ADVERTISEMENT

ಸೌಲಭ್ಯ ವಂಚಿತ ಶಾಲೆಗಳು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 10 ಡಿಸೆಂಬರ್ 2012, 21:01 IST
Last Updated 10 ಡಿಸೆಂಬರ್ 2012, 21:01 IST

ಸಮಾಜ ಕಲ್ಯಾಣ ಸಚಿವಾಲಯದ ಅಧೀನದಲ್ಲಿ ಗುಣಮಟ್ಟ ಶಿಕ್ಷಣವನ್ನು ನೀಡಲು ವಸತಿ ಸಹಿತ ಶಾಲೆಗಳನ್ನು ರಾಜ್ಯ ಸರ್ಕಾರ ಪ್ರಾರಂಭಿಸಿತು.

ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿರುವವರು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಅಲ್ಪ ಸಂಖ್ಯಾತ ಗುಂಪಿಗೆ ಸೇರಿದ ಗ್ರಾಮೀಣ ಪ್ರದೇಶದ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಏಳಿಗೆಗಾಗಿ ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಗಳನ್ನು ಪ್ರಾರಂಭಿಸಲಾಯಿತು. ಈ ಶಾಲೆಗಳ ಉದ್ದೇಶ, ಶೈಕ್ಷಣಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರಿಗೆ ಶಿಕ್ಷಣ ನೀಡುವುದು ಹಾಗೂ ಶಿಕ್ಷಣದಲ್ಲಿ ಲಿಂಗ ತಾರತಮ್ಯವನ್ನು ಕಿತ್ತೊಗೆದು ಸಮಾನತೆಯನ್ನು ತರುವುದಾಗಿದೆ.

ಈ ಶಾಲೆಗಳನ್ನು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಜವಾಹರ ನವೋದಯ ವಿದ್ಯಾಲಯಗಳ ಮಾದರಿಯನ್ನು ಆಧರಿಸಿ ಪ್ರಾರಂಭಿಸಲಾಗಿದೆ. ಇವುಗಳನ್ನು ಸರ್ಕಾರದ ಅಂಗಸಂಸ್ಥೆಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ,  (ಓ್ಕಉಐಖ) ಇದರ ಆಡಳಿತ ನೋಡಿಕೊಳ್ಳುತ್ತಿದೆ. 1997ರಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಹಾಗೂ 2009ರಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಗಳು ಪ್ರಾರಂಭವಾದವು.

2011-12ನೇ ಸಾಲಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಕಾಯಂ ಬೋಧಕ, ಬೋಧಕೇತರ ಮತ್ತು ಪ್ರಾಂಶುಪಾಲರ ನೇಮಕ ಮಾಡಿಕೊಂಡಿದ್ದು ಬೋಧನಾ ಚಟುವಟಿಕೆಗಳ ಸಮಸ್ಯೆ ಬಗೆಹರಿದಿದೆ. ಆದರೆ ಮೂಲಸೌಕರ್ಯಗಳ ಕೊರತೆಯಿಂದ ಕಲಿಕಾ ಮಟ್ಟ ಕುಸಿಯುತ್ತಿರುವುದು ವಿಷಾದನೀಯ. ಬಾಲಕಿಯರಿಗೆಂದೇ ಪ್ರಾರಂಭವಾದ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ಸ್ವಂತ ಕಟ್ಟಡಗಳಿಲ್ಲ.

ADVERTISEMENT

ಆಟದ ಮೈದಾನವಿಲ್ಲ. ಬಡ ಪ್ರತಿಭಾವಂತ ಹಿಂದುಳಿದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಪ್ರಾರಂಭವಾದ ಈ ಶಾಲೆಗಳು ಮಕ್ಕಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢಗೊಳಿಸಿದರೆ ತಾನೇ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ.

ಅನೇಕ ಮೊರಾರ್ಜಿ ಶಾಲೆಗಳು ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿದ್ದು  ಸಮರ್ಪಕವಾದ ಕೊಠಡಿಗಳು, ಶೌಚಾಲಯಗಳು ಇಲ್ಲದಿರುವುದರಿಂದ ವಿದ್ಯಾರ್ಥಿಗಳು ದಿನನಿತ್ಯದ ಚಟುವಟಿಕೆಗಳಿಗೆ ತೊಂದರೆ ಅನುಭವಿಸುವಂತಾಗಿದೆ. ಶಿಕ್ಷಕರು ಬೋಧನಾ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವುದರ ಜೊತೆಗೆ ಮಕ್ಕಳ ಸಂರಕ್ಷಣೆಯತ್ತ ಗಮನ ಹರಿಸುವ ಜವಾಬ್ದಾರಿ ಇದೆ. ಆಟ ಒಂದು ಕಡೆ ಪಾಠ ಒಂದು ಕಡೆ ಊಟ ಒಂದು ಕಡೆ. ಈ ದೃಷ್ಟಿಯಿಂದ ನೋಡಿದರೆ, ವಿದ್ಯಾರ್ಥಿಗಳ ಪ್ರತಿಭೆ ಸಮಾಜಕ್ಕೆ ಉಪಯೋಗವಾಗುತ್ತದೆ ಎಂಬುದು ಕನಸಿನ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.