ADVERTISEMENT

ಬದ್ಧತೆ ಇಲ್ಲದ ಅಧಿಕಾರಿಗಳ ವರ್ಗ

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 19:30 IST
Last Updated 14 ಜೂನ್ 2011, 19:30 IST

ಸ್ನಾತಕೋತ್ತರ ವೈದ್ಯಕೀಯ ಸೀಟುಗಳ ಹಂಚಿಕೆಯಲ್ಲಿ ಆಗಿರುವ ಗೊಂದಲ, ಅವ್ಯವಹಾರ ನಮ್ಮ ಅಧಿಕಾರಿಶಾಹಿ ವರ್ಗ ಹಣಕ್ಕಾಗಿ ಏನೆಲ್ಲಾ ಮಟ್ಟಕ್ಕೆ ಇಳಿಯ ಬಲ್ಲದು ಎಂಬುದಕ್ಕೆ ಸಾಕ್ಷಿ. ವಿಚಿತ್ರವೆಂದರೆ ಕಳೆದ ಹತ್ತಾರು ವರ್ಷಗಳಿಂದ ಈ ರೀತಿಯ ಅಕ್ರಮಗಳು ಸರಾಗವಾಗಿ ನಡೆಯುತ್ತಾ ಬಂದಿದ್ದರೂ ಈವರೆಗೆ ಒಬ್ಬನೇ ಒಬ್ಬ ಅಧಿಕಾರಿ ಮೇಲಾಗಲಿ, ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ವಿರುದ್ಧ ಸರ್ಕಾರ ಕ್ರಮಕೈಗೊಂಡಿಲ್ಲ.

ಇವೆಲ್ಲವುಗಿಂತ ವಿಚಿತ್ರ ಸಂಗತಿ ಎಂದರೆ ನಿವೃತ್ತ ಸರ್ಕಾರಿ ಅಧಿಕಾರಿಗಳೇ ಕಾಮೆಡ್-ಕೆ ಪರ  ಈ ವರ್ಷ ಕಾರ್ಯನಿರ್ವಹಿಸಲಾರಂಭಿಸಿರುವುದು.

ಕೆಲ ತಿಂಗಳವರೆಗೆ ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದವರೊಬ್ಬರು ಈಗ ಕಾಮೆಡ್- ಕೆ ಕಾರ್ಯದರ್ಶಿ. ಕಳೆದ ಬಾರಿ ವಿದ್ಯಾರ್ಥಿಗಳ ಪರ ವಾದಿಸುತ್ತಿದ್ದ ಈ ಅಧಿಕಾರಿ ಈಗ ಖಾಸಗಿ ಸಂಸ್ಥೆಗಳ ಪರ ಲಾಬಿ ನಡೆಸುತ್ತಿದ್ದಾರೆ. ಈ ಅವ್ಯವಸ್ಥೆ ಕರ್ನಾಟಕದಲ್ಲಷ್ಟೆ ನಡೆಯಲು ಸಾಧ್ಯ.

ಈ ಬಾರಿ ನಡೆದ ಸೀಟು ಹಂಚಿಕೆಯ ಪ್ರಕ್ರಿಯೆಯನ್ನೇ ಗಮನಿಸಿದರೆ, ಎರಡೆರಡು ಬಾರಿ ಸೀಟ್ ಮ್ಯಾಟ್ರಿಕ್ಸ್ ನಡೆಸುವ ಅಗತ್ಯತೆ ಇರಲೇ ಇಲ್ಲ. ಮೊದಲ ಬಾರಿಯ ಕೌನ್ಸೆಲಿಂಗ್ ಸಂದರ್ಭದಲ್ಲಿ, ವೈದ್ಯಕೀಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸೀಟ್ ಮ್ಯಾಟ್ರಿಕ್ಸ್‌ನ್ನು ಎರಡು ದಿನಗಳ ಮೊದಲೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದರು.

ಆದರೆ ಎರಡೇ ದಿನಗಳಲ್ಲಿ ವರ್ಗಾವಣೆಯ ದಂಧೆಯಲ್ಲಿ ಈ ಹಿರಿಯ ಅಧಿಕಾರಿಗಳನ್ನು ವರ್ಗಾಯಿಸಲಾಯಿತು. ಎರಡನೇ ಕೌನ್ಸೆಲಿಂಗ್ ಸಂದರ್ಭದಲ್ಲಿ ಸ್ಪಾಟ್ ಸೆಲೆಕ್ಷ್ಯನ್ ಎಂಬ ನಾಟಕ. ಸರ್ಕಾರಕ್ಕೆ ವಿದ್ಯಾರ್ಥಿಗಳ ಹಿತವನ್ನು ಕಾಪಾಡುವ ಜರೂರತ್ತಿದ್ದರೆ ಕೌನ್ಸೆಲಿಂಗ್ ಮುಗಿಯುವವರೆಗಾದರೂ ವೈದ್ಯಕೀಯ ಇಲಾಖೆಯಲ್ಲಿ ವರ್ಗಾವಣೆ ತಡೆ ಹಿಡಿಯಬಹುದಿತ್ತು. ಆದರೆ ಅದು ಆಳುವ ವರ್ಗದ ಹಿತಾಸಕ್ತಿಗಳಿಗೆ ಪೂರಕವಾಗಿರದ ಕಾರಣ ಅಧಿಕಾರಿಗಳನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಲಾಗಿದೆ ಎಂದೇ ಭಾವಿಸಬೇಕಾಗಿದೆ.

ಒಬ್ಬ ಅಧಿಕಾರಿ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ  ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಅವ್ಯವಹಾರ ನಡೆದಿದೆ ಎಂದು ಹೈಕೋರ್ಟ್‌ಗೆ ತಿಳಿಸಲಾಯಿತು. ಲೋಕಾಯುಕ್ತ ವರದಿ ಕೂಡಾ ಅದನ್ನೇ ಪ್ರಮಾಣಿಸಿತು. ಆ ಅಧಿಕಾರಿಯ ವರ್ಗವಾದ ಕೂಡಲೇ ತನಿಖೆ ಹೊಸ ತಿರುವು ಪಡೆದುಕೊಂಡಿತು. ಲೋಕಾಯುಕ್ತ ವರದಿ ಅವ್ಯವಹಾರ ನಡೆದಿದೆ ಎಂದು ತಿಳಿಸಿದರೂ ಸರ್ಕಾರ ಅಸ್ಪಷ್ಟ ವರದಿ ನೀಡಿ ಬಚಾವ್ ಮಾಡಿತು. ಇದೆಲ್ಲದರ ಲಾಭ ಪಡೆದುಕೊಂಡದ್ದು ಯಾರೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.