ADVERTISEMENT

ಕನ್ನಡಕ್ಕೆ ಬೂಕರ್ ಗರಿ: ದೀಪ ಬೆಳಗಿದ ಕನ್ನಡದ ಬಾನು

ಭಾಷೆ, ಸಾಮಾಜಿಕ ಬಹುತ್ವದ ಏಕ ನಂಬಿಕೆಯ ಸೂತ್ರದಲ್ಲಿ ಒಟ್ಟಾದ ಬಾನು, ದೀಪಾ

​ಪ್ರಜಾವಾಣಿ ವಾರ್ತೆ
Published 22 ಮೇ 2025, 1:52 IST
Last Updated 22 ಮೇ 2025, 1:52 IST
<div class="paragraphs"><p>ಬಾನು ಮುಷ್ತಾಕ್, ದೀಪಾ ಭಾಸ್ತಿ</p></div>

ಬಾನು ಮುಷ್ತಾಕ್, ದೀಪಾ ಭಾಸ್ತಿ

   

ನಿನ್ನೆ ಮುಂಜಾನೆ ಜಾಗತಿಕ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಹೆಜ್ಜೆಯಿಟ್ಟಾಗ ಭಾರತದಲ್ಲಿ ದಟ್ಟರಾತ್ರಿ ಮಗ್ಗುಲು ಮುರಿಯುತ್ತಿತ್ತು. ಬರಹವೇ ದುಸ್ತರ ಎನಿಸಿದ ಕಾಲದಲ್ಲಿ ಬರೆಯಲು ತೊಡಗಿದ ಹಿರಿಯ ಬರಹಗಾರರು ಒಬ್ಬರು, ಬರಹ ದಕ್ಕಲು ತೊಡಗಿದ ಕಾಲಕ್ಕೆ ತನ್ನ ಧ್ವನಿ ಯಾವುದು ಎಂದು ಹುಡುಕಿಕೊಂಡು ಹೊರಟ ಕಿರಿಯ ಬರಹಗಾರರು ಇನ್ನೊಬ್ಬರು. ಈ ಇಬ್ಬರು ಒಂದು ಕಾಲಘಟ್ಟದಲ್ಲಿ ಭೇಟಿಯಾಗಿ ಕನ್ನಡಕ್ಕೊಂದು ಅಪರೂಪದ ವಜ್ರ ಕಿರೀಟವನ್ನು ತಂದುಕೊಟ್ಟಿದ್ದಾರೆ.

ಹಾಸನದಲ್ಲಿದ್ದು ಕಥೆಗಳ ಮೂಲಕ ಬದುಕನ್ನು ದಾಖಲಿಸುತ್ತಾ ಹೋದ ಹೋರಾಟಗಾರ್ತಿ, ಬಂಡಾಯ ಸಾಹಿತಿ, ವಕೀಲೆ, ಪತ್ರಕರ್ತೆ ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ನಡುವಿನ ನಿರ್ಭಿಡೆಯ ಧ್ವನಿಯಾಗಿರುವವರು ಬಾನು ಮುಷ್ತಾಕ್. ಬೆಂಗಳೂರಿನಲ್ಲಿ ಪತ್ರಕರ್ತೆಯಾಗಿ ವೃತ್ತಿ ಆರಂಭಿಸಿ ವಿಶದ ಬರವಣಿಗೆಗಳು ಮತ್ತು ಅನುವಾದದ ಮೂಲಕ ತಮ್ಮ ಧ್ವನಿಯನ್ನು ಕಂಡುಕೊಂಡ ಕೊಡಗು ವಾಸಿ ದೀಪಾ ಭಾಸ್ತಿ. ಇಬ್ಬರೂ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಕೊಡಮಾಡುವ ವೇದಿಕೆಯ ಮೇಲೆ ಒಬ್ಬರನ್ನೊಬ್ಬರು ತಬ್ಬಿ ಅಭಿನಂದಿಸಿದಾಗ ಅಲ್ಲೊಂದು ಅಪೂರ್ವ ಗಳಿಗೆ ಹಾಗೇ ಹರಳುಗಟ್ಟಿತು. 

