ADVERTISEMENT

ಆಶಾಕಿರಣ

ಜಯಂತ ಕೆ.ಎಸ್.
Published 4 ಮಾರ್ಚ್ 2016, 19:30 IST
Last Updated 4 ಮಾರ್ಚ್ 2016, 19:30 IST

ಕೃಷಿ ಕ್ಷೇತ್ರ ದೇಶದ ಆತ್ಮ ಇದ್ದಂತೆ.  ಈ ಕ್ಷೇತ್ರವನ್ನು ಸದೃಢಗೊಳಿಸಿದರೆ ಮಾತ್ರ ದೇಶದ ಆರ್ಥಿಕ ಬೆಳವಣಿಗೆ ಸಾಧ್ಯ ಎಂಬುದನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ತುಸು ತಡವಾಗಿಯಾದರೂ ಅರಿತದ್ದು ಸ್ವಾಗತಾರ್ಹ.

ಕೃಷಿ ಕ್ಷೇತ್ರಕ್ಕೆ ಈ ಸಲದ ಬಜೆಟ್‌ನಲ್ಲಿ ₹ 35 ಸಾವಿರ ಕೋಟಿ ತೆಗೆದಿರಿಸಲಾಗಿದೆ. ಕೃಷಿ ಕ್ಷೇತ್ರಕ್ಕೆ ಪೂರಕವಾದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮುಂತಾದ ಯೋಜನೆಗಳಿಗೆ ಮೀಸಲಿಟ್ಟಿರುವ ಮೊತ್ತ ಸೇರಿದರೆ ಒಟ್ಟಾರೆ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಗಾಗಿ ₹ 87 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಈ ಬಜೆಟ್‌ನಲ್ಲಿ ಮೀಸಲು ಇರಿಸಿದಂತಾಗುತ್ತದೆ.

ಬಜೆಟ್ ಮಂಡಿಸಿದ ಹಣಕಾಸು ಸಚಿವರು ಮುಂದಿನ ಐದು ವರ್ಷಗಳಲ್ಲಿ ರೈತರ ಆದಾಯ ದ್ವಿಗುಣಗೊಳ್ಳುವಂತೆ ಮಾಡುವುದಾಗಿ ಘೋಷಿಸಿದ್ದಾರೆ. ಆರ್ಥಿಕ ತಜ್ಞರ ಅಧ್ಯಯನದಂತೆ ವಿಶ್ವದ ಕೃಷಿ ಪ್ರಗತಿ ಶೇಕಡ 4 ಮಾತ್ರ. ಹಣಕಾಸು ಸಚಿವರ ಪ್ರಕಾರ ಐದು ವರ್ಷಗಳಲ್ಲಿ ರೈತರ ವರಮಾನ ದ್ವಿಗುಣಗೊಳ್ಳಬೇಕಾದರೆ ಕೃಷಿ ಕ್ಷೇತ್ರದ ಬೆಳವಣಿಗೆಯಲ್ಲಿ ದೊಡ್ಡ ಜಿಗಿತ ಆಗಬೇಕು.

ಕೃಷಿಗೆ ಅಗತ್ಯ ಸೌಲಭ್ಯ ಒದಗಿಸಿದರೆ ಮತ್ತು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದರೆ ಹಣಕಾಸು ಸಚಿವರ ಮಾತು ಈಡೇರಲೂಬಹುದು. ಆದರೆ ಅದಕ್ಕೆ ಬದ್ಧತೆ ಬೇಕು.

ರಾಜಕೀಯ ಕಾರಣವೋ, ಚುನಾವಣೆ ಮೇಲೆ ಕಣ್ಣೋ ಏನಾದರೂ ಆಗಿರಲಿ, ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಗೆ ಪೂರಕವಾದ ಮುಂಗಡ ಪತ್ರ ಮಂಡಿಸಿರುವುದು ದೇಶದ ಕೃಷಿಕರಲ್ಲಿ  ಆಶಾಭಾವ ಮೂಡಲು ಕಾರಣವಾಗಿರುವುದಂತೂ ನಿಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.