ಪಿ.ವಿ. ನಾರಾಯಣ
ಪಿ.ವಿ.ನಾರಾಯಣ ಅವರ ಹೆಸರಿನ ಪ್ರಾರಂಭದಲ್ಲಿರುವ ‘ಪಿ’ ಎನ್ನುವುದು ಹೈದರಾಲಿಯ ಆಸ್ಥಾನದಲ್ಲಿ ‘ಅಮಾತ್ಯ’ನಾಗಿದ್ದ, ಪಾಂಡಿತ್ಯಕ್ಕೆ ಹೆಸರಾಗಿ ಹಲವು ಕನ್ನಡ ಸಂಸ್ಕೃತ ಕೃತಿಗಳನ್ನು ರಚಿಸಿದ್ದ ಕವಿ ವೆಂಕಪ್ಪಯ್ಯನ ಮನೆತನ ‘ಪ್ರಧಾನ್’ ಅನ್ನು ಸಂಕೇತಿಸುತ್ತದೆ. ಅಮಾತ್ಯನಾಗಿಯೂ ‘ಶ್ರೀರಾಮ ಕಥಾಮೃತ’ದಂಥ ಬೃಹತ್ ಕಾವ್ಯವನ್ನು ರಚಿಸಿದ ಪ್ರಧಾನ್ ವೆಂಕಪ್ಪಯ್ಯನವರ ವಂಶಕ್ಕೆ ಸೇರಿದವರು ನಾವು ಎಂದು ನಾರಾಯಣ ಸಂದರ್ಭ ಬಂದಾಗಲೆಲ್ಲ ಹೆಮ್ಮೆಯಿಂದ ಚಟಾಕಿ ಹಾರಿಸುತ್ತಿದ್ದುದುಂಟು. ವೆಂಕಪ್ಪಯ್ಯನ ಆ ಕೃತಿಯನ್ನು ನಾರಾಯಣ ಅವರೇ ಇತ್ತೀಚೆಗೆ ‘ಯುದ್ಧಕಾಂಡ’ ಹೆಸರಿನಲ್ಲಿ ಸಂಪಾದಿಸಿದರು. 82 ವರ್ಷಗಳನ್ನು ಪೂರೈಸಿ ಮುನ್ನಡೆದಿದ್ದ ನಾರಾಯಣ ಕನ್ನಡದ ಬಹುದೊಡ್ಡ ವಿದ್ವತ್ ಪ್ರತಿಭೆಯಾಗಿದ್ದರು. ವಿಮರ್ಶೆ, ಸಂಶೋಧನೆ, ಪ್ರವಾಸ ಸಾಹಿತ್ಯ, ಕಾದಂಬರಿ, ನಿಘಂಟು, ಅನುವಾದ, ಸಂಪಾದನೆ ಪ್ರಕಾರಗಳಲ್ಲಿ 80ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದವರು. ವಿಜಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ನಾರಾಯಣ ಕನ್ನಡದ ಅತ್ಯುತ್ತಮ ಮೇಷ್ಟ್ರುಗಳಲ್ಲಿ ಒಬ್ಬರೆಂದು ಹೆಸರಾದವರು. ನಿವೃತ್ತರಾಗಿ ಮೂರು ದಶಕಗಳಾದರೂ ರಾಜ್ಯದಾದ್ಯಂತ ಮತ್ತು ದೇಶ ವಿದೇಶಗಳಲ್ಲಿರುವ ವಿದ್ಯಾರ್ಥಿಗಳು ಅವರೊಂದಿಗೆ ಇತ್ತೀಚಿನವರೆಗೂ ಸಂಪರ್ಕವಿಟ್ಟುಕೊಂಡಿದ್ದುದೇ ಅವರ ಜನಪ್ರಿಯತೆಗೆ ಸಾಕ್ಷ್ಯ.
