ADVERTISEMENT

ಇಷ್ಟೊಂದು ರಜೆ ಬೇಕೇ?

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2018, 19:30 IST
Last Updated 9 ಮಾರ್ಚ್ 2018, 19:30 IST

ಅಂತರರಾಷ್ಟ್ರೀಯ ಮಹಿಳಾ ದಿನವಾದ ಮಾರ್ಚ್‌ 8 ರಂದು, ಭಾರತ ಸರ್ಕಾರವು ಮಹಿಳೆಯರ ಅಭಿವೃದ್ಧಿಗಾಗಿ ರೂಪಿಸಿದ ಯೋಜನೆಗಳ ಬಗ್ಗೆ ಪ್ರಕಟಣೆಯೊಂದನ್ನು ನೀಡಿತ್ತು. ಅವುಗಳಲ್ಲಿ ಉದ್ಯೋಗಿ ಮಹಿಳೆಯರಿಗೆ ಹೆರಿಗೆ ರಜೆಯನ್ನು 26 ವಾರಗಳಿಗೆ ಹೆಚ್ಚಿಸಿರುವುದಾಗಿ ಹೇಳಿಕೊಂಡಿದೆ.

ಸ್ವಾತಂತ್ರ್ಯಾ ನಂತರ, ಇತ್ತೀಚಿನವರೆಗೂ ಉದ್ಯೋಗಿ ಮಹಿಳೆಗೆ 12 ವಾರ (ಮೂರು ತಿಂಗಳು) ಹೆರಿಗೆ ರಜೆಯನ್ನು ನೀಡಲಾಗಿತ್ತು. ಕೆಲವು ವರ್ಷಗಳ ಹಿಂದೆ ಅದನ್ನು 24 ವಾರಗಳಿಗೆ ಹೆಚ್ಚಿಸಲಾಯಿತು. ಈಗ ಇನ್ನೂ ಎರಡು ವಾರ ಹೆಚ್ಚಿಸಿ 26 ವಾರ ರಜೆ ಕೊಡಲಾಗುತ್ತಿದೆ. ಇಷ್ಟೊಂದು ರಜೆ ಕೊಡುವ ಅಗತ್ಯ ಇದೆಯೇ?

ಖಾಸಗಿ ಸಂಸ್ಥೆಗಳಲ್ಲಿ ದುಡಿಯುವ ಮಹಿಳಾ ನೌಕರರಿಗೆ ಇಷ್ಟು ಸುದೀರ್ಘ ರಜೆಯ ಸೌಲಭ್ಯ ನೀಡುವುದು ಅಸಾಧ್ಯವೇ ಸರಿ. ಹಾಗಿರುವಾಗ ಸರ್ಕಾರಿ ಮತ್ತು ಅರೆ ಸರ್ಕಾರಿ ಸಂಸ್ಥೆಗಳ ಸಿಬ್ಬಂದಿಗೆ ಮಾತ್ರ ಈ ವಿಶೇಷ ಸೌಲಭ್ಯದ ಔಚಿತ್ಯವೇನು? ಈ ಮಹಿಳೆಯರ ರಜಾ ಅವಧಿಯಲ್ಲಿ ಖಾಲಿ ಇರುವ ಆ ಹುದ್ದೆಯ ನಿರ್ವಹಣೆ ಮಾಡುವವರು ಯಾರು? ಅಂತಹ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಆಗುವ ತೊಂದರೆಯ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದೆಯೇ? ಚುನಾವಣೆ ಹತ್ತಿರ ಬಂದಾಗಲೆಲ್ಲ ಇದೇ ರೀತಿ ಒಂದೊಂದು ಕೊಡುಗೆ ನೀಡುತ್ತಾ ಹೋದರೆ, ಮುಂದೊಂದು ದಿನ, ಮಗು ಶಾಲೆಗೆ ಸೇರ್ಪಡೆಯಾಗುವ ವರೆಗೂ ಹೆರಿಗೆ ರಜೆಯ ವಿಸ್ತರಣೆಯಾದರೂ ಅಚ್ಚರಿ ಇಲ್ಲ!

ADVERTISEMENT

ಬ್ಯಾಂಕ್ ನೌಕರರು ಕೇಳಿದರೆಂದು, ಪ್ರತೀ ತಿಂಗಳ 2ನೇ ಮತ್ತು 4ನೇ ಶನಿವಾರಗಳಂದು ರಜೆ ಕೊಡಲಾಯಿತು. ಆ ಮೂಲಕ ಬ್ಯಾಂಕ್ ಗ್ರಾಹಕರಿಗೆ ಸಜೆ. ಕಳೆದ ವರ್ಷ ಅನೇಕ ಬಾರಿ 2ನೇ ಮತ್ತು 4ನೇ ಶನಿವಾರದ ಹಿಂದೆ ಮುಂದೆ (ಶುಕ್ರವಾರ, ಸೋಮವಾರ) ಸಾರ್ವತ್ರಿಕ ರಜೆ ಬಂದು, ಸತತ 3- 4 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಿ, ಗ್ರಾಹಕರು ಪಡಿಪಾಟಲು ಪಡುವಂತಾಯಿತು.

ನಿರುದ್ಯೋಗ ತಾಂಡವವಾಡುತ್ತಿರುವ ಇಂದಿನ ದಿನಗಳಲ್ಲಿ, ಉದ್ಯೋಗಿಗಳಿಗೆ ಈ ರೀತಿ ಸೌಲಭ್ಯಗಳನ್ನು ವಿಸ್ತರಿಸುತ್ತಾ ಹೋಗುವುದು ವಿಪರ್ಯಾಸ. ಪ್ರಧಾನಿ ಇಂಥ ವಿಚಾರಗಳ ಬಗ್ಗೆ ಯೋಚಿಸಬೇಕು.
-ವಿಜಯಾ, ಉಡುಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.