ADVERTISEMENT

ವ್ಯಕ್ತಿ ವಿಶೇಷ: ಮನುಷ್ಯ ಪ್ರೀತಿಯ ಸಂತ ನೂತನ ಪೋಪ್ ಲಿಯೊ14

ವಿವೇಚನಾಯುಕ್ತ ನಿರ್ಣಯದ ಕಾರಣದಿಂದಾಗಿ ಎಲ್ಲರಿಗೂ ಕೇಂದ್ರಬಿಂದುವಾಗಿ ಕಾಣಿಸುತ್ತಿದ್ದ ರಾಬರ್ಟ್‌ ಪ್ರಿವೊಸ್ಟ್‌ ಅವರು ಶಾಂತ ಮತ್ತು ವಿನಮ್ರ ಮೂರ್ತಿ

ಮುಸ್ತಾಫ ಕೆ.ಎಚ್.
Published 10 ಮೇ 2025, 0:30 IST
Last Updated 10 ಮೇ 2025, 0:30 IST
<div class="paragraphs"><p>ನೂತನ ಪೋಪ್ ಲಿಯೊ14</p></div>

ನೂತನ ಪೋಪ್ ಲಿಯೊ14

   

ವಿವೇಚನಾಯುಕ್ತ ನಿರ್ಣಯ ಮತ್ತು ಪ್ರಶ್ನಿಸುವ ಮನೋಧರ್ಮದ ಕಾರಣದಿಂದಾಗಿ ಎಲ್ಲರಿಗೂ ಕೇಂದ್ರಬಿಂದುವಾಗಿ ಕಾಣಿಸುತ್ತಿದ್ದ ರಾಬರ್ಟ್‌ ಪ್ರಿವೊಸ್ಟ್‌ ಅವರು ಶಾಂತ ಮತ್ತು ವಿನಮ್ರ ಮೂರ್ತಿ. ಜೀವನ ಪ್ರೀತಿ ಹೊಂದಿರುವ 69 ವರ್ಷ ವಯಸ್ಸಿನ ಅವರು ಕ್ಯಾಥೋಲಿಕಾ ಧರ್ಮಸಭೆಗೆ ಪೋಪ್‌ ಫ್ರಾನ್ಸಿಸ್‌ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ

–––

ADVERTISEMENT

ಕಾರ್ಡಿನಲ್‌ ಡಾಮಿನಿಕ್ ಮಾಂಬಟ್ಟಿನ್ ಅವರು, ‘ಹಬೆಮಾಸ್‌ ಪಾಪ್ಪಾನ್‌’ (ಹೊಸ ಪೋಪ್‌ ಸಿಕ್ಕರು) ಎಂದು ಘೋಷಿಸುತ್ತಿದ್ದಂತೆಯೇ ಸಂತ ಪೀಟರ್ಸ್‌ ಬೆಸಿಲಿಕಾದ ಮಧ್ಯದ ಬಾಲ್ಕನಿಯಲ್ಲಿ ಅ ವ್ಯಕ್ತಿ ಕೆಂಪು ಮತ್ತು ಬಿಳಿ ಮಿಶ್ರಿತ ಧಾರ್ಮಿಕ ಉಡುಪನ್ನು ಧರಿಸಿ ನಿಧಾನಗತಿಯ ಹೆಜ್ಜೆ ಇಡುತ್ತಾ ಮುಂದೆ ಬಂದರು. ಸಾಗರೋಪಾದಿಯ ಜನಸಮುದಾಯದ ಕಡೆಗೆ ಕೈ ಬೀಸುತ್ತಲೇ ಪ್ರೀತಿಯ ಹೂಮಳೆಯನ್ನೂ ಸುರಿಸಿದರು. ಅವರ ಮಂದಹಾಸವನ್ನು ಕಂಡ ಜನಸಾಗರದಲ್ಲಿ ಹರ್ಷೋದ್ಗಾರದ ಅಲೆ ಎದ್ದಿತು. ಆಗ ಆ ಬಾಲ್ಕನಿಯಲ್ಲಿ ಕಾಣಿಸಿದ್ದು ಅಪ್ಪಟ ಮನುಷ್ಯ ಪ್ರೀತಿಯ ವ್ಯಕ್ತಿತ್ವವೊಂದರ ಅನಾವರಣ.

