ADVERTISEMENT

ಜೈಪುರ ಸುಂದರಿ ಮಿಸ್ ಗುಲ್ಬರ್ಗ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2011, 19:30 IST
Last Updated 14 ಏಪ್ರಿಲ್ 2011, 19:30 IST

ರಾಜಸ್ತಾನದ ಜೈಪುರದ ಯುವತಿ ಈಗ ಗುಲ್ಬರ್ಗ ಸುಂದರಿಯ ಪಟ್ಟಧಾರಿಣಿ. ಗುಲ್ಬರ್ಗ ಉತ್ಸವದ ಪ್ರಯುಕ್ತ ಏರ್ಪಡಿಸಿದ್ದ ‘ಗುಲ್ಬರ್ಗ ಮಿಸ್’ ಸ್ಪರ್ಧೆಯಲ್ಲಿ ಇಂಥದ್ದೊಂದು ಘಟನೆ ಜರುಗಿದೆ. ಈ ಯುವತಿ ಕಳೆದ ಕೆಲವು ತಿಂಗಳುಗಳಿಂದ ಸೇಡಂನ ಸಿಮೆಂಟ್ ಉದ್ಯಮದಲ್ಲಿ ಉದ್ಯೋಗಿಯಾಗಿರುವುದು ಹೊರತುಪಡಿಸಿದರೆ ಗುಲ್ಬರ್ಗಕ್ಕೂ ಈ ಬಾಲೆಗೂ ಯಾವ ‘ಬಾದರಾಯಣ’ ಸಂಬಂಧವೂ ಇಲ್ಲ. ಇರುವುದು ಕೇವಲ ಭಾವನ ಸಂಬಂಧ ಮಾತ್ರ. ಇವರ ಭಾವ ಗುಲ್ಬರ್ಗ ಮಹಾನಗರ ಪಾಲಿಕೆಯ ಆಯುಕ್ತರು.

‘ಮಿಸ್ ಗುಲ್ಬರ್ಗ’ ಸ್ಪರ್ಧೆಗೆ ಇದ್ದ ಮಾನದಂಡವೆಂದರೆ ಒಂದು ರ್ಯಾಂಪ್ ನಡಿಗೆ ಸುತ್ತು. ಇನ್ನೊಂದು ಪ್ರಶ್ನೋತ್ತರದ ಅಂತಿಮ ಸುತ್ತು. ಆದರೆ ‘ಗುಲ್ಬರ್ಗ’ ಎಂಬ ಮಹತ್ವದ ಹೆಸರೊಂದು ಮುಡಿಗೇರಿಸಿಕೊಳ್ಳುವ ಯುವತಿಯರಿಗೆ ಗುಲ್ಬರ್ಗದ ಬಗ್ಗೆ ಗೊತ್ತಿರುವುದೇನು ಎಂಬುದನ್ನು ಒರೆಗೆ ಹಚ್ಚುವ ಯಾವ ಪ್ರಯತ್ನಗಳೂ ಇಲ್ಲಿ ಆಗಲಿಲ್ಲ.

ಸ್ಪರ್ಧೆಗೆ ಮುನ್ನ ಯಾವ ಮಾನದಂಡ ಆಧರಿಸಿ ಅಂಕಗಳನ್ನು ನೀಡಲಾಗುತ್ತಿದೆ ಎಂಬುದನ್ನು ನಿರ್ಣಾಯಕರು ಸ್ಪಷ್ಟ ಪಡಿಸಲಿಲ್ಲ. ನೇರವಾಗಿ ಕೊನೆಯ ಸುತ್ತಿಗೆ ಯುವತಿಯರನ್ನು ಆಯ್ಕೆ ಮಾಡಿದಾಗ ಕೆಲವು ಸ್ಪರ್ಧಿಗಳು ವಿರೋಧ ವ್ಯಕ್ತಪಡಿಸಿದರು. ಸಭಿಕರ ಸಾಲಿನಲ್ಲಿ ಕುಳಿತಿದ್ದ ಜಿಲ್ಲಾಧಿಕಾರಿ ನಿರ್ಣಾಯಕರನ್ನು ಪ್ರಶ್ನಿಸುವಂತಿಲ್ಲ ಎಂದು ‘ಆದೇಶ’ ನೀಡಿದರು. ಬಹುತೇಕ ಸ್ಪರ್ಧಿಗಳ ಪಾಲಕರು ‘ಪಾರದರ್ಶಕ ವ್ಯವಸ್ಥೆ ಇರದ ಸ್ಪರ್ಧೆ ಇದು’ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ಉಡುಗೆ, ನಡಿಗೆ, ಆತ್ಮವಿಶ್ವಾಸ ಹಾಗೂ ಸೌಂದರ್ಯವನ್ನು ಸ್ಪರ್ಧೆಗೆ ಪರಿಗಣಿಸಲಾಗಿದೆ ಎಂದು ನಿರ್ಣಾಯಕರಲ್ಲಿ ಒಬ್ಬರು ಸ್ಪಷ್ಟಪಡಿಸಿದರು. ಆದರೆ  ‘ಗುಲ್ಬರ್ಗ ಸುಂದರಿ’ ಪಟ್ಟ ಧರಿಸಲು ಅದಷ್ಟೇ ಸಾಕೇ? ಗುಲ್ಬರ್ಗದ ಬಗ್ಗೆ ಅವರ ಒಲವು, ನಿಲುವು ಏನು? ಗುಲ್ಬರ್ಗವನ್ನು ಪ್ರತಿನಿಧಿಸುವ ಯಾವ ಅರ್ಹ ಗುಣ ಅವರಲ್ಲಿದೆ? ಇದ್ಯಾವುದೂ ಇಲ್ಲಿ ಪ್ರಮುಖವಾಗಲೇ ಇಲ್ಲ. ‘ನಮ್ಮೂರಿನ ಬಗ್ಗೆ ಅಭಿಮಾನ ಇಲ್ಲದಿದ್ದರೂ ಪರವಾ ಇಲ್ಲ; ಉಡುಗೆ, ನಡಿಗೆ, ಆತ್ಮ ವಿಶ್ವಾಸವಿದ್ದರೆ ಸಾಕು. ಮುಂದಿನ ವರ್ಷ ಬೆಂಗಳೂರಿನ ಬೆಡಗಿಯರೂ ಪಾಲ್ಗೊಳ್ಳಲಿ. ಅನ್ಯರಿಗೇಕೆ ಗುಲ್ಬರ್ಗದ ಪಟ್ಟ’ ಎಂಬುದು ಬಹುತೇಕ ಪಾಲಕರ ಪ್ರಶ್ನೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.