ADVERTISEMENT

ಮಾತಿಲ್ಲದವರು ಒಂದನ್ನು ಧ್ವನಿಸಿದರೆ ಮಾತನಾಡುತ್ತಿರುವವರ ಧ್ವನಿಯೇ ಬೇರೆ ಎನ್ನುವ ಈ ದುರಿತಕಾಲದಲ್ಲಿ ಕನ್ನಡದ ಇಬ್ಬರು ಮಹಿಳೆಯರು ಸಾಹಿತ್ಯ ಲೋಕದ ಎಲ್ಲೆಗಳ ಮೀರಿ ನಿಂತರು; ಬೇರೆ ಬೇರೆ ಪೀಳಿಗೆಗಳಿಗೆ, ಬೇರೆ ಬೇರೆ ಊರುಗಳಿಗೆ, ಬೇರೆ ಬೇರೆ ವೃತ್ತಿಗಳಿಗೆ ಸೇರಿದವರು ಧುತ್ತೆಂದು ವಿಶ್ವ ಸಾಹಿತ್ಯದ ವೇದಿಕೆಯ ಮೇಲೆ ನಿಂತು ಕನ್ನಡದ ಪ್ರತಿನಿಧಿಗಳಾಗಿ ಹೊಚ್ಚಹೊಸ ಕನಸನ್ನು ಕಟ್ಟಿಕೊಟ್ಟರು. ನಿನ್ನೆ ರಾತ್ರಿ ನಿರಾಳವಾಗಿ ಮಲಗಿದ್ದ ಭಾರತಕ್ಕೆ ‘ಕಲ್ಲು ನೀರು ಕರಗುವ ಹೊತ್ತಿನಲ್ಲಿ’ ಸಂಭ್ರಮ ತುಂಬಿಸಿದರು. ಮುಂಜಾವು ಇನ್ನೇನು ಮೈಮುರಿದು ಏಳಬೇಕು ಎನ್ನುವ ಹೊತ್ತಿಗೆ ಕನ್ನಡದ ಕಂಪನ್ನು, ಈ ಭಾಷೆಯ ಶ್ರೀಮಂತ ಇತಿಹಾಸವನ್ನು ಲಂಡನ್ನಿನ ಟೇಟ್ ಮಾಡರ್ನ್ ಮ್ಯೂಸಿಯಂನಲ್ಲಿ ಪಸರಿಸಿದರು.

ಇಬ್ಬರೂ ಯಾವುದೇ ಆಡಂಬರವಿಲ್ಲದೆ ಅತಿ ಸರಳ ಸೀರೆಯುಟ್ಟು ಸ್ನಿಗ್ಧ ನಗುವಿನೊಂದಿಗೆ ತಮ್ಮ ಅತ್ಯಂತ ಭಾವುಕ ಗಳಿಗೆಯಲ್ಲೂ ಕನ್ನಡದ ‘ಯಾವ ಕತೆಯೂ ಸಣ್ಣದಲ್ಲ’ ಮತ್ತು ‘ಜೇನಿನ ಹೊಳೆಯೋ ಹಾಲಿನ ಮಳೆಯೋ’ ಎಂಬ ಸೂಕ್ತವಾದ ಮಾತುಗಳೊಂದಿಗೆ ತಮ್ಮ ಆಯ್ಕೆಗಳನ್ನು, ಹೋರಾಟಗಳನ್ನು ಮತ್ತು ಕನ್ನಡತನವನ್ನು ಅಲ್ಲಿ ಪ್ರಜ್ವಲಿಸುವಂತೆ ಎತ್ತಿ ಹಿಡಿದರು. 

ಕನ್ನಡವೇ ಆಗಾಗ ತುಳಿತಕ್ಕೊಳಗಾಗುತ್ತಿರುವ ಕಾಲವಿದು. ಹಲವಾರು ವರ್ಷ ಬೆಂಗಳೂರಿನಲ್ಲಿ ಅನ್ನ ಮತ್ತು ಘನತೆಯ ಜೀವನಕ್ಕಾಗಿ ನೆಲೆ ನಿಂತಿದ್ದರೂ ‘ಸಕಲ ಕನ್ನಡ ನಾಡು ನನ್ನ ಭಾಷೆ ಕಲಿಯಲಿ’ ಎಂಬ ಅಹಂ ತೊಟ್ಟು ದಿನ ಬೆಳಗಾದರೆ ಕನ್ನಡಿಗರನ್ನು ಅವಹೇಳನ ಮಾಡುತ್ತಾ ‘ಕನ್ನಡ್ ಗೊತ್ತಿಲ್’ ಎಂದು ಸೆಟೆದು ಹೇಳುವ ಮಾತುಗಳೇ ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ ದಿನಗಳಿವು. ಅಂತಹ ದಿನಗಳಲ್ಲಿ ಇದೊಂದು ಸಂಭ್ರಮ ಅನೂಹ್ಯ ನಿರಾಳ ಭಾವ ಮೂಡಿಸಿದೆ ಎಂದರೆ ಅತಿಶಯೋಕ್ತಿಯಲ್ಲ.

