ADVERTISEMENT

ಭವಿಷ್ಯಕ್ಕೆ ಒಗಟಿನ ಗಿಲೀಟು ಏಕೆ?

ಅನ್ನಪೂರ್ಣ ವೆಂಕಟನಂಜಪ್ಪ
Published 3 ಡಿಸೆಂಬರ್ 2013, 19:30 IST
Last Updated 3 ಡಿಸೆಂಬರ್ 2013, 19:30 IST

ಕೋಡಿ ಮಠದ ಶ್ರೀಗಳು ‘ಇನ್ನು ಹತ್ತು ತಿಂಗಳೊಳಗೆ ಸಿದ್ದರಾಮಯ್ಯನವರ ಸರ್ಕಾರ ಬಿದ್ದುಹೋಗುತ್ತದೆ’ ಎಂದು ಭವಿಷ್ಯ ನುಡಿದಿದ್ದಾರೆ.

ಏನೋ ಒಗಟಿನ ರೂಪದಲ್ಲಿ ಭವಿಷ್ಯ ಹೇಳುವುದು, ನಂತರ ಆ ಒಗಟಿಗೆ ವರ್ತಮಾನದ ಘಟನೆಯನ್ನು ತಳುಕುಹಾಕಿ ‘ನಾನು ಆಗಲೇ ಹೇಳಿದ್ದೆ’ ಎಂದು ನುಡಿ ಯುವುದು ಇವರ ಜಾಯಮಾನ. ಇವರು ಹೇಳುವ ಭವಿಷ್ಯ ಅಡ್ಡಗೋಡೆಯ ಮೇಲಿನ ದೀಪದಂತೆ. ಹಾಗಾದರೂ ಆಗಬಹುದು–ಹೀಗಾದರೂ ಆಗಬಹುದು ಎಂಬಂತಿದೆ.

ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಇವರ ಭವಿಷ್ಯದ ಒಗಟು ‘ಅಂಬಲಿ ಹಳಸೀತು, ಕಂಬಳಿ ಹಾಸೀತು, ಕೈಲಾಸದಲ್ಲಿ ಗಂಟೆ ಬಾರಿಸೀತು, ಅಚ್ಚರಿಯ ಫಲಿತಾಂಶ ಬಂದೀತು’.

ಕಂಬಳಿ ಹಾಸೀತು ಎಂದರೆ ಕುರುಬರ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಾರೆ ಎಂದು ಮೊದಲೇ ಹೇಳಿದ್ದೆ ಎಂದು ಈಗ ಇವರು ಬೀಗುತ್ತಿದ್ದಾರೆ. ಕುರುಬರು ಮಾತ್ರ ಕಂಬಳಿ ಹಾಸುವುದಿಲ್ಲ. ಅಥವಾ ಸಿದ್ದರಾಮಯ್ಯ ಮಾತ್ರ ಕುರುಬರಲ್ಲ, ಅಂಬಲಿ ಎಂದರೆ ಇವರ ದೃಷ್ಟಿಯಲ್ಲಿ ಹಿಂದಿನ ಸರ್ಕಾರವೇ? ಕೈಲಾಸದಲ್ಲಿ ಗಂಟೆ ಬಾರಿಸೀತು ಎಂಬುದರ ಅರ್ಥವೇನು?

ಇಷ್ಟಕ್ಕೂ ಇವರು ಭವಿಷ್ಯವನ್ನು ನಾಲ್ಕಾರು ರೀತಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗು ವಂತಹ ಒಗಟಿನಲ್ಲಿ ಹೇಳುವುದೇಕೆ? ಮುಂದೆ ತಮ್ಮನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗು ವಂತೆ, (ಒಂದು ವಿಧದಲ್ಲಿ ನಿರೀಕ್ಷಣಾ ಜಾಮೀನು ಕೋರುವವರಂತೆ!) ಈ ತರಹ ಹೇಳುತ್ತಾರಾ?

ಇಂತಹ ಜಾಣತನದ ಮಾತನ್ನಾಡಿ ಜನರನ್ನು ದಾರಿ ತಪ್ಪಿಸುವ ಕೆಟ್ಟ ಸ್ವಭಾವ ವನ್ನು ಇಂತಹ ಸ್ವಾಮಿಗಳು ಬಿಡಬೇಕು. ಬಹುಶಃ ಸಿದ್ದರಾಮಯ್ಯನವರ ಸರ್ಕಾರ ಎಲ್ಲಿ ಮೂಢನಂಬಿಕೆ ವಿರುದ್ಧ ಕಾನೂನು ತಂದು ತಮ್ಮಂತಹವರನ್ನು ನಿರುದ್ಯೋಗಿಗಳನ್ನಾಗಿ ಸುತ್ತದೋ ಎಂಬ ತಳಮಳದಿಂದ ಇವರು ಇಂತಹ ಮಾತನ್ನಾಡುತ್ತಿರಬಹುದು.

ಸಾಧ್ಯವಿದ್ದರೆ ಇವರು ನೇರ ಮಾತುಗಳಲ್ಲಿ ರಾಜ್ಯದ ಭವಿಷ್ಯವನ್ನು ಅಧಿಕೃತ ಪತ್ರದಲ್ಲಿ ಜವಾಬ್ದಾರಿಯುತ ನಾಗರಿಕರ ಮುಂದಿಡಲಿ. ನಂತರ ಅದರ ಫಲಿತಾಂಶವನ್ನು ಜನತೆ ನೋಡಿ ನಿರ್ಧರಿಸಲಿ. ಅದು ಬಿಟ್ಟು ಇಂತಹ ಚಮತ್ಕಾರಿಕ ಒಗಟುಗಳಲ್ಲಿ ಹೇಳಿ ನಂತರ ಅದರ ಅರ್ಥವನ್ನು ತಿರುಚುವುದು ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.