ADVERTISEMENT

S. L. Bhyrappa: ಹಿರಿಯ ಕಾದಂಬರಿಕಾರ ಎಸ್.ಎಲ್‌.ಭೈರಪ್ಪ ಅವರ ಬದುಕು, ಬರಹ...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಸೆಪ್ಟೆಂಬರ್ 2025, 10:14 IST
Last Updated 24 ಸೆಪ್ಟೆಂಬರ್ 2025, 10:14 IST
   

ಬೆಂಗಳೂರು: ಕನ್ನಡದ ಜನಪ್ರಿಯ ಸಾಹಿತಿ ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಬುಧವಾರ ಮಧ್ಯಾಹ್ನ ನಿಧನರಾದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಆರಂಭಿಕ ಜೀವನ:

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರ ಗ್ರಾಮದಲ್ಲಿ 1931ರ ಆಗಸ್ಟ್ 20 ರಂದು ಲಿಂಗಣ್ಣಯ್ಯ– ಗೌರಮ್ಮ ದಂಪತಿಯ ಪುತ್ರರಾಗಿ ಜನಿಸಿದ ಅವರು, ಬಾಗೂರು, ನುಗ್ಗೇಹಳ್ಳಿ ಶಾಲೆಗಳಲ್ಲಿ ಪ್ರಾಥಮಿಕ, ಮೈಸೂರಿನ ಶಾರದಾವಿಲಾಸದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದರು. ಮಹಾರಾಜ ಕಾಲೇಜಿನಲ್ಲಿ ಬಿ.ಎ ಹಾಗೂ ಮೈಸೂರು ವಿಶ್ವವಿದ್ಯಾಲಯದಲ್ಲಿ 2 ಚಿನ್ನದ ಪದಕಗಳೊಂದಿಗೆ ಎಂ.ಎ ತತ್ವಶಾಸ್ತ್ರದಲ್ಲಿ ಪದವಿ ಪಡೆದಿದ್ದರು.  

ಬರೋಡದ ಸಯ್ಯಾಜಿರಾವ್‌ ವಿಶ್ವವಿದ್ಯಾಲಯದಲ್ಲಿ ‘ಸತ್ಯ ಮತ್ತು ಸೌಂದರ್ಯ’ ಪ್ರಬಂಧಕ್ಕೆ ಪಿ.ಎಚ್‌ಡಿ ಪದವಿ ಪಡೆದ ನಂತರ ಅವರು, ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜು, ಗುಜರಾತ್‌ನ ಸರ್ದಾರ್ ವಲ್ಲಭಬಾಯಿ ಪಟೇಲ್‌ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. 

ADVERTISEMENT

ದೆಹಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ (ಎನ್‌ಸಿಇಆರ್‌ಟಿ) 1967–71ರವರೆಗೆ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಮೈಸೂರಿಗೆ ಪ್ರಾದೇಶಿಕ ಶಿಕ್ಷಣ ಕಾಲೇಜಿಗೆ ವರ್ಗವಾದ ಅವರು, ತತ್ವಶಾಸ್ತ್ರ ಮತ್ತು ಶಿಕ್ಷಣ ವಿಜ್ಞಾನದ ಪ್ರಾಧ್ಯಾಪಕರಾಗಿ 1991ರಲ್ಲಿ ನಿವೃತ್ತರಾದರು. 

ಪ್ರಮುಖ ಕಾದಂಬರಿಗಳು 

ವಿದ್ಯಾರ್ಥಿಯಾಗಿದ್ದಾಗಲೇ ‘ಭೀಮಕಾಯ’, ‘ಬೆಳಕು ಮೂಡಿತು’ ಕಾದಂಬರಿಗಳನ್ನು ಬರೆದಿದ್ದ ಅವರ ಮೊದಲ ಕಾದಂಬರಿ ‘ಧರ್ಮಶ್ರೀ’ 1961ರಲ್ಲಿ ‍ಪ್ರಕಟಗೊಂಡಿತ್ತು. ದೂರ ಸರಿದರು (1962), ಮತದಾನ, ವಂಶವೃಕ್ಷ (1965), ಜಲಪಾತ (1967), ನಾಯಿನೆರಳು (1968), ತಬ್ಬಲಿಯು ನೀನಾದೆ ಮಗನೆ (1970), ಗೃಹಭಂಗ (1970), ನಿರಾಕರಣ (1971), ಗ್ರಹಣ (1972), ದಾಟು (1973), ಅನ್ವೇಷಣ (1976), ಪರ್ವ (1979), ನೆಲೆ (1983), ಸಾಕ್ಷಿ (1986), ಅಂಚು (1990), ತಂತು (1993), ಸಾರ್ಥ (1998), ಮಂದ್ರ (2002), ಆವರಣ (2007), ಕವಲು (2010), ಯಾನ (2014), ಉತ್ತರಕಾಂಡ (2017) ಅವರ ಕಾದಂಬರಿಗಳು. 

