ADVERTISEMENT

ಪ್ರಶ್ನಿಸುವ ಹಕ್ಕು ಜನರಿಗಿದೆ

ಎಚ್.ಎಸ್.ದೊರೆಸ್ವಾಮಿ, ಬೆಂಗಳೂರು.
Published 27 ಜೂನ್ 2011, 19:30 IST
Last Updated 27 ಜೂನ್ 2011, 19:30 IST

ಜನಲೋಕಪಾಲ್ ಮಸೂದೆಯ ಕರಡನ್ನು ತಿರಸ್ಕರಿಸಿರುವ ಕೇಂದ್ರ ಸರ್ಕಾರ ಈ ಮೂಲಭೂತ ಪ್ರಶ್ನೆಗಳನ್ನು ಎತ್ತಿದೆ. ಅವುಗಳೆಂದರೆ,

1. ಕರಡು ಮಸೂದೆಯನ್ನು ರಚಿಸಿ, ಅದನ್ನು ಸಂಸತ್ತಿನ ಮುಂದೆ ಇಡುವ ಅಧಿಕಾರ ಸರ್ಕಾರದ್ದು. ಸಿವಿಲ್ ಸೊಸೈಟಿಗೆ, ಆ ಅಧಿಕಾರ ಇಲ್ಲ.

2. ಸಿವಿಲ್ ಸೊಸೈಟಿ ಸದಸ್ಯರು ಸಮಾನಾಂತರ ಸರ್ಕಾರ ರಚಿಸಲು ಹೊರಟಿದ್ದಾರೆ.

3. ಸಿವಿಲ್ ಸೊಸೈಟಿ ಸದಸ್ಯರು ಸ್ವಯಂಘೋಷಿತ ನಾಯಕರು. ಇವರಿಗೆ ಪ್ರಜೆಗಳ ಪರವಾಗಿ ಮಾತನಾಡುವ ಹಕ್ಕೆಲ್ಲಿದೆ?

ಕರಡು ಮಸೂದೆಯನ್ನು ತಯಾರಿಸುವ ಹಕ್ಕು ಕೇಂದ್ರ ಸರ್ಕಾರದ್ದು ನಿಜ. ಆದರೆ ಕಳೆದ 40 ವರ್ಷಗಳಿಂದ, ಬಂದ ಸರ್ಕಾರಗಳೆಲ್ಲ ಲೋಕಪಾಲ್ ಮಸೂದೆಯನ್ನು ರಚಿಸುವುದರಲ್ಲಿ ವಿಫಲವಾಗಿವೆ. ಇನ್ನು 40 ವರ್ಷಗಳಷ್ಟು ಸಮಯ ನೀಡಿದರೂ ಸರ್ಕಾರ ಈ ಮಸೂದೆಯನ್ನು ಅಂಗೀಕರಿಸುವ ಸಂಭವವಿಲ್ಲ.

ಇದು ಪ್ರಜಾಸರ್ಕಾರ. ಪ್ರಜಾಸರ್ಕಾರ ಕರ್ತವ್ಯ ಭ್ರಷ್ಟವಾದಾಗ ಅದನ್ನು ಪ್ರಶ್ನಿಸುವ ಹಕ್ಕು ಪ್ರಜೆಗಲ್ಲದೆ ಮತ್ಯಾರಿಗಿದೆ? ಆದ್ದರಿಂದಲೇ ಅಣ್ಣಾ ಹಜಾರೆಯವರು ಸರ್ಕಾರದಲ್ಲಿನ ಭ್ರಷ್ಟಾಚಾರ ನಿರ್ಮೂಲನ ಮಾಡಲು ಮಸೂದೆ ರಚಿಸುವಂತೆ ಒತ್ತಾಯಿಸಿ ಜನಾಂದೋಲನ ಆರಂಭಿಸಿದರು.

ಸರ್ಕಾರ ಅದಕ್ಕೆ ಮಣಿದು ಅಣ್ಣಾ ಹಜಾರೆಯವರನ್ನು ಮಾತುಕತೆಗೆ ಕರೆಯಿತು. ಅಣ್ಣಾ, ಜನ ಲೋಕಪಾಲ್ ಮಸೂದೆ ತಯಾರಿಸಿ ಅದರ ಚರ್ಚೆಗೆ ಸರ್ಕಾರದ ಪ್ರತಿನಿಧಿಗಳು ಐವರು ಮತ್ತು ಸಿವಿಲ್ ಸೊಸೈಟಿ ಸದಸ್ಯರ ಐವರನ್ನು ಒಳಗೊಂಡ ಸಮಿತಿಯನ್ನು ರಚಿಸಲು ಒತ್ತಾಯ ತಂದರು.

ಸರ್ಕಾರ ಈ ಸಲಹೆಯನ್ನು ಒಪ್ಪಿಕೊಂಡು, ಸಮಿತಿಯ ರಚನೆಗೆ ಒಪ್ಪಿಗೆ ನೀಡಿತು. ಸಮಿತಿಯ ಸಭೆಗಳೂ ಈಗಾಗಲೇ ನಡೆದಿವೆ. ಅಂದಮೇಲೆ ಸಿವಿಲ್ ಸೊಸೈಟಿಯ ಅಧಿಕಾರವನ್ನು ಸರ್ಕಾರ ಒಪ್ಪಿಕೊಂಡಂತಾಯಿತು.

ಸಿವಿಲ್ ಸೊಸೈಟಿ ಸಮಾನಾಂತರ ಸರ್ಕಾರ ರಚಿಸಲು ಹೊರಟಿದೆ ಎಂದು ಸಚಿವ ಸಿಬಲ್ ಹೇಳುತ್ತಾರೆ. ಅದು ಸುಳ್ಳು. ಸರ್ಕಾರ ಭ್ರಷ್ಟಾಚಾರವನ್ನು ತಡೆಗಟ್ಟಲು ವಿಫಲವಾದಾಗ, ಒಂದು ಪರಿಣಾಮಕಾರಿಯಾದ ಲೋಕಪಾಲ್ ಮಸೂದೆಯನ್ನು ತಯಾರಿಸಿ ಇದನ್ನು ಅಂಗೀಕಾರ ಮಾಡಿ ಎಂದು ಸರ್ಕಾರ ಮತ್ತು ಸಂಸತ್ತನ್ನು  ಕೇಳುವ ಹಕ್ಕು ಪ್ರಜೆಗಿದೆ.

ಈ ಹಕ್ಕನ್ನು ಸಿವಿಲ್ ಸೊಸೈಟಿ ಕೇಳಿದರೆ, ಸಿಬಲ್ ಅವರು ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ಸಿವಿಲ್ ಸೊಸೈಟಿ ಪ್ರತಿ ಸರ್ಕಾರ ರಚಿಸಲು ಹೊರಟಿದೆ ಎಂದು ಬೊಬ್ಬೆ ಹಾಕಿರುವುದು ಎಷ್ಟು ಸಮಂಜಸ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.