ವೃತ್ತಿಪರ ವೈದ್ಯ, ವಿದ್ಯಾರ್ಥಿಯಾಗಿ ಜಗತ್ತಿನಾದ್ಯಂತ ಓಡಾಡಿ, ಅತ್ಯುತ್ತಮ ದೂರದರ್ಶಕಗಳನ್ನು (Telescope), ಅತ್ಯುತ್ಕೃಷ್ಟವಾದ ಸೂಕ್ಷದರ್ಶಕಗಳನ್ನು (Microscope) ಕಂಡಿದ್ದೇನೆ. ಜ್ಞಾನಾರ್ಜನೆ ಮಾಡಿಕೊಂಡಿದ್ದೇನೆ. ಆದರೆ, ದೂರದರ್ಶಕ ಹಾಗೂ ಸೂಕ್ಷ್ಮದರ್ಶಕಗಳೆರಡನ್ನೂ ಒಂದೇ ಮಾಪಕದಲ್ಲಿ ರೂಪಿಸುವುದು ಬಹು ಕಷ್ಟ ಸಾಧ್ಯ. ಅದು ಸಾಧ್ಯವಾದಲ್ಲಿ ಅದೇ ‘ದರ್ಶನ’. ಅಂಥ ಅತ್ಯಪರೂಪವನ್ನು ಕಂಡು, ಒಡನಾಡುವ ಅವಕಾಶ ದೊರಕಿದ್ದು ಮಾತ್ರ ಮಣಿಪಾಲದಲ್ಲಿಯೇ. ಅಂದಹಾಗೆ ಅದು ವಸ್ತುವಲ್ಲ, ವ್ಯಕ್ತಿ ಹಾಗೂ ವ್ಯಕ್ತಿತ್ವ ಡಾ.ರಾಮದಾಸ್ ಮಾಧವ ಪೈಗಳದ್ದು.
ಅವರನ್ನು ಬಾಲಕನಾಗಿ, ವಿದ್ಯಾರ್ಥಿಯಾಗಿ, ಯುವ ಅಧ್ಯಾಪಕನಾಗಿ, ವಿಭಾಗದ ಪ್ರಭಾರಿಯಾಗಿ, ವೈದ್ಯಕೀಯ ಕಾಲೇಜಿನ ಮುಖ್ಯಸ್ಥನಾಗಿ ಹಾಗೂ ಈಗ ಅವರು ರೂಪಿಸಿದ ಸಂಸ್ಥೆಯ ನಾಯಕನಾಗಿ ವಿವಿಧ ಹಂತಗಳಲ್ಲಿ ಅವರೊಂದಿಗೆ ಒಡನಾಡಿದ್ದೇನೆ. ಪ್ರತಿ ಬಾರಿ ಅವರನ್ನು ಭೇಟಿಯಾದಾಗ, ಮಾತ್ರವಲ್ಲ ಆ ಭೇಟಿಗಳನ್ನು ನೆನಪಿಸಿಕೊಂಡಾಗಲೂ ಹೊಸದೊಂದು ಹೊಳಪು, ಸಮಸ್ಯೆ ಪರಿಹಾರಕ್ಕೊಂದು ಸುಳಿವು ಸಿಗುತ್ತದೆ.