ವಚನ ಸಾಹಿತ್ಯ ಪಿ.ವಿ. ನಾರಾಯಣ ಅವರಿಗೆ ಅತ್ಯಂತ ಪ್ರಿಯವಾದದ್ದು. ‘ಮನುಷ್ಯನ ಬದುಕನ್ನು ತಿದ್ದುವ, ಒಡೆದುಹೋಗಿರುವ ಮನಸ್ಸುಗಳನ್ನು ಬೆಸುಗೆ ಹಾಕುವ ಶಕ್ತಿ ವಚನ ಸಾಹಿತ್ಯಕ್ಕಿದೆ. ಆದರೆ, ಅದನ್ನು ಒಳಹೊಕ್ಕು ನೋಡುವ, ಅರ್ಥೈಸುವ, ಸರಳವಾಗಿ ಜನಸಾಮಾನ್ಯರಿಗೆ ಮುಟ್ಟಿಸುವ ಕೆಲಸ ಆಗಿಲ್ಲ. ಈ ಕೆಲಸವನ್ನು ಮಾಡಬೇಕಾದ ಮಠಾಧಿಪತಿಗಳು ಮತ್ತು ಸಂಶೋಧಕ-ವಿದ್ವಾಂಸರು ಹೆಸರಿನ ಹಿಂದೆಯೂ ಸಂಪಾದನೆಯ ಹಿಂದೆಯೂ ಬಿದ್ದಿದ್ದಾರೆ’ ಎಂದು ಭಾಷಣ ಗಳಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದುದುಂಟು. ಈ ಅಸಮಾಧಾನ ಪ್ರಕಟಣೆಯ ಒಂದು ಭಾಗವಾಗಿಯೇ 12ನೇ ಶತಮಾನದಲ್ಲಿ ರಾಜಕಾರಣದ ಮೇಲೆ ಧರ್ಮ ಸವಾರಿ ಮಾಡಲು ಹೊರಟಿದ್ದರ ಪರಿಣಾಮ ಏನಾಗಿತ್ತು ಎನ್ನುವುದನ್ನು ವರ್ತಮಾನದ ಸಂದರ್ಭಕ್ಕೆ ಅನ್ವಯಿಸುವಂತೆ ‘ಧರ್ಮಕಾರಣ’ವನ್ನು ಒಂದು ರೂಪಕ ಶಕ್ತಿಯ ಕಾದಂಬರಿಯಾಗಿ ರೂಪಿಸಿದ್ದರು.ದುರದೃಷ್ಟವಶಾತ್ ಅದು ಕೆಲವರ ಕೆಂಗಣ್ಣಿಗೆ ಗುರಿಯಾಗಿ ನಿಷೇಧಕ್ಕೊಳಗಾಯಿತು.
ಕಾದಂಬರಿ ನಿಷೇಧದ ಶಿಕ್ಷೆಗೆ ಒಳಗಾಗಿದ್ದು ಅವರೊಳಗಿದ್ದ ಸಾತ್ವಿಕ ಸಿಟ್ಟನ್ನು ತಣ್ಣಗಾಗಿಸಲು
ಸಾಧ್ಯವಿರಲಿಲ್ಲ. ಆದ್ದರಿಂದ ವಚನ ಸಾಹಿತ್ಯವನ್ನು ಕುರಿತು ವೈಚಾರಿಕ ಒಳನೋಟವಿರುವ ಬಹು ಆಯಾಮಗಳ ಲೇಖನಗಳನ್ನು ಬರೆದು ಪುಸ್ತಕಗಳನ್ನು ಹೊರತಂದರು. ಬಳ್ಳಿಗಾವೆ, ಕಾಯಕತತ್ವ, ವಚನ ಚಳವಳಿ, ಉರಿಲಿಂಗ ಪೆದ್ದಿ, ವಚನ ಸಾಹಿತ್ಯ, ವಚನ ವ್ಯಾಸಂಗ, ವಚನ ನಿರ್ವಚನ, ವಚನ ಪರಿಸರ, ವಚನ ಸಮಗ್ರ, ವಚನ ಸಮಸ್ತ-ಇವೆಲ್ಲ ವಚನ ಸಾಹಿತ್ಯಕ್ಕೆ ಮಾತ್ರವಲ್ಲ, ನಾಡಿನ ಸಾಂಸ್ಕೃತಿಕ ಮತ್ತು ವೈಚಾರಿಕ ಶ್ರೀಮಂತಿಕೆಗೆ ಅತ್ಯುತ್ತಮ ಕೊಡುಗೆಯಾಗಬಲ್ಲ ಕೃತಿಗಳು. ವಿದ್ಯಾರ್ಥಿಗಳಿಂದ ಹಿಡಿದು ಕಾವ್ಯಾಸಕ್ತ ಸಹೃದಯರ ವರೆಗೆ ಹಳಗನ್ನಡದ ಓದು ಸುಲಲಿತವಾಗಿಯೂ ಪ್ರಿಯವಾಗುವಂತೆಯೂ ಇರಬೇಕೆಂದು ಬಯಸಿ ಅದಕ್ಕೆ ಅನುಕೂಲವಾಗುವಂತೆ ಐದು ವಿಭಿನ್ನ ಬಗೆಯ ನಿಘಂಟುಗಳನ್ನು ನಾರಾಯಣ ಕನ್ನಡಕ್ಕೆ ಕೊಟ್ಟಿದ್ದಾರೆ. ಇವು, ಅವರ ಹಳಗನ್ನಡದ ತಲಸ್ಪರ್ಶಿ ಅಧ್ಯಯನದ ಸಾಕ್ಷಿಗಲ್ಲುಗಳು. ಅಪರೂಪದ ಹಳಗನ್ನಡ ಕೃತಿಗಳನ್ನು ಮತ್ತು ಮಹತ್ವದ ಇಂಗ್ಲಿಷ್ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ.