ತಮ್ಮ ಕೈಹಿಡಿದು ಸರಿದಾರಿಯಲ್ಲಿ ಮುನ್ನಡೆಸಲು ಬಂದ ‘ಹೊಸ ಕುರುಬ’ನಲ್ಲಿ ಹೊಸ ಭರವಸೆಯ ಬೆಳಕು ಅಲ್ಲಿ ನೆರೆದಿದ್ದ ಜನಸ್ತೋಮಕ್ಕೆ ಕಂಡಿತು. 40 ಕೋಟಿಯಷ್ಟಿರುವ ಕ್ಯಾಥೋಲಿಕ್ ಕ್ರೈಸ್ತರ ಪರಮೋಚ್ಚ ಗುರು ಯಾರು ಎಂಬುದಕ್ಕೆ ಆ ಕ್ಷಣದಲ್ಲೇ ಉತ್ತರ ದಕ್ಕಿತು. ಅಮೆರಿಕದ ಕಾರ್ಡಿನಲ್‌ ರಾಬರ್ಟ್‌ ಪ್ರಿವೊಸ್ಟ್‌ ಎಂಬ ಅಪ್ಪಟ ಮನುಷ್ಯ ಪ್ರೀತಿಯ ವ್ಯಕ್ತಿಯನ್ನು 267ನೇ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು. ಪೋಪ್‌ ಲಿಯೊ–14 ಎಂಬ ನಾಮಧೇಯವನ್ನೂ ಆ ನಾಯಕನಿಗೆ ನೀಡಲಾಯಿತು.

1955 ಸೆಪ್ಟೆಂಬರ್‌ 14ರಂದು ಷಿಕಾಗೊದಲ್ಲಿ ಜನಿಸಿದ ರಾಬರ್ಟ್‌ ಪ್ರಿವೊಸ್ಟ್‌ ಎಂಬ ಬಾಲಕನಿಗೆ ಪ್ರಾಥಮಿಕ ಶಿಕ್ಷಣ ಮುಗಿಸುವ ಹೊತ್ತಿಗೆ ಏಸು ಕ್ರಿಸ್ತ ಪಡಿಮೂಡಿಸಿದ ಧರ್ಮ ಸಮತೆಯ ಹಾದಿಯಲ್ಲಿ ಮುನ್ನಡೆದು ಬಡವರ ಸೇವೆಗಾಗಿ ಬದುಕನ್ನು ಮುಡಿಪಾಗಿಡಬೇಕೆಂಬ ಹಂಬಲ ಒಡಮೂಡಿತು. ಹಾದಿ ಕಾಣಿಸಿದ್ದು ಸಂತ ಅಗಸ್ಟೀನರ ಸಭೆಯನ್ನು ಸೇರುವುದಾಗಿತ್ತು. ಅದೇ ಸಭೆಯಲ್ಲಿದ್ದ ಈ ಹಿಂದಿನ ಪೋಪ್‌ ಫ್ರಾನ್ಸಿಸ್‌ರಂತೆ ಬಡವರ ಸೇವೆ ಮಾಡುವ, ಜನರೊಂದಿಗೆ ಬೆರೆಯುವ, ಅವರಿಗೆ ಸ್ವಾಂತನ ಹೇಳುವ, ಭಕ್ತಿ ಮಾರ್ಗದಲ್ಲಿ ಕಾಯಕಯೋಗಿಯಂತೆ ಬದುಕುವ ಗುಣಶೀಲತೆಯನ್ನು ತಮ್ಮ ವ್ಯಕ್ತಿತ್ವದೊಳಗೆ ಜೀವತಂತುವಾಗಿ ತುಂಬಿಕೊಂಡರು.

1985ರಿಂದ 1998ರವರೆಗೆ ಪೆರು ದೇಶದಲ್ಲಿ ಪರಿಶ್ರಮದ ಮಿಷನರಿಯಾಗಿ ಸೇವೆಗೈದರು. ಧರ್ಮಕೇಂದ್ರದ ಗುರುಗಳಾಗಿ, ಧರ್ಮಕ್ಷೇತ್ರದ ಅಧಿಕಾರಿಗಳಾಗಿ, ಗುರುಮಠದ ಬೋಧಕರಾಗಿ, ಧರ್ಮಾಧ್ಯಕ್ಷರಾಗಿ ಆರೋಗ್ಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದರು. ಬಾಲ್ಯದಲ್ಲೇ ಓದಿನಲ್ಲಿ ಮುಂದಿದ್ದ ರಾಬರ್ಟ್‌ ಪ್ರಿವೊಸ್ಟ್‌ ಅವರು ಮಿಲನೋವಾ ವಿಶ್ವವಿದ್ಯಾಲಯದಿಂದ, ಕ್ಯಾಥೋಲಿಕಾ ದೈವ ಶಾಸ್ತ್ರ ಸಂಘ ಹಾಗೂ ಸಂತ ಥಾಮಸರ ಗೊಂಥಿಪಿಕಲ್‌ ವಿಶ್ವವಿದ್ಯಾಲಯದಿಂದ ಪದವಿಗಳನ್ನು ಪಡೆದವರು.

ಜೀವನ ಪ್ರೀತಿಯ ಕಾರ್ಡಿನಲ್‌ ರಾಬರ್ಟ್‌ ಪ್ರಿವೊಸ್ಟ್‌ ಅವರಲ್ಲಿ ಧಾರ್ಮಿಕ ನಿಷ್ಠೆಯೂ ಅಧಿಕವಾಗಿತ್ತು. 1977ರಲ್ಲಿ ಗಣಿತ ಶಾಸ್ತ್ರದಲ್ಲಿ ಪದವಿ ಪಡೆದ ಅವರು ಜೊತೆಗೆ ತತ್ವಶಾಸ್ತ್ರವನ್ನೂ ಕಲಿತರು. ಗುರುಮಠಕ್ಕೆ ಸೇರಿದ ಅವರು, 1985ರಲ್ಲಿ ಅಂತಿಮ ವ್ರತ ವಾಗ್ಧಾನವನ್ನು ಕೈಗೊಂಡರು. ದೈವಶಾಸ್ತ್ರ ಹಾಗೂ ಕಾನೂನು ಅಭ್ಯಾಸವನ್ನು ಮಾಡಿದ ಅವರು, ಧರ್ಮ ಮತ್ತು ಕಾನೂನುಗಳ ಕೈದೀವಿಗೆ ಹಿಡಿದು ಸಾಮಾಜಿಕ ಹಾಗೂ ಧಾರ್ಮಿಕ ಸಮತೋಲಿತ ಸಮಾಜವನ್ನು ರೂಪಿಸಲು ಸಾಧ್ಯ ಎಂಬ ದೂರದೃಷ್ಟಿಯ ಅಂಶವನ್ನು ಕಂಡುಕೊಂಡಂತೆ ತೋರುತ್ತದೆ.

ಕಾರ್ಡಿನಲ್‌ ರಾಬರ್ಟ್‌ ಪ್ರಿವೊಸ್ಟ್‌ ಅವರ ಸಂಶೋಧನಾ ಪ್ರಬಂಧವು ಸಂತ ಅಗಸ್ಟೀನರ ಸಭೆಯಲ್ಲಿ ಸ್ಥಳೀಯ ಪೂರ್ವಾಧಿಕಾರಿಯವರ ಪಾತ್ರಗಳನ್ನು ಶೋಧಿಸುವ ನೆಲೆಯಿಂದ ಕೂಡಿದೆ. ಧಾರ್ಮಿಕ ಆಡಳಿತದ ಬಗ್ಗೆ ಅವರಿಗೆ ಇರುವ ಆಳವಾದ ನಿರೂಪಣೆಗಳು ಅವರು ವಹಿಸಿಕೊಂಡಿರುವ ಧಾರ್ಮಿಕ ನಾಯಕತ್ವವನ್ನು ಮುನ್ನಡೆಸಲು ದಾರಿಬುತ್ತಿಯಾಗಿ ಸಿಕ್ಕಿವೆ ಎಂದು ಅವರ ಬೌದ್ಧಿಕ ಪ್ರೌಢಿಮೆಯನ್ನು ವ್ಯಾಖ್ಯಾನಿಸಲಾಗುತ್ತದೆ.

ಪೆರುವಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ವೇಳೆ ಧರ್ಮ ನಿರಪೇಕ್ಷವಾಗಿ ಎಲ್ಲರಿಗೂ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ತಾವೇ ಪ್ರಕೃತಿ ವಿಕೋಪ ನಡೆದ ಸ್ಥಳಕ್ಕೆ ಭೇಟಿ ನೀಡಿ ಔಷಧಿ, ವಸತಿ, ಅನ್ನ, ಆಹಾರಗಳನ್ನು ಒದಗಿಸಿ, ಅಂತಹ ಜನರೊಂದಿಗೆ ತಮ್ಮ ಬದುಕಿನ ಬಹುಭಾಗವನ್ನು ಕಳೆದವರು ಅವರು. ಮಾತೃಭಾಷೆಯೊಂದಿಗೆ ಸ್ಪ್ಯಾನಿಶ್‌, ಇಟಾಲಿಯನ್‌ ಭಾಷೆಯನ್ನೂ ಬಲ್ಲ ಅವರಿಗೆ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಅಪಾರ ಒಲವಿದೆ.

ಪೆರು ದೇಶದಲ್ಲಿ ಮಿಷನರಿಯಾಗಿ ಅವರು ಸಲ್ಲಿಸಿದ ಸೇವೆ ಗಮನಾರ್ಹವಾದದ್ದು. ಅಡುಗೆ ತಯಾರಿಸಿ ಇತರರಿಗೆ ಉಣಬಡಿಸಿ ಸಂತೋಷಪಡುವ ರಾಬರ್ಟ್‌ ಪ್ರಿವೊಸ್ಟ್‌ ಅವರಿಗೆ ವಿಶಿಷ್ಟಬಗೆಯ ಆಹಾರ ಖಾದ್ಯಗಳನ್ನು ತಯಾರಿಸುವುದು ಬಲು ಪ್ರೀತಿಯ ಕಾರ್ಯ. ಪೆರುವಿನಲ್ಲಿ ನಡೆದ ಧರ್ಮಾಧ್ಯಕ್ಷರ ಸಮ್ಮೇಳನದಲ್ಲಿ ಮಹತ್ವದ ಪಾತ್ರವಹಿಸಿದ್ದ ಅವರು, ಪೆರು ದೇಶದ ರಾಜಕೀಯ ಪ್ರಕ್ಷುಬ್ಧ ವಾತಾವರಣದ ನಡುವೆ ಧಾರ್ಮಿಕ ಆಯಾಮದ ಸ್ಥಿರತೆಯೊಂದನ್ನು ನೀಡಿದವರು. ರಾಜಕೀಯ ಏರಿಳಿತಗಳ ನಡುವೆ ಧರ್ಮಸಭೆಯ ಏಕತೆ ಮತ್ತು ಸ್ಥಿರತೆಗೆ ಶ್ರಮಿಸುವಲ್ಲಿ ಅವರ ಪಾತ್ರ ಮುಖ್ಯವಾದದ್ದು.

ಸಂತ ಅಗಸ್ಟೀನ್‌ ಸಭೆಯ ಮುಖ್ಯಸ್ಥರಾಗಿ 12 ವರ್ಷಗಳ ಸೇವೆಯನ್ನು ಸಲ್ಲಿಸಿದ ನಂತರ 2015ರಿಂದ ಪೆರುದೇಶದ ಚಿಕ್ಲಾಯೋ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. 2023ರಲ್ಲಿ ಪೋಪ್‌ ಫ್ರಾನ್ಸಿಸರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿ ಕಾರ್ಡಿನಲ್ ಪದವಿಗೆ ಏರಿದರು. ಬಿಷಪ್‌ಗಳ ಪ್ರಿಪೆಕ್ಟ್‌ ಡೈಕ್ಯಾಸ್ಟಿಯೋ ಆಗಿ ನೇಮಕಗೊಳ್ಳುವ ಮೂಲಕ ವಿಶ್ವದಾದ್ಯಂತ ಬಿಷಪ್‌ಗಳ ಆಯ್ಕೆಯನ್ನು ಮಾಡುವ ಮಾರ್ಗದರ್ಶಕರಾಗಿಯೂ ಅವರು ಕೆಲಸ ಮಾಡಿದರು.

