ADVERTISEMENT

ಭಾರೀ ವಾಹನಗಳ ಸಂಚಾರ ನಿಲ್ಲಿಸಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2013, 19:59 IST
Last Updated 15 ಏಪ್ರಿಲ್ 2013, 19:59 IST

ಮಲ್ಲೇಶ್ವರ ವೃತ್ತದಲ್ಲಿ ಅಂಡರ್‌ಪಾಸ್ ನಿರ್ಮಾಣದ ಬಳಿಕ ಸರ್ವಿಸ್ ರಸ್ತೆಗಳು ಬಹಳ ಕಿರಿದಾಗಿವೆ. ಮೂರು ಅಡಿ ಅಗಲದ ಪಾದಚಾರಿ ಮಾರ್ಗವೂ ಇದೆ. ಕಿರಿದಾದ ರಸ್ತೆಯಲ್ಲಿ ಬಿಎಂಟಿಸಿ ಬಸ್‌ಗಳು ಸಂಚರಿಸುವುದರಿಂದ ಇಲ್ಲಿನ ಕೆ. ಸಿ. ಜನರಲ್ ಆಸ್ಪತ್ರೆಗೆ ಬರುವ ರೋಗಿಗಳಿಗೆ ನಡೆದು ಬರುವುದು ಬಹಳ ತೊಂದರೆ ಆಗುತ್ತಿದೆ.

ಈ ಹಿಂದೆ ಎಲ್ಲಾ ಬಸ್‌ಗಳು ಸಂಪಿಗೆ ಚಿತ್ರಮಂದಿರದ ಬಳಿಯಿಂದ ಎಂ.ಡಿ. ಬ್ಲಾಕ್ ಮೂಲಕ ಸಂಚರಿಸುತ್ತಿದ್ದವು. ಆದರೆ ಈಗ ಎಲ್ಲಾ ಬಿಎಂಟಿಸಿ ಬಸ್‌ಗಳು ಕಿರಿದಾದ ಸರ್ವಿಸ್ ರಸ್ತೆ ಮೂಲಕವೇ ಹಾದುಹೋಗುತ್ತಿದೆ.

ದಯವಿಟ್ಟು ಸಂಚಾರ ಪೊಲೀಸ್ ಈ ಬಗ್ಗೆ ಗಮನಹರಿಸಿ ಭಾರಿ ವಾಹನಗಳ ಸಂಚಾರವನ್ನು ನಿಲ್ಲಿಸಬೇಕು ಇಲ್ಲವೇ ರಸ್ತೆ ಅಗಲೀಕರಣಕ್ಕೆ ಶಿಫಾರಸು ಮಾಡಿ ಕನಿಷ್ಠ 30 ಅಡಿ ಅಗಲದ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕಾಗಿದೆ.

ವೃತ್ತದ ಬಳಿ ಎಡ ತಿರುವು ತೆಗೆದುಕೊಳ್ಳಲು ಬಸ್‌ಗಳಿಗೆ ಸಾಧ್ಯವಾಗದೆ ಬಹಳ ನಿಧಾನವಾಗಿ ತಿರುಗುವುದರಿಂದ ಸಂಪಿಗೆ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತದೆ. ಪಾದಚಾರಿಗಳು ರಸ್ತೆ ದಾಟಲೂ ಕಷ್ಟ. ವೃತ್ತದ ಬಳಿ ಪೊಲೀಸರೂ ಇರುವುದಿಲ್ಲ 18 ಕೋಟಿ ಖರ್ಚು ಮಾಡಿ ಈ ಅಂಡರ್‌ಪಾಸ್ ನಿರ್ಮಿಸುವಾಗ ನಿಲುಗಡೆರಹಿತ ಸಂಚಾರ ವ್ಯವಸ್ಥೆ ಮಾಡುತ್ತೇವೆಂದು ಹೇಳಿ ಒಂದು ವರ್ಷದಲ್ಲೇ ಪೊಲೀಸ್ ಸ್ಟೇಷನ್ ಮುಂದೆ ಸಿಗ್ನಲ್‌ದೀಪ ನಿರ್ಮಿಸಿದ್ದಾರೆ. ಇದು ತೆರಿಗೆದಾರರ ಹಣ ಅಪವ್ಯಯವಲ್ಲದೇ ಮತ್ತೇನು? ದಯವಿಟ್ಟು ರಸ್ತೆ ಅಗಲಮಾಡಿ ಇಲ್ಲವೇ ಬಾರಿ ವಾಹನಗಳ ಸಂಚಾರ ನಿಷೇಧಿಸಿ.
-ತಿಪ್ಪೇಸ್ವಾಮಿ

ರಸ್ತೆ ನಾಮಫಲಕ: ತಾತ್ಸಾರ ಯಾಕೆ?
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 2010ರಲ್ಲಿ ಚಾಮರಾಜಪೇಟೆ, ದೀನದಯಾಳು ಉಪಾಧ್ಯಾಯ ರಸ್ತೆ 3ನೇ ಅಡ್ಡರಸ್ತೆ (ಸಿಗ್ನಲ್) ಹತ್ತಿರ “ಕನ್ನಡದ ಕಡುಗಲಿ ಡಾ. ಅ.ನ. ಕೃಷ್ಣರಾಯರ” ವೃತ್ತ ಎಂದು ನಾಮಕರಣ ಮಾಡಿ ಸಿಮೆಂಟ್ ಕಂಬಗಳಿಂದ ಕೂಡಿದ ನಾಮಫಲಕ ಹಾಕಿತ್ತು. ಕೆಲ ಸಮಯದ ಹಿಂದೆ ಆ ನಾಮಫಲಕ ಬಿದ್ದುಹೋಗಿ ಈಗ ಪಾದಚಾರಿ ಮಾರ್ಗದಲ್ಲಿ ಬಿದ್ದು ಪಾದಚಾರಿಗಳ ಕಾಲ್ತುಳಿಕ್ಕೆ ತುತ್ತಾಗುತ್ತಿದೆ.

ಕನ್ನಡದ ಶ್ರೇಷ್ಠ ಸಾಹಿತಿಯ ನಾಮಫಲಕಕ್ಕೆ ಎದುರಾಗಿರುವ ಈ ದುಃಸ್ಥಿತಿಯನ್ನು ಬೆಂಗಳೂರು ನಗರ ಜಿಲ್ಲೆ ಕ.ಸಾ.ಪ.ದ ಪ್ರಸಕ್ತ ಅಧ್ಯಕ್ಷರ ಗಮನಕ್ಕೆ ತಂದು ಅನೇಕ ತಿಂಗಳು ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ.

ಶ್ರೇಷ್ಠ ಸಾಹಿತಿಗಳ ಬಗ್ಗೆ ಈ ರೀತಿ ತಾತ್ಸಾರ ಸಲ್ಲದು. ಕನ್ನಡದ ಬಗ್ಗೆ ಕೇವಲ ಮಾತಿನ ಶೂರರಾಗದೇ ಕೃತಿಯಲ್ಲಿ ತೋರಿಸಬೇಕಾದುದು ಅವರ ಕರ್ತವ್ಯ. ಆದಷ್ಟು ಶೀಘ್ರ ಈ ನಾಮಫಲಕಕ್ಕೆ ಮುಕ್ತಿ ಕಾಣಿಸಬೇಕೆಂದು ಸವಿನಯ ಕೋರಿಕೆ.
-ಲಕ್ಷ್ಮೀ  ಶ್ರೀನಿವಾಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.