ADVERTISEMENT

ಶ್ರೀಗಳ ಸಮಾಜ ಸೇವೆ!

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 19:30 IST
Last Updated 14 ಮಾರ್ಚ್ 2011, 19:30 IST

ಸ್ವಾಮಿಗಳಾದವರು, ‘ಹೆಚ್ಚಿಗೆ ಪಾರಮಾರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಸಮಾಜ ಹಾಗೂ ಭಕ್ತ ಸಮುದಾಯವನ್ನು ಆ ಕಡೆಗೆ ನಡೆಸಬೇಕೆಂಬ ಎಚ್ ಗುಂಡೂರಾವ್ ಅವರ ಬಿನ್ನಹ (ಪ್ರ.ವಾ. ಮಾ. 11) ಹೈಪರ್ ಉತ್ಸಾಹೀ ಪಾರಿವ್ರಾಜಕರ ಕಿವಿಮುಟ್ಟಬೇಕಾದಂಥದು!

ತ್ಯಾಗದ್ದೇ ಜೀವಂತ ಸ್ವರೂಪರೆಂಬ ನೆಲೆಯಲ್ಲಿ, ಸರ್ವಸಂಗಪರಿತ್ಯಾಗಿ ಸನ್ಯಾಸಿಗಳ ಅಸ್ತಿತ್ವ. ವೈರಾಗ್ಯ ಜೀವನಕ್ಕೆ ಸ್ವಯಂ ಉದಾಹರಣೆಯಾಗಿ ಸಾಮಾಜಿಕ ಪರಿಸ್ಥಿತಿಯ ಮೇಲೆ ಅನೇಕರ ಮೇಲೆ ಪರಿಣಾಮ ಬೀರಬೇಕಾಗಿದೆ. ಆದರೆ ಅದು ಯಶಸ್ವಿಯಾಗಿದ್ದರೆ ನಾವು ಹೀಗೆ ನೀತಿಗೆಟ್ಟಿರುತ್ತಿರಲಿಲ್ಲ!

ಇಲ್ಲಿ ‘ರಾಜೀನಾಮೆ ನೀಡಿ, ಮಧ್ಯಂತರ ಚುನಾವಣೆಗೆ ಸಿದ್ಧರಾಗಿ’ ಎಂದು ಸನ್ಯಾಸಿಯೊಬ್ಬರು ಮುಖ್ಯಮಂತ್ರಿಗೆ ಸಲಹೆ ನೀಡುತ್ತಾರೆ; ಇನ್ನೊಬ್ಬರು, ಸರ್ಕಾರದ ಪ್ರಾತಿನಿಧ್ಯವನ್ನು ತಾವೇ ಆರೋಪಿಸಿಕೊಂಡು ವಿವಾದಿತ ಉದ್ಯಮಪತಿಗಳನ್ನು ರಾಜೀ-ಸಂಧಾನಕ್ಕೆ ಕರೆಯುತ್ತಾರೆ!

ವಿರಕ್ತರೆನ್ನಲಾಗುವವರು, ತಮ್ಮ ಅಸ್ತಿತ್ವದ ನೈಜ ಜವಾಬ್ದಾರಿಯನ್ನೇ ಬಿಟ್ಟು, ಇಲ್ಲದ ಲೌಕಿಕ ಅಧಿಕಾರಗಳನ್ನು ಆರೊಪಿಸಿಕೊಂಡು ಮುಗ್ಧಜನರ ಮಾರ್ಗ ತಪ್ಪಿಸುವುದು, ವಿಭೂತಿ-ರುದ್ರಾಕ್ಷಿ, ಪಟ್ಟೆ ನಾಮ-ತುಳಸೀ ಮಾಲೆಗಳ ವೇಷ, ಆವೇಶದಿಂದ ಮಠ-ಮಂದಿರಗಳ ಆಶ್ರಯದಲ್ಲಿ, ನಡೆಯುವ ಅದ್ದೂರಿಯ ಯಾಗ-ಯಜ್ಞಾದಿಗಳಿಗಿಂತಾ ಹೆಚ್ಚು ಅಪಾಯಕಾರಿ ಮೂಢ ನಂಬಿಕೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.