ADVERTISEMENT

ಜಿ-12 ಬಸ್ ಸಂಚಾರ ಪುನರಾರಂಭಿಸಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2012, 19:30 IST
Last Updated 25 ಜೂನ್ 2012, 19:30 IST

ಜಿ-12 ಬಸ್ ಸಂಚಾರ ಪುನರಾರಂಭಿಸಿ
ಕೆ. ಆರ್. ಪುರಂನಿಂದ ಶಾಂತಿನಗರ ಬಸ್ ನಿಲ್ದಾಣಕ್ಕೆ ಸಂಚರಿಸುತ್ತಿದ್ದ ಜಿ-12 ಸಂಖ್ಯೆಯ ನಾಲ್ಕು ಬಸ್‌ಗಳು  ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು. ಆದರೆ ಇದೀಗ ಆ ಬಸ್‌ಗಳನ್ನು ಹೊಸಕೋಟೆಯಿಂದ ಕೆ.ಆರ್. ಪುರಂ ಮಾರ್ಗವಾಗಿ ಶಾಂತಿನಗರಕ್ಕೆ ಗಂಟೆಗೊಮ್ಮೆ ಬಿಡಲಾಗುತ್ತಿದೆ. ಈ ಬಸ್ಸು ಹೊಸಕೋಟೆಯಿಂದಲೇ ಭರ್ತಿಯಾಗಿ ಬರುವುದರಿಂದ ಕೆ. ಆರ್. ಪುರಂನಲ್ಲಿ ಹತ್ತಿಕೊಳ್ಳುವ ಪ್ರಯಾಣಿಕರಿಗೆ ಅನನುಕೂಲವಾಗುತ್ತಿದೆ.

ಆದ್ದರಿಂದ ಕೆ. ಆರ್. ಪುರಂ ಬಸ್ ನಿಲ್ದಾಣದಿಂದ ಎಂದಿನಂತೆ (ಬೆಳಿಗ್ಗೆ 7 ರಿಂದ 10 ಗಂಟೆ) ನಾಲ್ಕೂ ಬಸ್‌ಗಳು ಶಾಂತಿನಗರಕ್ಕೆ ಸಂಚರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಕೋರುತ್ತೇವೆ.
- ಚೈತ್ರಾ ಎಸ್.

ನಾಗಸಂದ್ರಕ್ಕೆ ಬಸ್ ಸೌಲಭ್ಯ ಬೇಕು

ನಾಗಸಂದ್ರ ಸರ್ಕಲ್‌ನಿಂದ ಜಯನಗರ ಕಡೆಗೆ ಹೋಗಲು ಬಸ್ ಅನುಕೂಲ ಇಲ್ಲ. ಜಯನಗರ ಕಡೆಯಿಂದ ಬರುವ ಬಸ್‌ಗಳು ಮಾತ್ರ ನಾಗಸಂದ್ರ ಸರ್ಕಲ್‌ಗೆ ಬರುತ್ತವೆ. ಇಲ್ಲಿನ ನಿವಾಸಿಗಳು ಜಯನಗರ ಕಡೆಗೆ ಹೋಗಲು ಕೃಷ್ಣರಾವ್ ಪಾರ್ಕ್ ಅಥವಾ ಸೌತ್‌ಎಂಡ್ ಬಳಿ ನಡೆದುಕೊಂಡು ಹೋಗಿ ಬಸ್ ಹತ್ತಬೇಕು.

