ADVERTISEMENT

ಬಿಜೆಪಿ ಆಡಳಿತದಲ್ಲಿ ಸ್ವಚ್ಛತೆ ತನ್ನಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2011, 18:30 IST
Last Updated 10 ಮಾರ್ಚ್ 2011, 18:30 IST

ಆರ್.ಎಸ್.ಎಸ್. ಸರ ಸಂಘ ಚಾಲಕ ಮೋಹನ್ ಭಾಗವತ್‌ರ ಭಾಷಣದ (ಪ್ರ. ವಾ.ಮಾ.7) ವರದಿ ಬಗ್ಗೆ ಪ್ರತಿಕ್ರಿಯೆ.
ಉನ್ನತ ಸ್ಥಾನದಲ್ಲಿರುವವರ ಭ್ರಷ್ಟಾಚಾರದ ಬಗ್ಗೆ ತಾವು ವ್ಯಕ್ತಪಡಿಸಿರುವ ಆತಂಕದ ಬಗೆಗೆ ನನಗೂ ದುಃಖವಾಗಿದೆ. ನಾನೊಬ್ಬ ವಯೋವೃದ್ಧ. 1948ನೇ ಇಸವಿಯಲ್ಲಿ ಸಂಘದ ಮೇಲಿನ ಬಹಿಷ್ಕಾರವನ್ನು ತೆಗೆಯುವಂತೆ ಚಳವಳಿ ನಡೆಸಿ ಜೈಲುವಾಸ ಅನುಭವಿಸಿದವನು. ನನ್ನ ಸಂಘ ಸಂಪರ್ಕ ಆಗಿನದು.

 ಆಗಿನ ಎಲ್ಲ ಸ್ವಯಂ ಸೇವಕ ಆದರ್ಶ ವ್ಯಕ್ತಿ ಪೂಜ್ಯ ಗುರೂಜಿಯವರು. ಆಗಿನ ಗುರೂಜಿಯವರ ಆದರ್ಶ ಇವತ್ತಿಗೂ ಎಲ್ಲ ಸ್ವಯಂ ಸೇವಕರನ್ನೂ ಮುನ್ನಡೆಸುತ್ತಿದೆ. ಕೆಲಕಾಲದ ಹಿಂದೆ 20ಕ್ಕೂ ಹೆಚ್ಚಿರದ ಸ್ವಯಂ ಸೇವಕ ಬಿ.ಜೆ.ಪಿ. ಸಂಸದರು, 100ಕ್ಕೂ ಮಿಕ್ಕಿ ಕರ್ನಾಟಕ ರಾಜ್ಯದ ಆಡಳಿತ ವಹಿಸಿಕೊಂಡಿರುವುದರಲ್ಲಿ ಈ ಸ್ವಯಂ ಸೇವಕರ ಕೊಡುಗೆ ಬಹಳಷ್ಟು.
 
ಆದರೆ ಸಂಘ ಸಂಸ್ಕೃತಿಗೆ ಅಸಂಬದ್ಧವಾದ ಭ್ರಷ್ಟತೆ ಮತ್ತು ಸ್ವಾರ್ಥ ಆಕ್ರಮಿಸುತ್ತಿರುವುದು ಬಹಳ ಆತಂಕದ ಸಂಗತಿ. ಭ್ರಷ್ಟತೆಯಿಂದ ದೊರಕುವ ಸಂಪತ್ತಾಗಲೀ ಅಧಿಕಾರವಾಗಲೀ ನಿಜವಾದ ಸ್ವಯಂ ಸೇವಕರಿಗೆ ಬೇಕಿಲ್ಲ. ಮಾನ್ಯರೇ ತಮ್ಮ ಗಮನವನ್ನು ಈ ಕಡೆ ಹರಿಸಿ ಕರ್ನಾಟಕದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆದು ಸಂಘದ ಯುವ ಸ್ವಯಂ ಸೇವಕರನ್ನು ಆದರ್ಶ ಪಥದಲ್ಲಿ ನಡೆಸುವುದು ನಿಮ್ಮ ಆದ್ಯ ಕರ್ತವ್ಯ.

ಈ 50 ವರ್ಷಗಳಲ್ಲಿ ಸಂಘ ಪರಿವಾರವಾಗಿ ಹುಟ್ಟಿ ಬೆಳೆಯುತ್ತಿರುವ 50ಕ್ಕೂ ಮಿಕ್ಕ ಅನೇಕ ಸಂಸ್ಥೆಗಳಲ್ಲಿ ಕಾಣಸಿಗದ ಈ ಸ್ವಾರ್ಥ ಮತ್ತು ಭ್ರಷ್ಟತೆ ರಾಜಕೀಯ ರಂಗದಲ್ಲಿ ಸುತ್ತಾಡುತ್ತಿದ್ದು ನನ್ನಂತಹ ಅನೇಕ ವಯೋವೃದ್ಧ ಸ್ವಯಂ ಸೇವಕರ ಮನನೋಯಿಸುತ್ತಿದೆ. ನಿಮ್ಮ ಪ್ರಾಮಾಣಿಕ ಆತ್ಮವಿಮರ್ಶೆ ನಿಮಗೆ ಮನದಟ್ಟು ಮಾಡಿಸುತ್ತದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.