ADVERTISEMENT

ಹೊಸ ಮುಖ್ಯ ಕಾರ್ಯದರ್ಶಿ ಅಧಿಕಾರ ಸ್ವೀಕಾರ: ವರದಿಗಾರರ ಉದ್ದೇಶ ಏನು?

ಸುಮಂಗಲಾ, ಬೆಂಗಳೂರು
Published 3 ಡಿಸೆಂಬರ್ 2017, 19:30 IST
Last Updated 3 ಡಿಸೆಂಬರ್ 2017, 19:30 IST
ಹೊಸ ಮುಖ್ಯ ಕಾರ್ಯದರ್ಶಿ ಅಧಿಕಾರ ಸ್ವೀಕಾರ: ವರದಿಗಾರರ ಉದ್ದೇಶ ಏನು?
ಹೊಸ ಮುಖ್ಯ ಕಾರ್ಯದರ್ಶಿ ಅಧಿಕಾರ ಸ್ವೀಕಾರ: ವರದಿಗಾರರ ಉದ್ದೇಶ ಏನು?   

ಕೆ.ರತ್ನಪ್ರಭಾ ಅವರು ರಾಜ್ಯದ ಹೊಸ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ವರದಿ ಮತ್ತು ಚಿತ್ರ ಪ್ರಕಟವಾಗಿದೆಯಷ್ಟೆ (ಪ್ರ.ವಾ., ಡಿ.1). ಅದರಲ್ಲಿ ಅಭಿಮಾನಗಳ ಜೈಕಾರ ಎಂಬ ಬಾಕ್ಸ್ ಸುದ್ದಿಯಲ್ಲಿ, ‘ರತ್ನಪ್ರಭಾ ಹಸಿರು ಬಣ್ಣದ ಸೀರೆ, ಕೆಂಪು ರವಿಕೆ ತೊಟ್ಟು ಮಲ್ಲಿಗೆ ಹೂವು ಮುಡಿದುಕೊಂಡು ಬಂದಿದ್ದರು’ ಎಂದಿದೆ.

ಅವರು ಹಸಿರು ಸೀರೆ, ಕೆಂಪು ರವಿಕೆ ಧರಿಸಿರುವುದು ಚಿತ್ರದಲ್ಲಿ ಕಾಣುತ್ತದೆ, ಅದನ್ನು ಮತ್ತೆ ಸುದ್ದಿಯಲ್ಲಿ ಎತ್ತಿತೋರಿಸುವ ಅಗತ್ಯವಿದೆಯೇ? ಮತ್ತೆ ಇದಕ್ಕೆ ಕಳಸವಿಟ್ಟಂತೆ ‘ಮಲ್ಲಿಗೆ ಹೂವು ಮುಡಿದುಕೊಂಡು’ ಎನ್ನುವುದು ಬೇರೆ! ‘ನೋಡಿ, ಎಷ್ಟು ಉನ್ನತ ಸ್ಥಾನದಲ್ಲಿದ್ದರೂ ಹೀಗೆ ಭಾರತೀಯ ನಾರಿಯ ಹಾಗೆ ಸೀರೆಯುಟ್ಟು, ಲಕ್ಷಣವಾಗಿ ಹೂಮುಡಿದು ಬಂದಿದ್ದಾರೆ’ ಎಂಬಂತೆ ಧ್ವನಿಸುವುದು ವರದಿಗಾರರ ಉದ್ದೇಶವೇ?

ಇಂತಹ ಸುದ್ದಿಯಲ್ಲಿ ಅವರು ಏನು ತೊಟ್ಟಿದ್ದರು, ಏನು ಮುಡಿದಿದ್ದರು, ಹೀಗೆ ಉಡುಗೆತೊಡುಗೆಗೆ ಸಂಬಂಧಿಸಿದ್ದನ್ನು ಹೇಳುವ ಅಗತ್ಯವೇನಿರುತ್ತದೆ? ಅದೇ ಉನ್ನತ ಸ್ಥಾನದಲ್ಲಿರುವ ಪುರುಷರೊಬ್ಬರ ಕುರಿತ ಇಂತಹ ವರದಿಯಲ್ಲಿ ಅವರು ಯಾವ ಬಣ್ಣದ ಅಂಗಿ, ಪ್ಯಾಂಟು ತೊಟ್ಟಿದ್ದರು, ನಾಮ ಹಚ್ಚಿಕೊಂಡಿದ್ದರೇ, ಇಲ್ಲವೇ, ಕಿವಿಗೆ ಹೂ ಇಟ್ಟುಕೊಂಡಿದ್ದರೇ ಇಲ್ಲವೇ ಇಂತಹ ಬಾಹ್ಯ ವಿವರಗಳನ್ನು ಸೇರಿಸುತ್ತಾರೆಯೇ? ಇಲ್ಲವಲ್ಲ... ಹಾಗಿದ್ದರೆ ಮಹಿಳೆಯರ, ಅದರಲ್ಲೂ ಉನ್ನತ ಸ್ಥಾನದಲ್ಲಿರುವ ಮಹಿಳೆಯರ ಕುರಿತ ವರದಿಗಳಲ್ಲಿ ಯಾಕೆ ಇನ್ನೂ ಇಂತಹ ಬಾಹ್ಯ ವಿವರಗಳಿಗೆ ಆದ್ಯತೆ ಕೊಡುವುದು? ಉಡುಗೆತೊಡುಗೆಯನ್ನೂ ಮೀರಿದ ಗಟ್ಟಿ ವ್ಯಕ್ತಿತ್ವ ಇರುವುದಿಲ್ಲವೇ?  ಕೊನೇ ಪಕ್ಷ ಪ್ರಜಾವಾಣಿಯ ವರದಿಗಾರರಾದರೂ ಇಂತಹ ‘ರೂಢಮಾದರಿ’ಗಳಿಂದ ಹೊರಬರಬೇಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.