ತ್ಯಾಗರಾಜನಗರದಲ್ಲಿ 210ಎ, 210ಬಿ ಹಾಗೂ ಇತರೆ ಬಸ್‌ಗಳು ಉತ್ತರಹಳ್ಳಿ, ಪದ್ಮನಾಭನಗರ ಕಡೆಗೆ ಹೋಗಲು ಅನುಕೂಲ ಮಾಡಿಕೊಟ್ಟಂತೆ ನಾಗಸಂದ್ರದಿಂದಲೂ ಜಯನಗರ ಕಡೆಗೆ ಈ ಹಿಂದಿನಂತೆ ಕ್ರಮ ಕೈಗೊಳ್ಳುವಂತೆ ಬಿಎಂಟಿಸಿ ಮುಖ್ಯ ಅಧಿಕಾರಿಗಳಲ್ಲಿ ನಾಗರಿಕರ ಪರವಾಗಿ ಪ್ರಾರ್ಥನೆ.
-ಶಿರಾಲಿ, ದೀಪಕ್ ಆರ್. ಶೇಟ್

ಬೇಕು ಮಿನಿ ಬಸ್ ಸಂಚಾರ
ಜಂಬೂಸವಾರಿ ದಿಣ್ಣೆ ಬಸ್ ನಿಲ್ದಾಣದಿಂದ ವೆಂಕಟೇಶ್ವರ ಲೇಔಟ್ ಬಿಡಿಎ ಲೇಔಟ್, ಲೊಯಲೋ, ಹೋಲಿ ಸ್ಪಿರಿಟ್ ಸ್ಕೂಲ್ ಕಡೆಯಿಂದ ಬನ್ನೇರುಘಟ್ಟ ರಸ್ತೆಯ ಮೀನಾಕ್ಷಿ ದೇವಾಲಯದ ಕಡೆ ಸಂಚರಿಸಲು ಮಿನಿ ಬಸ್ ವ್ಯವಸ್ಥೆ ಮಾಡಿದರೆ ಈ ಭಾಗದ ಪ್ರಯಾಣಿಕರಿಗೆ ಅನುಕೂಲವಾಗುತ್ತೆ. ಮಾರ್ಗಸಂಖ್ಯೆ 215ಸಿ ಬಸ್ಸುಗಳು ಕೊತ್ತನೂರು ದಿಣ್ಣೆ ಮುಖ್ಯರಸ್ತೆ ಮೂಲಕ ಪುಟ್ಟೇನಹಳ್ಳಿ ಮಾರ್ಗವಾಗಿ ಜೆ.ಪಿ.ನಗರ ಹಾಗೂ ಜಯನಗರದ ಕಡೆ ಸಂಚರಿಸುತ್ತಿದ್ದು ಆ ಬಸ್ಸಿನಲ್ಲಿ ಪ್ರಯಾಣಿಸಿದರೆ ಮೇಲ್ಕಂಡ ಸ್ಥಳಗಳಿಗೆ ಬರಲು ಬನ್ನೇರುಘಟ್ಟ ರಸ್ತೆಯ ಕಡೆಗೆ ಬರಲು ಮತ್ತೊಂದು ಬಸ್ಸಿನ ಅನಿವಾರ್ಯತೆ ಎದುರಾಗುತ್ತದೆ. ಆದ್ದರಿಂದ ಈ ಮಾರ್ಗದಲ್ಲಿ ಮಿನಿ ಬಸ್ಸುಗಳು ಸಂಚರಿಸುವ ವ್ಯವಸ್ಥೆ ಮಾಡಲು ನನ್ನ ಮನವಿ.
-ವಿ. ಹೇಮಂತಕುಮಾರ್