ಸುಮಾರು ವರ್ಷಗಳ ಹಿಂದೆ, ಅವರ ಭೇಟಿಗಾಗಿ ವರಾಂಡಾದಲ್ಲಿ ಕಾಯುತ್ತಿದೆ. ಅಷ್ಟರಲ್ಲಿ ಸಂಸ್ಥೆಯ ಹಿರಿಯ ನೌಕರರೊಬ್ಬರು ಬಂದು ಅವರಿಗೆ ನಮಸ್ಕರಿಸಿದರು. ಅಂದು ಭೇಟಿ ಮಾಡಿದವರು ಸಂಸ್ಥೆಯ ಲಿಪಿಕ ವರ್ಗದಲ್ಲಿ ದುಡಿದು ನಿವೃತ್ತಿಯ ಅಂಚಿಗೆ ಬಂದು ನಿಂತವರು. ಅವರು ಕುಲಾಧಿಪತಿಗೆ ಹತ್ತಿರದವರೋ ಅಥವಾ ಅವರ ಸುತ್ತಮುತ್ತಣ ಊರಿನವರೂ ಇದ್ದಿರಬೇಕು. ಹಾಗಾಗಿ ಕೆಲವೇ ಮಾತುಗಳಲ್ಲಿ ನಿವೃತ್ತಿಯಾಚೆಗೂ ಸೇವಾ ವಿಸ್ತರಣೆಯ ಬಯಕೆಯನ್ನು ಸೂಕ್ಷ್ಮವಾಗಿ ವ್ಯಕ್ತಪಡಿಸಿದರು. ಅದರೆ, ಕುಲಾಧಿಪತಿ ಡಾ.ರಾಮದಾಸ ಪೈ ಅವರು ಕ್ಷಣಕಾಲ ಮೌನ ತಾಳಿದರು. ಬಂದವರ ಕುಟುಂಬ, ಅದರ ವಿಸ್ತರಣೆ, ಮಕ್ಕಳು, ಅವರ ವಿದ್ಯಾಭ್ಯಾಸ, ಹಿರಿಯ ಮಗನ ಉದ್ಯೋಗ ಕುರಿತು ವಿಚಾರಿಸಿದರು. ಆ ಉದ್ಯೋಗಿ, ಬಾಲ್ಯದಲ್ಲಿ ತಮ್ಮ ಹಳ್ಳಿಯ ಬದುಕು ಎಷ್ಟು ಕಠೋರವಾಗಿತ್ತು ಎಂಬುದನ್ನೂ ಸಾದ್ಯಂತವಾಗಿ ವಿವರಿಸಿದರು. ಮದುವೆಯಾಗಿ, ಮನೆ ಕಟ್ಟಿಸಿ, ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಿ, ಅವರೊಲ್ಲಬ್ಬನಿಗೆ ಉದ್ಯೋಗ ದೊರಕಿರುವುದನ್ನೂ ತಿಳಿಸಿದರು. ಮಗಳಿಗೆ ಮದುವೆಯಾಗಿದ್ದೂ ಹೇಳಿದರು. ಕಡು ಕಷ್ಟದ ಹಿನ್ನೆಲೆಯಿಂದ ಬಂದವರು ಇಷ್ಟೆಲ್ಲಾ ಸಾಧಿಸಿದ್ದು ತಮ್ಮ ಸಂಸ್ಥೆ ಸೇರಿದ ಮೇಲಲ್ಲವೇ ಎಂದು ಖಚಿತ ಪಡಿಸಿಕೊಂಡು ಸಂತೃಪ್ತಿಯ ನಗೆ ಬೀರಿದರು. ‘ನಿಮಗೆ ಸಮೃದ್ಧಿ ಬಂದಿರುವುದು ಸಂತಸವಾಗಿದೆ. ಇಂಥದೇ ಸಮೃದ್ಧಿ ಸಾಧಿಸುವ ಅವಕಾಶ ಮತ್ತೊಬ್ಬ ಕಡುಕಷ್ಟದ ಹಿನ್ನೆಲೆಯವನಿಗೂ ದೊರಕಬೇಕಲ್ಲವೇ’ ಎಂದಾಗ, ಅಲ್ಲಿದ್ದು ಕೇಳಿಸಿಕೊಳ್ಳುತ್ತಿದ್ದ ಎಲ್ಲರೂ ಈ ತರ್ಕಕ್ಕೆ ತಲೆದೂಗಲೇ ಬೇಕಾಯಿತು. ಆಗುತ್ತದೆ ಅಥವಾ ಇಲ್ಲ ಎಂದು ಒಂದೇ ಶಬ್ದದಲ್ಲಿ ಹೇಳಿ ಬಿಡಬಹುದಿತ್ತು. ಹಾಗೆ ಹೇಳಿದ್ದರೆ, ಅದನ್ನು ಪ್ರಶ್ನಿಸುವವರು ಯಾರೂ ಇರಲಿಲ್ಲ. ಆದರೆ, ಆ ವ್ಯಕ್ತಿ ಹೇಳಿದ್ದನ್ನು ಸಾವಧಾನದಿಂದ ಕೇಳಿ, ತಮ್ಮ ಅಭಿಪ್ರಾಯವನ್ನು ಕೆಲವೇ ಮಾತುಗಳಲ್ಲಿ ಅರ್ಥಪೂರ್ಣವಾಗಿ ಹೇಳುವ ಮೂಲಕ ತಮ್ಮ ಸಾಮಾಜಿಕ ಬದ್ಧತೆಯನ್ನು ಮೆರೆದರು. ಸಾವಧಾನದ ಕೇಳ್ಮೆಯೂ ಅವರ ದೊಡ್ಡ ಗುಣವಾಗಿತ್ತು. ವ್ಯಕ್ತಿ ಕಾಳಜಿಯ ಜೊತೆಗೆ ಸಮಷ್ಟಿ ಪ್ರಜ್ಞೆಯನ್ನು ರೂಪಿಸುವುದಕ್ಕೆ ಉದಾಹರಣೆ ಇದಕ್ಕಿಂತ ಬೇರೇನು ಬೇಕು.
ಹಾಗೆಯೇ ಅವರನ್ನು ಹಲವು ಸಂಸ್ಥೆಗಳ ರೂವಾರಿ ಎಂದು ಹೊಗಳಲಾಗುತ್ತದೆ. ಆದರೆ, ಅವರ ಸಾಧನೆ ಸಂಸ್ಥೆಗಳ ಸ್ಥಾಪನೆಗಿಂತಲೂ ಮಿಗಿಲು. ಅವರು ರೂಪಿಸಿದ್ದು ಸಂಸ್ಥೆಗಳನ್ನು ಮಾತ್ರವಲ್ಲ, ಅವರು ಹಟ ಹಿಡಿದು ಸಾಧಿಸಿದ್ದು ಹೋರಾಡಿದ್ದು ಸಂಸ್ಥೆಗಳನ್ನು ಸ್ಥಾಪಿಸುವ ಹಕ್ಕಿನ ಬಗ್ಗೆ. ಅವರು ಪರಿಚಯಿಸಿದ್ದು ಶಿಕ್ಷಣ ಸಂಸ್ಥೆಗಳು ಹಾಗೂ ಅವುಗಳ ಸ್ಥಾಪನೆಗೆ ಅಗತ್ಯವಿದ್ದ ವಾತಾರವಣವನ್ನು. ಅವರು ಕೈಗೆತ್ತಿಕೊಂಡ ಕಾನೂನು ಹೋರಾಟದ ಫಲವಾಗಿಯೇ ಇಂದು ಭಾರತದಲ್ಲಿ ವಿಶ್ವದರ್ಜೆಯ ವಿಶ್ವವಿದ್ಯಾಲಯಗಳು ತಲೆಯೆತ್ತಲು ಸಾಧ್ಯವಾಗಿದೆ. ಇವರ ಆಲೋಚನಾ ಕ್ರಮದ ಕುರಿತು ಆಗ ಅನೇಕರಿಗೆ ಅಸಮಧಾನವಿದ್ದದ್ದು ನಿಜವಾದರೂ, ಅವರ ನಿಲುವೇ ಸಮಪರ್ಕವಾದ್ದದ್ದು ಎಂದು ಕಾಲವೇ ಹೇಳುತ್ತದೆ. ಈಗ ಅಂದರೆ, 2025ರಲ್ಲಿ ದೇಶದಾಚೆಗೂ ಭಾರತದ ಶಿಕ್ಷಣ ಸಂಸ್ಥೆಗಳಿರಬೇಕು ಎಂಬ ಆಶಯವಿನ್ನೂ ದೊಡ್ಡ ಪ್ರಮಾಣದಲ್ಲಿ ಕಾರ್ಯರೂಪಕ್ಕಿಳಿಯಬೇಕಿದೆ. ಆದರೆ, 25 ವರ್ಷಗಳಿಗಿಂತಲೂ ಹಿಂದೆಯೇ ಅಂದರೆ 1999ರ ಸುಮಾರಿನಲ್ಲಿಯೇ ಕಾರ್ಯಸಾಧು ಮಾಡಿ ತೊರಿಸಿದ್ದರು. ದುಬೈ, ಆಂಟಿಗುವಾ, ನೇಪಾಳ ಹಾಗೂ ಮಲೇಷಿಯಾಗಳಲ್ಲಿ ಕಾಲೇಜುಗಳನ್ನು ಹಾಗೂ ವಿಶ್ವವಿದ್ಯಾಲಯಗಳನ್ನು ಕಟ್ಟಿದ ಕೀರ್ತಿ ಇವರಿಗೇ ಸಲ್ಲಬೇಕು. ದುಬೈನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿದವರಲ್ಲಿ ಮೊದಲಿಗರು ಇವರು! ಹಾಗೆಯೇ ಮಲೇಷಿಯಾದಲ್ಲೂ. ಆ ದೇಶದಲ್ಲಿರುವ ವೈದ್ಯರಲ್ಲಿ ಬಹುತೇಕರು ಮಣಿಪಾಲದ ಸಂಸ್ಥೆಗಳಲ್ಲಿ ಓದಿದವರೇ.
ಡಾ.ರಾಮದಾಸ ಪೈ ಹಾಗೂ ಅವರ ಆಲೋಚನಾ ಕ್ರಮ, ಅವರಿದ್ದ ಕಾಲಕ್ಕಿಂತಲೂ ತುಂಬ ಮುಂದಿತ್ತು. ಏಕಕಾಲಕ್ಕೆ ಅಪ್ರತಿಮ ಪ್ರತಿಭಾವಂತರಿಗೂ ಹಾಗೂ ಸಾಧಾರಣರಿಗೂ, ಬಡವ-ಬಲ್ಲಿದರಿಗೂ, ದೇಶಿಯರು-ವಿದೇಶಿಯರಿಗೂ ಅವಕಾಶ ಕೊಡಲು ಖಾಸಗಿ ಶಿಕ್ಷಣ ಸಂಸ್ಥೆಗಳು ಮುಂದಾಗಬೇಕು ಎಂಬುದು ಅವರ ನಿಯಮವಾಗಿತ್ತು. ಈ ಸಮತೋಲನ ಕಾಯ್ದುಕೊಳ್ಳುವುದು ಅತಿ ಮಹತ್ವದ ವಿಚಾರವಾಗಿತ್ತು. ಇದನ್ನು ತಮ್ಮ ಜೀವನ ಬಹುದೊಡ್ಡ ತತ್ವ ಎಂದೇ ಭಾವಿಸಿದ್ದರು. ಈ ಸಮತೋಲದ ಸೂತ್ರದಿಂದಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಆರ್ಥಿಕವಾಗಿ ಸಬಲವಾಗುತ್ತವೆ, ಆಗ ಮಾತ್ರ ಸಾಮಾಜಿಕ ಬದ್ಧತೆಯನ್ನು ಕಾರ್ಯರೂಪಕ್ಕಿಳಿಸಬುಹುದು ಎಂಬ ಅವರ ನಂಬಿಕೆ ಈಗಲೂ ಸತ್ಯವಾಗಿದೆ. ವಿದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಆಲೋಚನೆ ಟಿಸಿಲೊಡೆದಿದ್ದು ಮಣಿಪಾಲದ ಸಂಸ್ಥೆಗಳಲ್ಲಿಯೇ. ಆಗಿನ ಪದವಿಪೂರ್ವ ಕೋರ್ಸುಗಳಲ್ಲಿ ಒಂದಷ್ಟು ವಿದ್ಯಾರ್ಥಿಗಳು ವಿದೇಶಿ ಮೂಲದವರಾಗಿರುತ್ತಿದ್ದರು. ಅವರಲ್ಲಿ ಬಹುತೇಕರು ಭಾರತೀಯ ಸಂಜಾತರಾದರೆ, ಇನ್ನೂ ಕೆಲ ವಿದೇಶಿಯರು ತಮ್ಮ ನೆಲದಲ್ಲಿ ಇಂಥ ಅತ್ಯುತ್ತಮ ಶಿಕ್ಷಣಾವಕಾಶ ಇಲ್ಲದಿದ್ದರಿಂದ ಬಂದವರು. ಇಂಥ ಸನ್ನಿವೇಶದಲ್ಲಿ ಹೊಳೆದಿದ್ದೇ ವಿದ್ಯೆಯನ್ನು ಅವರವರ ಮನೆ ಬಾಗಿಲಿಗೆ ತಲುಪಿಸುವ ಸಾಧ್ಯತೆಗಳನ್ನು ಯೋಚಿಸಿ, ಕಾರ್ಯಗತಗೊಳಿಸಿದರು. ಇದಕ್ಕಾಗಿ ಅವರು ಬಹುದೊಡ್ಡ ಕಾನೂನು ಹೋರಾಟವನ್ನೇ ಮಾಡಬೇಕಾಯಿತು. ಒಬ್ಬ ವ್ಯಕ್ತಿಯ ಹೋರಾಟದ ಹಾದಿ, ಕಾಲಾಂತರದಲ್ಲಿ ಹೆದ್ದಾರಿಯಾಗಿ ಬದಲಾಯಿತು. ಒಬ್ಬರ ಆಲೋಚನಾ ಕ್ರಮ ಸಮಾಜದ ಮುಖ್ಯವಾಹಿಯಾಗಿ ಪ್ರವಹಿಸತೊಡಗಿತು. ಹೋರಾಟದಲ್ಲಿ ಬರುವ ಅಡೆತಡೆಗಳು, ಸೋಲಿನ ಭೀತಿಗಳಾಚೆಗೇ ಗೆಲುವಿದೆ ಎಂಬ ನಂಬಿಕೆ ಅವರಲ್ಲಿ ಗಾಢವಾಗಿತ್ತು. ತಮ್ಮ ತಂದೆ ಡಾ. ಟಿಎಂಎ ಪೈ ಅವರ ವಿಶ್ವವಿದ್ಯಾಲಯವೊಂದನ್ನು ಕಟ್ಟಬೇಕು ಎಂಬ ಕನಸನ್ನು ನನಸು ಮಾಡುವ ಹೊಣೆ ಹೊತ್ತರು. ತಮ್ಮ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಡಾ.ರಾಮದಾಸ ಪೈ ಅವರು ಕಟ್ಟಿದ್ದು ಐದು ವಿಶ್ವವಿದ್ಯಾಲಯಗಳು, ಹತ್ತು ಕ್ಯಾಂಪಸ್ಸುಗಳು. ಬರೀ ದೇಶದಲ್ಲಲ್ಲ, ವಿದೇಶಗಳಲ್ಲೂ. ಇವುಗಳಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು 20 ಸಾವಿರಕ್ಕೂ ಹೆಚ್ಚು ಬೋಧಕರು ಹಾಗೂ ಸುಮಾರು 3 ಲಕ್ಷಕ್ಕೂ ಅಧಿಕ ಹಳೆಯ ವಿದ್ಯಾರ್ಥಿಗಳಿದ್ದಾರೆ. ಅವರು ಆರಂಭಿಸಿದ ಮಣಿಪಾಲ ಆಸ್ಪತ್ರೆ ಈಗ ದೇಶದ ಮಹತ್ವದ ಆರೋಗ್ಯ ಸಂಸ್ಥೆಯಾಗಿ ಹೊರಹೊಮ್ಮಿದೆ. 38 ಆಸ್ಪತ್ರೆಗಳ ಈ ಸಮೂಹ ವರ್ಷಕ್ಕೆ 70 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ. ಈ ಕಾರಣಕ್ಕಾಗಿಯೇ ಭಾರತ ಸರ್ಕಾರ 2011ರಲ್ಲಿ ಪದ್ಮಭೂಷಣ ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.