ADVERTISEMENT

ಸರೋಜಾದೇವಿ ನುಡಿ ನಮನ | ನಾವು ಭಾಗ್ಯವಂತರಾದೆವು: ನಿರ್ದೇಶಕ ಭಾರ್ಗವ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 0:30 IST
Last Updated 15 ಜುಲೈ 2025, 0:30 IST
<div class="paragraphs"><p>ನಟಿಯರಾದ ಉಮಾಶ್ರೀ, ಜಯಮಾಲಾ, ಜಯಂತಿ, ಭಾರತಿ ಅವರೊಂದಿಗೆ ಸರೋಜಾದೇವಿ</p></div>

ನಟಿಯರಾದ ಉಮಾಶ್ರೀ, ಜಯಮಾಲಾ, ಜಯಂತಿ, ಭಾರತಿ ಅವರೊಂದಿಗೆ ಸರೋಜಾದೇವಿ

   

ನನ್ನ ನಿರ್ದೇಶನದ ಚೊಚ್ಚಲ ಸಿನಿಮಾ ‘ಭಾಗ್ಯವಂತರು’. ಅದರ ಆರಂಭದ ಸಾಲುಗಳು ಹೀಗಿದ್ದವು: ಒಬ್ಬರಿಗಾಗಿ ಒಬ್ಬರು ಉಸಿರಾಡುತ್ತಾ ಅನುಕ್ಷಣವೂ ತ್ಯಾಗದಿಂದ ದೊರಕುವ ಆನಂದದ ಅಮೃತವನ್ನು ಸವಿಯುವ ದಂಪತಿಯೇ ‘ಭಾಗ್ಯವಂತರು’. ತೆರೆಯಲ್ಲಿ ಇಂತಹ ದಂಪತಿಯಾಗಿ ಕಾಣಿಸಿಕೊಂಡು, ಆ ಪಾತ್ರಗಳಿಗೆ ಜೀವತುಂಬಿ, ಪ್ರೇಕ್ಷಕರನ್ನು ಸೆಳೆದವರು ವರನಟ ರಾಜ್‌ಕುಮಾರ್‌ ಹಾಗೂ ಬಿ.ಸರೋಜಾದೇವಿ. 

ಹಲವು ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿದ್ದ ನಾನು ನಿರ್ದೇಶಕನಾಗಬೇಕಿತ್ತು. ದ್ವಾರಕೀಶ್‌ ಅವರು ‘ಕೌಬಾಯ್‌ ಕುಳ್ಳ’ ಮುಂತಾದ ಸಿನಿಮಾಗಳ ಆಫರ್‌ ಕೊಟ್ಟರು. ಆದರೆ ಅವುಗಳನ್ನು ತಿರಸ್ಕರಿಸಿದ್ದೆ. ಆ್ಯಕ್ಷನ್‌ಗಿಂತ ಕಥೆಯಿರುವ ಸಿನಿಮಾಗಳನ್ನು ನಿರ್ದೇಶಿಸೋಣ ಎಂದು ನಿರ್ಧರಿಸಿದ್ದೆ. ಇದೇ ರೀತಿ ಕಥೆ ಹುಡುಕುತ್ತಿರುವಾಗ ‘ಭಾಗ್ಯವಂತರು’ ದೊರೆಯಿತು. ಸಹ ನಿರ್ದೇಶಕನಾಗಿ ನನ್ನ ಕೆಲಸವನ್ನು ಇವರಿಬ್ಬರೂ ನೋಡಿದ್ದರು. ಹೀಗಾಗಿಯೇ ನನ್ನ ನಿರ್ದೇಶನದಲ್ಲಿ ಕೆಲಸ ಮಾಡಲು ಸುಲಭವಾಗಿ ಒಪ್ಪಿಕೊಂಡಿದ್ದರು. ಸರೋಜಾದೇವಿ ಮೇಧಾವಿ ನಟಿ. ‌ನಿರ್ಮಾಪಕರಾದ ದ್ವಾರಕೀಶ್‌, ಚಿ.ಉದಯಶಂಕರ್‌ ಅವರಿಗೂ ಸರೋಜಾದೇವಿಯವರೇ ಆ ಪಾತ್ರ ಮಾಡಬೇಕು ಎಂದಿತ್ತು.  