ಎಳೆಯರು ಇಂದು ಅಲ್ಗಾರಿದಂಗಳ ಜಗತ್ತಿನಲ್ಲಿ ಕಳೆದುಹೋಗಿ ಕನ್ನಡವನ್ನು ನಿರಾಕರಿಸಿ ಬದುಕುತ್ತಿರುವಾಗ ಕನ್ನಡದಿಂದ ಕೊಡುಕೊಳ್ಳುವಿಕೆಯ ಆಯ್ಕೆಯನ್ನು ಮಾಡಿದ ದೀಪಾ ಭಾಸ್ತಿ ನಿಜಕ್ಕೂ ಅಭಿನಂದನಾರ್ಹರು. ಹಟ ಹಿಡಿದು ಕನ್ನಡ ಕಲಿತು ಕನ್ನಡದಲ್ಲಿ ಬರೆದು ಕನ್ನಡವನ್ನೇ ಉಸಿರಾಡುವ ಬರಹಗಾರರಾದ ಬಾನು ಮುಷ್ತಾಕ್ ಐದು ದಶಕಗಳ ಹಿಂದೆ ಲಂಕೇಶ್ ಪತ್ರಿಕೆಯಲ್ಲಿ ಬರೆಯಲು ಪ್ರಾರಂಭಿಸಿದಾಗ ದೀಪಾ ಹುಟ್ಟಿರಲೂ ಇಲ್ಲವೇನೋ. ಇಂದು ಬಾನು ಅವರ ಕಥೆಗಳ ಜಗತ್ತನ್ನು ಅದರ ಎಲ್ಲಾ ಅನನ್ಯತೆಗಳೊಂದಿಗೆ ಇಂಗ್ಲಿಷ್‌ಗೆ ದಾಟಿಸುವ ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳುವ ಮೂಲಕ ಕನ್ನಡಿಗರ ಸಂಭ್ರಮಕ್ಕೆ ದೀಪಾ ನಿಜಕ್ಕೂ ಜಾಗತಿಕ ಸಾಹಿತ್ಯದ ಹಣತೆ ಹಚ್ಚಿಟ್ಟಿದ್ದಾರೆ.

ಮುಖ್ಯವಾಹಿನಿಯಿಂದ ದೂರ ನಿಂತು ಬಾನು ಹಾಸನದಲ್ಲಿ ತಮ್ಮ ಹೋರಾಟ, ವಕೀಲಿಕೆ ಹಾಗೂ ಬರಹದ ಕೆಲಸ ಮಾಡುತ್ತಾ ಹೋದವರು. ಹಾಗೆಯೇ ಬೆಂಗಳೂರಿನ ಟೈಮ್ಸ್ ಆಫ್ ಇಂಡಿಯಾ, ಇಂಡಿಯನ್ ಎಕ್ಸ್‌ಪ್ರೆಸ್, ಸ್ಕ್ರಾಲ್, ಹಿಮಾಲ್ ಮ್ಯಾಗ್ ಪತ್ರಿಕೆಗಳಲ್ಲಿ ಕೆಲಸ ಮಾಡಿ ತಮ್ಮ ಬರಹದ ಆಯಾಮ ಬೇರೆಯೇ ಇದೆ ಎಂದು ನಂತರ ನಿರ್ಧರಿಸಿ ಕೊಡಗಿನ ಮಡಿಕೇರಿಯಲ್ಲಿ ನೆಲಸಿ ತನ್ನ ಬರವಣಿಗೆ, ಅನುವಾದಗಳನ್ನು ಮಾಡುತ್ತಾ ನಿಂತವರು ದೀಪಾ. ಇಬ್ಬರೂ ‘ನೆಟ್‌ವರ್ಕ್’ ಹಾಗೂ ‘ಅವಕಾಶ’ಗಳನ್ನು ಲೆಕ್ಕಾಚಾರದಲ್ಲಿ ಬಳಸುವ ಜನಗಳ ನಡುವೆ ತೀರಾ ವಿಭಿನ್ನವಾಗಿ ನಿಂತಿದ್ದಾರೆ. ಬಾನು ಅವರು ತಮ್ಮ ಬರಹಗಳ ಮೂಲಕ ತಮ್ಮ ಇರವನ್ನು ದಾಖಲಿಸಿದರೆ, ಅವರಿಗಿಂತ ಎಳೆಯರಾದ ದೀಪಾ ಡಿಜಿಟಲ್ ಜಗತ್ತಿನ ಆಕರ್ಷಣೆಯನ್ನು ಮೀರಿ ಕೇವಲ ತಮ್ಮ ಕೆಲಸದ ಮೂಲಕವೇ ಪ್ರಸ್ತುತವಾಗಿದ್ದಾರೆ. ಜಾಲತಾಣದಲ್ಲಿ ಎಳೆದೆಳೆದು ಹುಡುಕಿದರೂ ಅವರ ಬಗ್ಗೆ ಚುಟುಕು ವಿವರಗಳನ್ನು, ಸಂದರ್ಶನಗಳನ್ನು ಬಿಟ್ಟರೆ ಹೆಚ್ಚಿನ ವಿವರ ದೊರಕದು.

