ADVERTISEMENT

ಆಕಾಂಕ್ಷೆ ಮತ್ತು ಬದ್ಧತೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 16:37 IST
Last Updated 24 ಏಪ್ರಿಲ್ 2018, 16:37 IST

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ‘ಕರುನಾಡ ಜಾಗೃತಿಯಾತ್ರೆ’ಯಲ್ಲಿ ಬಿಜೆಪಿ ಪ್ರಣಾಳಿಕೆಗೆ ಸಾಹಿತಿಗಳು ನೀಡಿದ ಸಲಹೆಗಳು ದುಂಡು ಮೇಜು ಪರಿಷತ್ತಿನ ಗಾಂಧಿ ಮತ್ತು ಅಂಬೇಡ್ಕರ್‌ ಅವರನ್ನು ನೆನಪಿಗೆ ತಂದಿತು. ಚಿದಾನಂದಮೂರ್ತಿ ಅವರು ಗಾಂಧೀಜಿಯಂತೆಯೂ ಸಿದ್ಧಲಿಂಗಯ್ಯನವರು ಅಂಬೇಡ್ಕರರಂತೆಯೂ ಕಂಡುಬಂದರು.

ಚಿದಾನಂದಮೂರ್ತಿ ಅವರು ನಾಡು-ನುಡಿ, ನೆಲ-ಜಲ, ಗಡಿ ವಿಚಾರದಲ್ಲಿ ರಾಜ್ಯದ ಹಿತ ಕಾಪಾಡಬೇಕು ಎಂದಿದ್ದಾರೆ. ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಬಾರದು. ಬೆಳಗಾವಿ ಗಡಿ ವಿವಾದ ಬಗೆಹರಿಸಬೇಕೆಂದು ಗಾಂಧಿಯಂತೆ ದೇಶದ–ನಾಡಿನ ಸಮಗ್ರತೆಯ ಬಗ್ಗೆ ಸಲಹೆ ನೀಡಿದ್ದಾರೆ. ಸಿದ್ಧಲಿಂಗಯ್ಯನವರು ದಲಿತರ ಹಿಂಬಡ್ತಿ ವಿರುದ್ಧ ಕೇಂದ್ರ ಹೋರಾಟ ಮಾಡಬೇಕು ಎಂದಿದ್ದಾರೆ. 'ದಲಿತರಿಗಿರುವ ಹಕ್ಕುಗಳನ್ನು ಮೊಟಕುಗೊಳಿಸಬಾರದು. ಬ್ಯಾಂಕ್‍ಗಳಂತಹ ಸರ್ಕಾರದ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು. ಖಾಸಗಿ ಕ್ಷೇತ್ರದಲ್ಲಿ ದಲಿತರಿಗೆ ಮೀಸಲಾತಿ ನೀಡಬೇಕು' ಎಂದು ಅಂಬೇಡ್ಕರ್ ಅವರಂತೆ ದಲಿತ ಪರವಾದ ಸಲಹೆಗಳನ್ನು ನೀಡಿದ್ದಾರೆ.

‘ಹೂವು’ ಎಂದು ಕೊಟ್ಟು ‘ಪ್ರಸಾದ’ ಎಂದು ಹಿಂಪಡೆದಂತೆ, ಸಂವಿಧಾನವು ದಲಿತರು ಮತ್ತು ಮಹಿಳೆಯರಿಗೆ ಕೆಲವು ವಿಶೇಷ ಕಾನೂನು ಸೌಲಭ್ಯಗಳನ್ನು ನೀಡಿದೆ. ನ್ಯಾಯಾಲಯವು ಈ ಕಾನೂನುಗಳನ್ನು ಹಲ್ಲುಕಿತ್ತ ಹಾವಿನಂತೆ ನಿಷ್ಕ್ರಿಯಗೊಳಿಸುತ್ತಿದೆ. ಇದರಿಂದಾಗಿ ಮಹಿಳೆಯರು ಮತ್ತು ದಲಿತರ ಮೇಲೆ ಬಹುಸಂಖ್ಯಾತರು ಹಾಗೂ ಪುರುಷ ಪ್ರಾಧಾನ್ಯ ಮತ್ತೆ ಸವಾರಿ ಮಾಡುವಂತಾಗುತ್ತಿದೆ.

ADVERTISEMENT

ನ್ಯಾಯಾಲಯದ ಇತ್ತೀಚಿನ ತೀರ್ಪುಗಳಿಂದಾಗಿ ದಲಿತರು ಮತ್ತು ಮಹಿಳೆಯರು ಮತ್ತೆ ಮೂಡಣದಿಕ್ಕಿಗೆ ಮುಖಮಾಡುವಂತಾಗಿದೆ. ದಲಿತರು ತಮಗಿರುವ ಹಕ್ಕುಗಳನ್ನು ದಕ್ಕಿಸಿಕೊಳ್ಳಬೇಕಾದರೆ ಪ್ರೀತಿಯಿಂದ ದ್ವೇಷವನ್ನು ಗೆಲ್ಲಬೇಕು. ಸಿದ್ಧಲಿಂಗಯ್ಯ ಅವರು ಮುಳ್ಳನ್ನು ಮುಳ್ಳಿನಿಂದ ತೆಗೆಯುವಂತೆ ನಮ್ಮ ಹಕ್ಕುಗಳನ್ನು ಯಾರು ಭಕ್ಷಿಸುತ್ತಿದ್ದಾರೋ ಅವರಿಂದಲೇ ನಮ್ಮ ಹಕ್ಕುಗಳನ್ನು ರಕ್ಷಿಸಲು ಪ್ರೀತಿಯಿಂದಲೇ ದಲಿತರ ರಕ್ಷಣೆಗೆ ಸಂಬಂಧಿಸಿದ ಸಲಹೆಗಳನ್ನು ನೀಡಿದ್ದಾರೆ.

ಗುಡಿಯ ಹಿಂದೆ ನಿಂತು ತಮಟೆ ಬಾರಿಸಿ ವಾಲಗ ಊದುತ್ತಿರುವವರು ಮುಂದೆ ಬನ್ನಿ. ಸರ್ಕಾರ ಯಾವುದೇ ಇರಲಿ, ನಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಒಂದಾಗಿ. ಸಿದ್ಧಲಿಂಗಯ್ಯ ಅವರ ಸಲಹೆಗಳಿಗೆ ಮತ್ತಷ್ಟು ಶಕ್ತಿ ತುಂಬಿ ಬಲಗೊಳಿಸಿ ನಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳೋಣ.

ಪ್ರೊ. ಸಿದ್ದಗಂಗಮ್ಮ, ಹಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.