ADVERTISEMENT

ಈ ಸಿನಿಮಾದಲ್ಲಿ ಯೌವನದಿಂದ ಹಿಡಿದು ವೃದ್ಧರಾಗುವವರೆಗಿನ ದಂಪತಿಯ ಕಥೆ ಇದೆ. ವಯಸ್ಸಾದಾಗ ವಿಗ್‌ ಹಾಕುವುದೇ ಅಥವಾ ಇರುವ ಕೂದಲಿಗೆ ಬಣ್ಣ ಹಚ್ಚುವುದೇ ಎಂಬ ಪ್ರಶ್ನೆ ಮೂಡಿತ್ತು. ಕೂದಲಿಗೇ ಬಣ್ಣ ಬಳಿದರೆ ದೃಶ್ಯಗಳು ಚೆನ್ನಾಗಿ ಬರುತ್ತವೆ ಎಂದುಕೊಂಡು ರಾಜ್‌ಕುಮಾರ್‌ ಅವರಿಗೆ ತಿಳಿಸಿದೆ. ಅವರು ಒಪ್ಪಿಕೊಂಡರು. ಆದರೆ ಸರೋಜಾದೇವಿಯವರು ಬೇರೆ ಸಿನಿಮಾಗಳು, ಕಾರ್ಯಕ್ರಮಗಳು ಇವೆ ಎಂದು ಒಪ್ಪಿಕೊಳ್ಳಲಿಲ್ಲ. ಕೊನೆಗೆ ರಾಜ್‌ಕುಮಾರ್‌ ಅವರು ವಿಗ್‌ ಹಾಕಿಕೊಳ್ಳುತ್ತಿಲ್ಲ ಎಂದು ತಿಳಿದಾಗ ಅವರೂ ಒಪ್ಪಿಕೊಂಡರು. ಅವರಿಬ್ಬರ ಅಮೋಘ ಅಭಿನಯ ಸಿನಿಮಾವನ್ನು ಗೆಲ್ಲಿಸಿತು. 

ರಾಜ್‌ಕುಮಾರ್‌ ಹಾಗೂ ಸರೋಜಾದೇವಿಯವರ ನಟನೆಯಲ್ಲಿ ಒಂದು ಆರೋಗ್ಯಕರ ಸ್ಪರ್ಧೆಯನ್ನು ನಾನು ಗಮನಿಸಿದ್ದೆ. ಒಬ್ಬರು ಸಂಭಾಷಣೆ ಮಾಡುವಾಗ ಪ್ರತ್ಯುತ್ತರವಾಗಿ ಪೈಪೋಟಿಗೆ ಬಿದ್ದವರಂತೆ ಮತ್ತೊಬ್ಬರು ಭಾವನೆಗಳನ್ನು ಪ್ರದರ್ಶಿಸುತ್ತಿದ್ದರು. ಸರೋಜಾದೇವಿಯವರ ನಡಿಗೆಗೇ ಚಪ್ಪಾಳೆ ಬೀಳುತ್ತಿತ್ತು. ಅವರ ದನಿ ಗಿಣಿಯ ದನಿಯಂತೆ ಇಂಪಾಗಿತ್ತು. ಇದು ಎಲ್ಲರನ್ನೂ ಸೆಳೆದ ಅಂಶ. ಎಲ್ಲಿಯೂ ಕೆಟ್ಟ ಹೆಸರು ತೆಗೆದುಕೊಳ್ಳದೆ ಎಲ್ಲರಿಗೂ ಬೇಕಾದವರಾದರು.  

ಯಾವುದೇ ಅಹಂಕಾರವಿಲ್ಲದ ವ್ಯಕ್ತಿತ್ವ ಅವರದು. ‘ಭಾಗ್ಯವಂತರು’ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಸರೋಜಾದೇವಿ–ಶ್ರೀಹರ್ಷ ಅವರು ಇಡೀ ಚಿತ್ರತಂಡಕ್ಕೆ ಪ್ರೀತಿಯಿಂದ ಊಟ ಹಾಕಿದ್ದರು. ನನ್ನನ್ನು ನೋಡಿದಾಕ್ಷಣ ‘ಭಾಗ್ಯವಂತರು ಭಾರ್ಗವ’ ಎಂದೇ ಕರೆಯುತ್ತಿದ್ದರು. ಅಮೋಘ ಅಭಿನಯದಿಂದ ಎಲ್ಲಾ ಭಾಷಿಕರನ್ನೂ ಸೆಳೆದ ಸರೋಜಮ್ಮ ಅಚ್ಚಳಿಯದೆ ಉಳಿದಿದ್ದಾರೆ, ಉಳಿಯಲಿದ್ದಾರೆ. 

‘ನಮಗೆ ಹೆಮ್ಮೆಯಿತ್ತು’

ನಾವಿಬ್ಬರೂ ಜೊತೆಯಾಗಿ ನಟಿಸಿಲ್ಲ. ನಾನು 1951ರಲ್ಲಿ ‘ಜಗನ್ಮೋಹಿನಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದೆ. ಸರೋಜಾದೇವಿಯವರೂ ಇದೇ ಕಾಲಘಟ್ಟದಲ್ಲಿ ಸಿನಿಮಾರಂಗಕ್ಕೆ ಬಂದವರು. ಮದ್ರಾಸ್‌ನಲ್ಲಿ ನಮ್ಮಿಬ್ಬರ ಮೊದಲ ಭೇಟಿಯಾಗಿತ್ತು. ಬಳಿಕ ಫೋನ್‌ ಮೂಲಕ, ಭೇಟಿಯಾಗಿ ವೈಯಕ್ತಿಕ ಕಷ್ಟಸುಖ, ಕನ್ನಡ ಚಿತ್ರರಂಗ ಮತ್ತದರ ಕಲಾವಿದರ ಕಷ್ಟಸುಖಗಳ ಬಗ್ಗೆ ಮಾತುಕತೆ ನಡೆಸುತ್ತಿದ್ದೆವು. ಮದ್ರಾಸ್‌ನಲ್ಲಿರುವಾಗಲೂ ಕನ್ನಡ ಕಲಾವಿದರಿಗೆ ಸಹಾಯ ಮಾಡುತ್ತಿದ್ದ ಕಲಾವಿದೆ ಆಕೆ. ನಾವು ಅವರನ್ನು ಬಹಳ ಹೆಮ್ಮೆಯಿಂದ ನೋಡುತ್ತಿದ್ದೆವು. ಪ್ರತಿ ಸಿನಿಮಾದಲ್ಲೂ ಭಿನ್ನ ಪಾತ್ರಗಳನ್ನು ನಿಭಾಯಿಸುವ ಅವಕಾಶ ಅವರಿಗೆ ಬರುತ್ತಿತ್ತು. ಅವರಿಗೆ ಸಿಕ್ಕ ಬಿರುದುಗಳು ಎಲ್ಲರಿಗೂ ಸಿಗುವ ಭಾಗ್ಯವಲ್ಲ. ಇಷ್ಟು ಸುದೀರ್ಘ ಅವಧಿಗೆ ನಾಯಕಿಯಾಗಿ ನಟಿಸಿದ ಮತ್ತೋರ್ವ ಕಲಾವಿದೆ ದೇಶದಲ್ಲೇ ಇಲ್ಲ. ನಾವು ಎಲ್ಲರೂ ಇದನ್ನು ಸಂತೋಷದಿಂದ ನೋಡುತ್ತಿದ್ದೆವು. ಅವರು ನಮ್ಮೆಲ್ಲರನ್ನೂ ಸಮನಾಗಿ ನೋಡುತ್ತಿದ್ದರು. ತಾನೊಬ್ಬ ಸ್ಟಾರ್‌ ಎಂಬ ಅಹಂ ಅವರಿಗೆ ಇರಲೇ ಇಲ್ಲ

– ಹರಿಣಿ, ನಟಿ

****

‘ಸರೋಜಾದೇವಿ’ಯಾಗಿಯೇ ನಟಿಸಿದ್ರು

‘ನಟಸಾರ್ವಭೌಮ’ ಚಿತ್ರದ ದೃಶ್ಯ. ಅಲ್ಲಿ ಸರೋಜಾದೇವಿಯವರನ್ನು ಪುನೀತ್‌ ಸಂದರ್ಶನ ಮಾಡುತ್ತಾ, ‘ನಿಮ್ಮ ಫೇವರಿಟ್‌ ಸಿನಿಮಾ ಯಾವುದು’ ಎಂದು ಕೇಳುತ್ತಾರೆ. ಆಗ ಸರೋಜಾದೇವಿಯವರು, ‘ಯಾರಿವನು’ ಸಿನಿಮಾ. ಏಕೆಂದರೆ ಅದರಲ್ಲಿ ಎವರ್‌ಗ್ರೀನ್‌ ಸೂಪರ್‌ಸ್ಟಾರ್‌ ಮತ್ತು ಭವಿಷ್ಯದ ತಾರೆ ಜೊತೆ ನಟಿಸಿದ್ದೀನಲ್ಲ. ಬಂಗಾರದಂಥ ಅನುಭವ ಅದು..’ ಎನ್ನುತ್ತಾರೆ.

ಈ ದೃಶ್ಯ ಹುಟ್ಟಿಕೊಂಡ ಬಗ್ಗೆ ಚಿತ್ರದ ನಿರ್ದೇಶಕ ಪವನ್‌ ಒಡೆಯರ್‌ ನೆನಪಿಸಿಕೊಂಡರು. 