ಪರವಾನಗಿ ಪರೀಕ್ಷೆ

ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸಿದರೆ ಪರೀಕ್ಷೆಗಾಗಿ ದಿನಾಂಕ ನಿಗದಿಪಡಿಸಲಾಗುತ್ತದೆ. ಮೋಟಾರು ವಾಹನ ಇನ್‌ಸ್ಪೆಕ್ಟರ್‌ಗಳ ಕೊರತೆ ಇರುವುದರಿಂದ ತಕ್ಷಣ ಪರೀಕ್ಷೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಸಬೂಬು ಹೇಳುತ್ತಾರೆ. ಆದರೆ, ಸುಮಾರು 400 ಇನ್‌ಸ್ಪೆಕ್ಟರ್‌ಗಳಲ್ಲಿ ಶೇ 60ರಷ್ಟು ಮಂದಿ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ಅವಶ್ಯಕತೆ ಇಲ್ಲದಿದ್ದರೂ ಕಾರ‌್ಯ ನಿರ್ವಹಿಸುತ್ತಿದ್ದಾರೆ. ಸ್ವಂತ ವಾಹನಗಳ ನೋಂದಣಿ ಮರುನವೀಕರಣವೂ ನಿರಂತರವಾಗಿ ನಡೆಯುತ್ತಿರುತ್ತದೆ. ಆದ್ದರಿಂದ ಮೋಟಾರು ವಾಹನ ಇನ್‌ಸ್ಪೆಕ್ಟರ್‌ಗಳು ಸಾರ್ವಜನಿಕರ ಅನುಕೂಲಕ್ಕೆ ಲಭ್ಯರಾಗುವಂತೆ ಸಾರಿಗೆ ಪ್ರಧಾನ ಕಾರ‌್ಯದರ್ಶಿಗಳು ಶೀಘ್ರ ಕ್ರಮ ಕೈಗೊಳ್ಳುವರೇ?
-ಬಿಎಸ್‌ಎಂ

ದುರಸ್ತಿ ಕೈಗೊಳ್ಳಿ
ಬಸವನಗುಡಿ ಕಹಳೆಬಂಡೆ ರಸ್ತೆಯಲ್ಲಿರುವ ಬಿಎಂಎಸ್ ಮಹಿಳಾ ವಿಶ್ವವಿದ್ಯಾಲಯದ ಬಳಿ ಸಾಮಾನ್ಯ ಪ್ರಮಾಣದ ಕೊಳಾಯಿಯು ಒಡೆದು ಬಹಳ ದಿನಗಳಿಂದ ಜಲವು ಪೋಲಾಗುತ್ತಿದೆ. ಯಾರೋ ಅದಕ್ಕೆ ಬ್ಯಾಂಡೇಜ್ ಸುತ್ತಿದ್ದಾರೆ.  ಆದರೂ ನೀರು ವ್ಯರ್ಥವಾಗುತ್ತಿದೆ.

ಸಂಬಂಧಪಟ್ಟವರು ಕೂಡಲೇ ದುರಸ್ತಿ ಕಾರ್ಯ ಕೈಗೊಂಡು ನೀರು ಪೋಲಾಗುವುದನ್ನು ತಪ್ಪಿಸಬೇಕು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿಯವರಲ್ಲಿ ವಿನಂತಿ.
-ವಿ.ಕೆ. ಸುಬ್ಬಣ್ಣ

ಬಾರದ ನೀರು, ಬೇಸತ್ತ ಜನರು

ಬಿಬಿಎಂಪಿ ವಾರ್ಡ್ 134 ಬಾಪೂಜಿನಗರ ಬಡಾವಣೆಯಲ್ಲಿ ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿಲ್ಲ. ಇಲ್ಲಿನ ಜನರು ಹಣ ಕೊಟ್ಟು ಟ್ಯಾಂಕರ್ ನೀರು ಖರೀದಿಸುತ್ತಿದ್ದಾರೆ. ಆದರೆ ಎಲ್ಲರಿಗೂ ಹಣ ತೆತ್ತು ನೀರು ಕೊಳ್ಳಲು ಸಾಧ್ಯವಿಲ್ಲವಾದ್ದರಿಂದ ಬಹುತೇಕ ಜನರು ಇಲ್ಲಿರುವ ಬೋರ್‌ವೆಲ್‌ಗಳನ್ನು ಅವಲಂಬಿಸಿದ್ದಾರೆ. ಆದರೆ 3ನೇ ಬಿ ಮುಖ್ಯರಸ್ತೆಯಲ್ಲಿರುವ ಬೋರ್‌ವೆಲ್ ಪೈಪ್ ಒಡೆದು 6 ತಿಂಗಳಿಂದ ನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದರಿಂದ ಕೊಳವೆ ಬಾವಿ ಅಥವಾ ಕೊಳವೆ ಸಂಪರ್ಕ ಇರುವ ಮನೆಗಳಿಗೆ ನಾವು ನೀರಿಗಾಗಿ ಮೊರೆ ಹೋಗಬೇಕಾದ ಪರಿಸ್ಥಿತಿ ನಮ್ಮದಾಗಿದೆ. ಆದ್ದರಿಂದ ಬಡಾವಣೆಯ ನಾಗರಿಕರು ಗ್ರಾಹಕರ ವೇದಿಕೆಯ ಮೆಟ್ಟಿಲೇರಲು ತೀರ್ಮಾನಿಸಿದ್ದೇವೆ. ಕಾವೇರಿ ನೀರು ಪೂರೈಕೆ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ತಾತ್ಕಾಲಿಕ ಪರಿಹಾರ ಒದಗಿಸಿದರೇ ವಿನಾ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಿಲ್ಲ. ಈಗಲಾದರೂ ವಾಸ್ತವವನ್ನು ಅರಿತು ನೀರಿನ ಬವಣೆ ನೀಗಿಸುವರೇ?
-ರವಿಕುಮಾರ್