ಹೀಗೆ ಯಾವುದೇ ಸದ್ದುಗದ್ದಲವಿಲ್ಲದೆ, ಮುಖ್ಯ ವೇದಿಕೆಗಳ ಆಸೆ, ಭಟ್ಟಂಗಿತನಕ್ಕೆ ಎಳೆಸದೆ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಾ ಹೋಗಿ ಅಲ್ಲೊಂದು ಬಿಂದುವಿನಲ್ಲಿ ಕನ್ನಡಕ್ಕೆ ಅಪರೂಪದ ಗೌರವವನ್ನು ತಂದುಕೊಟ್ಟು ಎಲ್ಲಾ ಕನ್ನಡಿಗರೂ ಮತ್ತಷ್ಟು ಹೆಮ್ಮೆಯಿಂದ ನಿಲ್ಲುವಂತೆ ಮಾಡಿದವರು ಇಬ್ಬರು ಮಹಿಳೆಯರು. ಭಿನ್ನ ಪರಂಪರೆಗೆ ಸೇರಿದರೂ ಭಾಷಾ ಹಾಗೂ ಸಾಮಾಜಿಕ ಬಹುತ್ವದ ಏಕ ನಂಬಿಕೆಯ ಸೂತ್ರದಲ್ಲಿ ಒಟ್ಟಾದವರು. ಲಂಕೇಶ್ ಪತ್ರಿಕೆಯಿಂದ ಪತ್ರಿಕಾ ಬರವಣಿಗೆಗೆ, ಪ್ರಜಾಮತದಿಂದ ಸಣ್ಣ ಕಥೆಗಳ ಜಗತ್ತಿಗೆ ಅಡಿಯಿಟ್ಟ ಬಾನು ಇಂದು ಆ ಗರಡಿಯಿಂದ ಬಂದ ಹೆಸರುಗಳ ಪೈಕಿ ಪ್ರಖರವಾಗಿ ಹೊಳೆಯುವ ಧ್ರುವತಾರೆ ಆಗಿದ್ದಾರೆ. ಮುಸ್ಲಿಂ ಮಹಿಳೆಯರ ಜಗತ್ತನ್ನು ಕನ್ನಡಿಗರು ನೋಡಲು ಶುರು ಮಾಡಿದ್ದು ಸಾರಾ ಅಬೂಬಕರ್ ಅವರಿಂದ. ಅಲ್ಲಿಂದ ಮುಂದಕ್ಕೆ ಬಾನು ಈ ಧ್ವನಿಯನ್ನು ಸತತವಾಗಿ ದಾಖಲಿಸಿದ್ದಾರೆ. ಕೆಲ ಕಾಲ ಶಿಕ್ಷಕಿಯಾಗಿಯೂ, ಪತ್ರಕರ್ತೆಯಾಗಿಯೂ ಇದ್ದ, ಪೂರ್ಣಕಾಲಿಕವಾಗಿ ವಕೀಲರಾಗಿರುವ ಬಾನು ಮುಷ್ತಾಕ್‌ ಅವರ ಬರಹಗಳು ಉರ್ದು, ಹಿಂದಿ, ತಮಿಳು, ಮಲಯಾಳ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಟವಾಗಿವೆ.

ಉತ್ತಮ ಬರಹಗಾರರಿಗೆ ಉತ್ತಮ ಭಾಷಾಂತರಕಾರರೂ ಸಿಕ್ಕು ಅವರ ಲೇಖನಿಗೆ ಸ್ವಾತಂತ್ರ್ಯ ಸಿಕ್ಕರೆ ಏನಾಗಬಹುದು ಎನ್ನುವುದರ ಹೆಮ್ಮೆಯ ಫಲಿತಾಂಶ ನಮ್ಮ ಮುಂದಿದೆ. ಇಬ್ಬರ ಹಿಂದೆಯೂ ಅವರ ಬೆನ್ನಿಗೆ ನಿಂತ ಅವರ ಸಂಗಾತಿಗಳಿದ್ದಾರೆ; ಅವರ ತಾಯ್ತಂದೆ ಹಾಗೂ ಮಕ್ಕಳಿದ್ದಾರೆ. ಅವರೆಲ್ಲರ ಹೆಮ್ಮೆಯ ಪ್ರತೀಕವಾಗಿ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಹೀಗೆ ನಡೆಯುತ್ತಾ ಕರ್ನಾಟಕಕ್ಕೆ ಬಂದುಬಿಟ್ಟಿದೆ. ಇದೊಂದು ಅನನ್ಯ ಸೀಮೋಲ್ಲಂಘನ.

ಲೇಖಕಿ: ಪತ್ರಕರ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.