‘ರೈಲಿಗೆ ತಲೆಕೊಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ’ ಎಂಥವರನ್ನೂ ಕಲಕುವಂತಿದ್ದ ವರದಿ (ಪ್ರ.ವಾ. ಜೂ.12). ಪರೀಕ್ಷಾ ಫಲಿತಾಂಶಗಳು ಪ್ರಕಟವಾಗುವ ಕಾಲಕ್ಕೆ ಇಂತಹ ಘಟನೆಗಳು ಹೆಚ್ಚು.
ಆ ವಿದ್ಯಾರ್ಥಿನಿಗೆ ಪಿ.ಯು.ಸಿ.ಯಲ್ಲಿ ಶೇ 94 ಮತ್ತು ಸಿ.ಇ.ಟಿ.ಯ ವೈದ್ಯಕೀಯ ವಿಭಾಗದಲ್ಲಿ 6044ನೇ ರ್‍ಯಾಂಕ್. ಇದು ಶೈಕ್ಷಣಿಕವಾಗಿ ಉತ್ತಮ ಸಾಧನೆಯೇ. ಈ ಸಂಬಂಧದ ದಾಖಲೆಗಳ ಪರಿಶೀಲನೆಗೆ ಬಂದಿದ್ದ ಆ ಹೊತ್ತಿನಲ್ಲಿ ಆತ್ಮಹತ್ಯೆಗೆ ಶರಣಾದದ್ದು ದುರಂತವೇ ಸರಿ. ಇಷ್ಟು ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ ಆಕೆಯಲ್ಲಿ ಸನ್ನಿವೇಶವನ್ನು ಎದುರಿಸುವ ಮಾನಸಿಕ ಸಾಮರ್ಥ್ಯ ಬೆಳೆದಿರಲಿಲ್ಲ ಎಂದರೆ, ಶಿಕ್ಷಣದ ‘ಸರ್ವತೋಮುಖ ಅಭಿವೃದ್ಧಿ’ ಎಂಬ ಉದ್ದೇಶ ಈಡೇರಿಲ್ಲ ಎನ್ನುವುದು ಸ್ಪಷ್ಟವಾಗಿ ತೋರುತ್ತದೆ.
ಇದಕ್ಕೆಲ್ಲಾ ಕೇವಲ ಶಿಕ್ಷಣ ಪದ್ಧತಿಯನ್ನೋ, ಶಿಕ್ಷಕರನ್ನೋ ಹೊಣೆ ಮಾಡದೆ ಸಮಾಜದ ಎಲ್ಲರೂ ಚಿಂತಿಸಿ ಕಾರ್ಯಪ್ರವೃತ್ತರಾಗಬೇಕು. ವಿದ್ಯಾರ್ಥಿಗಳನ್ನು ದೈಹಿಕವಾಗಿ, ಮಾನಸಿಕವಾಗಿ ದೃಢವಾಗಿಸುವುದು ಶಿಕ್ಷಣದ ಗುರಿಯಾಗಬೇಕು. ಕೇವಲ ಅಂಕಗಳ, ರ್‍ಯಾಂಕ್‌ಗಳ ಶುಷ್ಕ ಶಿಕ್ಷಣ ಪ್ರಯೋಜನವಿಲ್ಲ. ಸದೃಢ ಶಿಕ್ಷಣಕ್ಕೆ ಪೋಷಕರು, ಸಂಪರ್ಕ ಮಾಧ್ಯಮಗಳು ಪೂರಕವಾಗಿ ವರ್ತಿಸಬೇಕು. ಆಗ ಮಾತ್ರ ಸಮಾಜದ ಆಸ್ತಿಗಳಾಗಬಹುದಾದ ಅಮೂಲ್ಯ ಜೀವಗಳು ಉಳಿದಾವು.
–ವಿಜಯಕುಮಾರ್ ಎಚ್.ಜಿ., ಮೈಲನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.