ಸೇತುವೆ ನಿರ್ಮಾಣ ವಿಳಂಬ ಯಾಕೆ?

ಮೈಸೂರು ರಸ್ತೆ ದೀಪಾಂಜಲಿ ನಗರದ ರೈಲ್ವೆ ಕ್ರಾಸ್ ಹಳಿಗಳ ಪಕ್ಕ ನೇತಾಜಿ ಬಡಾವಣೆ ಹಾಗೂ ಬಿಸಿಸಿ ಬಡಾವಣೆ ರೈಲ್ವೆ ಹಳಿಗಳ ಕೆಳಗೆ ಅಥವಾ ಮೇಲುಸೇತುವೆ ನಿರ್ಮಾಣದ ಬಗ್ಗೆ ನೈರುತ್ಯ ರೈಲ್ವೆ ಡೆಪ್ಯೂಟಿ ಚೀಫ್ ಎಂಜಿನಿಯರ್‌ರವರು ಬಿಬಿಎಂಪಿಯ ವಿಶೇಷ ಆಯುಕ್ತರಿಗೆ ಈಗಾಗಲೇ ಪತ್ರ ಬರೆದಿದ್ದಾರೆ. ರೈಲ್ವೆ ಸುರಂಗಮಾರ್ಗ  ಅಥವಾ ಮೇಲುಸೇತುವೆ ನಿರ್ಮಾಣಕ್ಕಾಗಿ ರೂ. 1.70 ಕೋಟಿ ಯೋಜನಾ ವೆಚ್ಚವನ್ನು ರೈಲ್ವೆ ಇಲಾಖೆ ಭರಿಸಲು ಸಿದ್ದ. ಆದರೆ ಅದರ ನಕ್ಷೆ ಹಾಗೂ ಕಾಮಗಾರಿ ಪ್ರಾರಂಭಿಸಲು ಯೋಜನಾವೆಚ್ಚದ ಶೇ. 2 ರಷ್ಟು ಮೊತ್ತವನ್ನು ಠೇವಣಿ ಇಡುವಂತೆ ಕೋರಿತ್ತು.

ಇದಾಗಿ ಸುಮಾರು ಏಳು ತಿಂಗಳಾದರೂ ಕಾಮಗಾರಿ ಕಾರ್ಯಾರಂಭ ಮಾಡಿಲ್ಲ.  ಆದ್ದರಿಂದ ರೈಲ್ವೆ ಇಲಾಖೆಗೆ ಠೇವಣಿಯಿಡುವ ಮೂಲಕ ಪಾದಚಾರಿ ಸಂಪರ್ಕ ಸೇತುವೆ ಕಾಮಗಾರಿಗೆ ಚಾಲನೆ ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂದು ವಿನಂತಿ.
-ರಾಮಕೃಷ್ಣ




ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT