ADVERTISEMENT

ವೋಟಿಗಾಗಿ ನೋಟು: ಅಧಿಕೃತ ಮುದ್ರೆ?

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 19:00 IST
Last Updated 6 ಜೂನ್ 2019, 19:00 IST

ಕೇಂದ್ರ ಸರ್ಕಾರದ ‘ಕಿಸಾನ್ ಸಮ್ಮಾನ್ ನಿಧಿ’ ಯೋಜನೆಯ ಅಂಕಿಅಂಶಗಳು ಕೃಷಿಕರಲ್ಲಿ ರೋಮಾಂಚನ ಉಂಟು ಮಾಡಿದಂತೆ ತೋರುತ್ತದೆ. ಆದರೂ ವಾರ್ಷಿಕ ₹ 6 ಸಾವಿರದ ನೆರವಿನ ಈ ಮೊತ್ತವನ್ನು ಪ್ರತಿದಿನಕ್ಕೆ ಭಾಗಿಸಿದಾಗ, ಹದಿನಾರೂವರೆ ರೂಪಾಯಿಗಿಂತ ಕಡಿಮೆಯಾಗುತ್ತದೆ. ಒಂದು ಬೀಡಿ ಕಟ್ಟಿನ ಬೆಲೆಇದಕ್ಕಿಂತ ಜಾಸ್ತಿ ಇದೆ!

ಮಳೆ ಕಡಿಮೆಯಾಗಿ, ಅಂತರ್ಜಲವೂ ಬರಿದಾಗುತ್ತಿರುವ ಈ ಹೊತ್ತಿನಲ್ಲಿ, ಕೃಷಿಯನ್ನು ಪರ್ಯಾಯ ಮಾರ್ಗದತ್ತ ಡೊಯ್ಯಬೇಕಾಗಿದೆ. ಕೃಷಿಯು ಇನ್ನು ಮುಂದೆ ನೀರಿನ ಮಿತ ಬಳಕೆ ಹಾಗೂ ಮಳೆನೀರಿನ ಸಂರಕ್ಷಣೆಯಲ್ಲಿ ಸಾಗಬೇಕಾದ ಅನಿವಾರ್ಯ ಸ್ಥಿತಿ ಇದೆ. ಇದಕ್ಕೆ ಬೇಕಾದ ತಂತ್ರಜ್ಞಾನ, ನೆರವು, ಮಾರ್ಗದರ್ಶನ ಹಾಗೂ ಉತ್ತೇಜನ ಸರ್ಕಾರದಿಂದ ಸಿಗಬೇಕು. ಹಸಿರುಕ್ರಾಂತಿಯ ಹೆಸರಿನಲ್ಲಿ ರಸಗೊಬ್ಬರ, ರಾಸಾಯನಿಕಗಳನ್ನು ರೈತನ ಮೇಲೆ ಹೇರಿದ್ದರಿಂದ ಆದ ಅನಾಹುತಗಳಿಂದ ಆತನನ್ನು ಪಾರು ಮಾಡಿ, ಸುಸ್ಥಿರ ಕೃಷಿಯತ್ತ ಹೊರಳಿಸಬೇಕಾದ ಹೊಣೆಗಾರಿಕೆಯೂ ಸರ್ಕಾರದ ಮೇಲಿದೆ.

ಇಂಥ ಗುರುತರ ಹೊಣೆಗಾರಿಕೆ ಹೊರಬೇಕಾದ ಸಂದರ್ಭದಲ್ಲಿ, ಮೂಗಿಗೆ ತುಪ್ಪ ಸವರುವ ಪುಡಿಗಾಸಿನಿಂದ ಕೃಷಿಕನಿಗೆ ಯಾವ ಪ್ರಯೋಜನವೂ ಆಗುವುದಿಲ್ಲ. ನಾಡಿನ ಜನ ಯಾವುದೇ ವೃತ್ತಿಯಲ್ಲಿ ತೊಡಗಿದ್ದರೂಅವರವರ ಅಗತ್ಯಗಳಿಗೆ ಸ್ವತಃ ದುಡಿದುಕೊಳ್ಳುವ ಶಕ್ತಿ ಹೊಂದಿರುತ್ತಾರೆ. ಅವರ ದುಡಿಮೆಯ ದಾರಿ ವಿಸ್ತರಿಸುವ ಕೆಲಸ ಸರ್ಕಾರಗಳಿಂದ ಆಗಬೇಕೇ ಹೊರತು, ವೋಟಿಗಾಗಿ ನೋಟು ಕೊಡುವ ಅನಿಷ್ಟ ಪದ್ಧತಿಗೆ ಹೀಗೆ ಅಧಿಕೃತ ಮುದ್ರೆ ಒತ್ತಬಾರದು.

ADVERTISEMENT

ಟಿ.ಎಂ.ಕೃಷ್ಣ,ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.