ವಿವೇಚನಾಯುತ ನಿರ್ಣಯ ಮತ್ತು ಪ್ರಶ್ನಿಸುವ ಮನೋಧರ್ಮದ ಕಾರಣದಿಂದಾಗಿ ಎಲ್ಲರ ಕೇಂದ್ರಬಿಂದುವಾಗಿ ಕಾಣಿಸುತ್ತಿದ್ದ ರಾಬರ್ಟ್‌ ಪ್ರಿವೊಸ್ಟ್‌ ಅವರು ಶಾಂತ ಮತ್ತು ವಿನಮ್ರ ಮೂರ್ತಿ.
ತಮ್ಮ ಜೀವನದ ಅಧಿಕ ಕಾಲವನ್ನು ಮಿಷನರಿಯಾಗಿ ಕಳೆದ 69 ವರ್ಷದ ಕಾರ್ಡಿನಲ್ ರಾಬರ್ಟ್‌ ಪ್ರಿವೊಸ್ಟ್‌ ಅವರು ಕ್ಯಾಥೋಲಿಕಾ ಧರ್ಮಸಭೆಗೆ ಪೋಪ್‌ ಫ್ರಾನ್ಸಿಸರ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. 

13ನೇ ಶತಮಾನದಲ್ಲಿ ಪೋಪ್‌ 14ನೇ ಅಲೆಕ್ಸಾಂಡರ್‌ ಅವರ ನಂತರ ಪೋಪ್‌ ಹುದ್ದೆಗೆ ಏರಿದ 2ನೇ ಅಗಸ್ಟೀನಿಯನ್‌ ಸಭೆಯ ವಕ್ತಾರರಾಗಿದ್ದಾರೆ ಅವರು.

ಪೋಪ್‌ ಹುದ್ದೆ ಅಲಂಕರಿಸುವ ಮುನ್ನ ಅವರು ವ್ಯಾಟಿಕನ್‌ನ ಅಧಿಕೃತ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಧರ್ಮಾಧ್ಯಕ್ಷರಾದವರು ಯುವರಾಜರಂತೆ ಸಿಂಹಾಸನದಲ್ಲಿ ಕುಳಿತಿರಬೇಕಾದವರಲ್ಲ. ಬದಲಾಗಿ ನೊಂದವರ, ಬಡವರ, ಶೋಷಣೆಗೆ ಒಳಪಟ್ಟವರ ಜೊತೆಯಲ್ಲಿ ನಿಂತು ಧರ್ಮದ ರಹದಾರಿ ಮೂಲಕ ಜನರನ್ನು ಉನ್ನತೀಕರಿಸುವ ಪ್ರಯತ್ನ ಮಾಡಬೇಕು ಎಂದಿದ್ದಾರೆ. ಮಾತ್ರವಲ್ಲ, ಮಿಷನರಿಯ ಸೇವೆ ತನ್ನೊಳಗಿನ ಧಾರ್ಮಿಕತ್ವವನ್ನು ಜೀವಂತಗೊಳಿಸಿದೆ ಎಂದು ನಂಬಿದ್ದಾರೆ. ಮಿಷನರಿ ಕಾರ್ಯಚಟುವಟಿಕೆಗಳು ವಿಶ್ವದಾದ್ಯಂತ ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ. ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ವಲಯವು ಸಹ ಹೊಸ ಪೋಪ್‌ ಆಯ್ಕೆಯ ಮೂಲಕ ಹೊಸ ಸಂವತ್ಸರದ ಕಡೆಗೆ ಹೆಜ್ಜೆ ಇಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.