ಭಿತ್ತಿ (1996) ಅವರ ಆತ್ಮಕಥನ, ಸಾಹಿತ್ಯ ಮತ್ತು ಪ್ರತೀಕ (1966), ಸತ್ಯ ಮತ್ತು ಸೌಂದರ್ಯ (1967), ಕಥೆ ಮತ್ತು ಕಥಾವಸ್ತು (1969) ಅವತ ಸಾಹಿತ್ಯ ಮೀಮಾಂಸೆ ಮತ್ತು ಚಿಂತನಾ ಕೃತಿಗಳಾಗಿವೆ. ಹಿಂದೂಸ್ತಾನಿ ಸಂಗೀತದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಅವರು ‘ಗಂಗೂಬಾಯಿ ಹಾನಗಲ್’ ಕೃತಿಯ ಸಂಪಾದಕರೂ ಆಗಿದ್ದರು. 

ವಂಶವೃಕ್ಷ ಕಾದಂಬರಿಗೆ 1966ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ, ದಾಟು ಕಾದಂಬರಿಗೆ 1975ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ, 1985ರಲ್ಲಿ ಮಾಸ್ತಿ, 2005ರಲ್ಲಿ ಪಂಪ ಪ್ರಶಸ್ತಿ, 2010ರಲ್ಲಿ ಸರಸ್ವತಿ ಸಮ್ಮಾನ್, 2011ರಲ್ಲಿ ನಾಡೋಜ, 2014ರಲ್ಲಿ ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ, 2017ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿ ದೊರೆತಿದೆ. 

2014ರಲ್ಲಿ ನ್ಯಾಷನಲ್‌ ರೀಸರ್ಚ್‌ ಫ್ರೊಫೆಸರ್, 2015ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಗೌರವಕ್ಕೆ ಭಾಜನರಾಗಿದ್ದ ಅವರಿಗೆ ಕೇಂದ್ರ ಸರ್ಕಾರವು 2016ರಲ್ಲಿ ಪದ್ಮಶ್ರೀ, 2023ರಲ್ಲಿ ಪದ್ಮಭೂಷಣ ಪುರಸ್ಕಾರ ನೀಡಿತ್ತು.   

ಭೈರಪ್ಪ ಅವರ ಕಾದಂಬರಿಗಳು ಭಾರತದ ವಿವಿಧ ಭಾಷೆಗಳಿಗೆ ಅನುವಾದವಾಗಿವೆ. ವಂಶವೃಕ್ಷ, ಸಾಕ್ಷಿ ಮತ್ತು ಪರ್ವ ಕೃತಿಗಳು ಇಂಗ್ಲಿಷ್‌ಗೆ ಭಾಷಾಂತರಗೊಂಡಿವೆ. 

‘ವಂಶವೃಕ್ಷ’, ‘ತಬ್ಬಲಿಯು ನೀನಾದೆ ಮಗನೇ’ ಕಾದಂಬರಿಗಳನ್ನು ಗಿರೀಶ್‌ ಕಾರ್ನಾಡ್‌ ಮತ್ತು ಬಿ.ವಿ.ಕಾರಂತ ಚಲನಚಿತ್ರವಾಗಿಸಿದ್ದರು. ಮತದಾನ ಚಿತ್ರವಾಗಿ, ಗೃಹಭಂಗ ಧಾರಾವಾಹಿಯಾಗಿ ಟಿ.ಎನ್.ಸೀತಾರಾಮ್ ನಿರ್ದೇಶಿಸಿದ್ದರು. ಗಿರೀಶ್‌ ಕಾಸರವಳ್ಳಿ ‘ನಾಯಿನೆರಳು’ ಕಾದಂಬರಿಯನ್ನು ಅದೇ ಹೆಸರಿನಲ್ಲಿ ತೆರೆಯ ಮೇಲೆ ತಂದಿದ್ದರು. ಚಿತ್ರಗಳಿಗೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳೂ ಸಂದಿದ್ದವು. 

ಕಾದಂಬರಿ, ಕಥೆ ಮತ್ತು ಸಾಹಿತ್ಯ ವಿಮರ್ಶೆಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರು ಬರೆದ ಅನೇಕ ಕಾದಂಬರಿಗಳು ಇಂಗ್ಲಿಷ್‌ ಸೇರಿದಂತೆ ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಅವರ ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ ಕಾದಂಬರಿಗಳು ಚಲನಚಿತ್ರಗಳಾಗಿವೆ.

ಪ್ರಶಸ್ತಿಗಳು ಮತ್ತು ಗೌರವಗಳು:

  • ಪದ್ಮಶ್ರೀ ಪ್ರಶಸ್ತಿ (2016)

  • ಪದ್ಮಭೂಷಣ (2023)

  • ಸರಸ್ವತಿ ಸಮ್ಮಾನ್ ಪ್ರಶಸ್ತಿ (2010)

  • ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1975)

  • ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1966)

1999ರಲ್ಲಿ ಕನಕಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಭೈರಪ್ಪ ಆಯ್ಕೆಯಾಗಿದ್ದರು.

ಆತ್ಮ ಚರಿತ್ರೆ– ಭಿತ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.