೆ ಹಲವು ಕಲಾವಿದರ ಮನವಿಯ ನಂತರ ರಾಜ್ಯ ಸರ್ಕಾರವು ಉಮೇಶ್ ಅವರ ಚಿಕಿತ್ಸೆಯ ವೆಚ್ಚ ಭರಿಸಿತು. ಉಮೇಶ್ ಅವರ ಅಗಲಿಕೆ ಕನ್ನಡ ರಂಗಭೂಮಿಗೆ, ಚಿತ್ರರಂಗಕ್ಕೆ ದೊಡ್ಡ ನಷ್ಟ.
‘ಬರಹಕ್ಕೂ ಹಚ್ಚಿದ್ದೆ...’
ಉಮೇಶ್ ಅವರು ಒಳ್ಳೆಯ ಬರಹಗಾರರೂ ಆಗಿದ್ದರು. ಅವರನ್ನು ಬರಹಕ್ಕೆ ಹಚ್ಚುವ ಅವಕಾಶ ನನಗೆ ಒದಗಿತ್ತು. ಅವರೊಂದಿಗೆ ಕೂತು ಚರ್ಚಿಸಿ, ಒತ್ತಡ ಹೇರಿ ಬರೆಸುತ್ತಿದ್ದೆ. ‘ಮಲ್ಲಿಗೆ’, ‘ತುಷಾರ’ ನಿಯತಕಾಲಿಕಗಳಲ್ಲಿಅವರಿಂದ ಬಹಳ ಲೇಖನಗಳನ್ನು ಬರೆಸಿದೆ. ಅವರಿಂದ ಬಹಳಷ್ಟು ಸಂದರ್ಶನಗಳನ್ನು ಮಾಡಿಸಿದ್ದೆ. ನಿಧಾನವಾಗಿ ಅವರೊಳಗಿನ ಬರಹಗಾರ ಹೊರಬಂದ. ಬರವಣಿಗೆಯಲ್ಲಿನ ಜೀವಂತಿಕೆ ಅವರ ಆತ್ಮಕತೆ ‘ಗಂಟೆ’ಯಲ್ಲಿ ಓದುಗರ ಅನುಭವಕ್ಕೆ ಬರುತ್ತದೆ.ವಿಜಯಾ, ಲೇಖಕಿ
ಲೇಖಕ: ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.