‘ಈ ಸಿನಿಮಾದಲ್ಲಿ ಪುನೀತ್‌ ಅವರು ಪತ್ರಕರ್ತನ ಪಾತ್ರ ಮಾಡಿದ್ದಾರೆ. ಅದರಲ್ಲಿ ಅವರಿಗೆ ಬಿ. ಸರೋಜಾದೇವಿಯವರನ್ನೇ ಸಂದರ್ಶನ ಮಾಡುವ ದೃಶ್ಯವಿತ್ತು. ಸರೋಜಾದೇವಿಯವರನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಆ ಪಾತ್ರ ಬರೆದಿದ್ದೆ. ಇದು ಅಪ್ಪು ಅವರಿಗೂ ಖುಷಿಯಾಗಿತ್ತು. ಸರೋಜಾದೇವಿಯವರ ಬಳಿ ತೆರಳಿ ನೀವೊಂದು ಪಾತ್ರವನ್ನು ಮಾಡಬೇಕು ಎಂದಾಗ ಮೊದಲು ಒಪ್ಪಿಕೊಂಡಿರಲಿಲ್ಲ. ಬಳಿಕ ನೀವು ನೀವಾಗಿಯೇ ಅಭಿನಯಿಸಬೇಕು ಎಂದಾಗ ಖುಷಿಯಿಂದ ಒಪ್ಪಿಕೊಂಡರು. ‘ಸುಮಾರು 160 ಸಿನಿಮಾ ಮಾಡಿದ್ದೇನೆ, ಆದರೆ ಯಾವತ್ತೂ ಬಿ.ಸರೋಜಾದೇವಿಯಾಗಿ ಕಾಣಿಸಿಕೊಂಡಿಲ್ಲ. ಖಂಡಿತವಾಗಿಯೂ ಮಾಡುತ್ತೇನೆ’ ಎಂದಿದ್ದರು. ಅವರಿಗೆ ಅವರದ್ದೇ ಆದ ಒಂದು ಸ್ಟೈಲ್‌ ಇದೆ. ಚಿತ್ರೀಕರಣಕ್ಕೂ ಅವರೇ ಸಿದ್ಧವಾಗಿ ಬಂದಿದ್ದರು. ಆಗಲೇ ಅವರು ಪ್ಯಾನ್‌ ಇಂಡಿಯಾ ಸ್ಟಾರ್‌. ಎಲ್ಲಾ ಸೂಪರ್‌ಸ್ಟಾರ್‌ಗಳ ಜೊತೆ ಅವರು ಕೆಲಸ ಮಾಡಿದ್ದಾರೆ’ ಎಂದು ಭಾವುಕರಾದರು ಪವನ್‌. 

****

‘ಶತಮಾನಕ್ಕೆ ಒಬ್ಬರೇ ಸರೋಜಾದೇವಿ’

ಸುಮಾರು 50 ವರ್ಷಗಳಿಂದ ನನಗೆ ಸರೋಜಾದೇವಿಯವರ ಪರಿಚಯವಿದೆ. ನಾನು ಬೆರಗಾಗಿ ನೋಡಿದ, ನನ್ನ ಮೇಲೆ ಪ್ರಭಾವ ಬೀರಿದ ಕಲಾವಿದೆ ಅವರು. ಗೌರವದಿಂದ, ಘನತೆಯಿಂದ ಬದುಕಲು ಕಲಿಸಿದವರು. ಶತಮಾನಕ್ಕೆ ಒಬ್ಬರೇ ಸರೋಜಾದೇವಿ. ನಾನು 73ರಲ್ಲಿ ಚಿತ್ರರಂಗಕ್ಕೆ ಬಂದಾಗಲೇ ಅವರು ಲಕ್ಷಾಂತರ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು

– ಜಯಮಾಲಾ, ನಟಿ

2004ರಲ್ಲಿ ಪ್ರಜಾವಾಣಿ ಸಿನಿ ಸಮ್ಮಾನದಲ್ಲಿ ಜೀವಮಾನ ಸಾಧನೆ ಪ್ರಶಸ್ತಿಗೆ ಸರೋಜಾದೇವಿ ಅವರು ಭಾಜನರಾದ ಕ್ಷಣ

ಜೀವಮಾನ ಸಾಧನೆ ಪುರಸ್ಕಾರ

ಬಿ.ಸರೋಜಾದೇವಿಯವರ ಸುದೀರ್ಘ ಸಿನಿಪಯಣವನ್ನು ಗುರುತಿಸಿ 2024ರಲ್ಲಿ ನಡೆದ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಎರಡನೇ ಆವೃತ್ತಿಯಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು

ಲೇಖಕ: ನಿರ್ದೇಶಕ, ನಿರೂಪಣೆ:ಅಭಿಲಾಷ್‌ ಪಿ.ಎಸ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.