ಸಂಪಾದನೆ ಮತ್ತು ಸಂಶೋಧನೆಯ ವಿಚಾರದಲ್ಲಿ ಪರಾವಲಂಬನೆಯನ್ನು ಬಯಸದೆ ಒಂಟಿ ಸಲಗದಂತೆ ನುಗ್ಗಿ ಸಾಹಿತ್ಯಲೋಕ ಬೆರಗಾಗುವಂಥ ಕೆಲಸವನ್ನು ನಾರಾಯಣ ಮಾಡಿದ್ದಾರೆ. ಕೈ ಬೆರಳುಗಳಿಂದ ಬರೆಯುವುದು ಕಷ್ಟವಾಗುತ್ತಿದೆ ಎನಿಸಿದಾಗ ಕಂಪ್ಯೂಟರಿನ ಕೀಲಿಮಣೆಯ ಮೇಲೆ ಗುಂಡಿಯೊತ್ತುವುದನ್ನು ಕಲಿತು ಬೃಹತ್ ಕೃತಿಗಳನ್ನು ಹೊರತಂದು ಇಳಿವಯಸ್ಸಿನ ಸಮಕಾಲೀನರನೇಕರ ಹುಬ್ಬು ಮೇಲೇರುವಂತೆ ಮಾಡಿದ್ದಾರೆ. ಪಿ.ವಿ. ನಾರಾಯಣ ಭೌತಿಕವಾಗಿ ಈಗ ನಮ್ಮೆದುರಿಗಿಲ್ಲದಿದ್ದರೂ ಅಧ್ಯಾಪಕರು, ಸಂಶೋಧಕರು, ವಿಮರ್ಶಕರು, ವಿದ್ವಾಂಸರು ಮತ್ತೆ ಮತ್ತೆ ತಮ್ಮ ಕೊರತೆಗಳನ್ನು ತುಂಬಿಕೊಳ್ಳಲು, ಹೊಸ ಹೊಳಹುಗಳನ್ನು ಪಡೆಯಲು ಆಶ್ರಯಿಸಲೇಬೇಕಾದ ಮಹತ್ವದ ಕೃತಿಗಳ ಮೂಲಕ, ಕನ್ನಡ ಚಳವಳಿಗಾರರಾಗಿ ನಡೆಸಿದ ಧೀಮಂತ ಹೋರಾಟಗಳ ಮೂಲಕ, ಬಿ.ಎಂ.ಶ್ರೀ. ಪ್ರತಿಷ್ಠಾನವನ್ನು ನಾಡಿನ ಸಾಂಸ್ಕೃತಿಕ ಆಸ್ತಿಯಾಗುವಂತೆ ಕಟ್ಟುವ ಮೂಲಕ ಜೀವಂತವಾಗಿದ್ದಾರೆ. ಕನ್ನಡದ ಹಿರಿಯ ವಿದ್ವಾಂಸರಾದ ಪ್ರೊ. ಅ.ರಾ. ಮಿತ್ರ ಒಂದು ಕಡೆ ಹೇಳಿರುವ ಮಾತು: ‘ಕನ್ನಡ ಚಿಂತಕರ ಚಾವಡಿಯ ಟಂಕಸಾಲೆ ತೆಗೆದರೆ ಅದರಲ್ಲಿ ಪ್ರಧಾನವಾಗಿ ಹೆಕ್ಕಬೇಕಾದ ನಾಣ್ಯವೆಂದರೆ ಡಾ. ಪಿ.ವಿ. ನಾರಾಯಣ. ವಿದ್ವಾಂಸರಿಗೆ ಸದಾ ಸಹಾಯಕವಾಗಿಯೇ ಇರುವ ಆಪ್ತರು ಮತ್ತು ಸ್ನೇಹಜೀವಿ’. ಅವರ ಪ್ರೀತಿ ಸ್ನೇಹಗಳ ಮಾಧುರ್ಯವನ್ನು ಹಿರಿಯ ಕಿರಿಯ ವಿದ್ವಾಂಸರನೇಕರು ಸವಿದಿದ್ದಾರೆ. ⇒v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.