ADVERTISEMENT

315 ಕೆ ಪ್ರಯಾಣದ ಬವಣೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 19:30 IST
Last Updated 21 ಫೆಬ್ರುವರಿ 2011, 19:30 IST

ಕೆಂಪೇಗೌಡ ಬಸ್ ನಿಲ್ದಾಣ, ಸಿಟಿ ಮಾರ್ಕೆಟ್ ಮತ್ತು ಶಿವಾಜಿನಗರಗಳಿಂದ ಎನ್‌ಜಿಇಎಫ್ ಮಾರ್ಗವಾಗಿ ರಾಮಮೂರ್ತಿ ನಗರ, ಕೆಆರ್‌ಪುರ, ಅಕ್ಷಯನಗರ, ಶಾಂತಿಕಾಲನಿ ಮೊದಲಾದ ಕಡೆಗಳಲ್ಲಿ ಸಾಗುವ ಕೆಲವೇ ಬಸ್‌ಗಳು ಸದಾನಂದನಗರ, ಕಸ್ತೂರಿನಗರ ಬಡಾವಣೆಗಳಿಗೆ ಬಸ್ ಸೌಲಭ್ಯ ಒದಗಿಸುತ್ತಿವೆ. ಆದರೆ ಅಂಥ ಬಸ್‌ಗಳಲ್ಲಿನ ಕೆಲವು ಸಿಬ್ಬಂದಿಯ ಉದ್ಧಟತನದ ವರ್ತನೆ ಬಸ್ ಪ್ರಯಾಣವೇ ಬೇಡ ಎನಿಸುವಂತಿದೆ. ಫೆ.5 ರಂದು ಮಧ್ಯಾಹ್ನ ಶಾಂತಿಕಾಲನಿಯ 315 ಪಿ (ಕೆ ಎ 01- ಎಫ್ ಎ-969) ಬಸ್ಸಿನಲ್ಲಿ ಪ್ರಯಾಣಿಸುವಾಗ ಸಿಬ್ಬಂದಿಯ ಉದ್ಧಟತನದ ನಡವಳಿಕೆ ಮೇರೆ ಮೀರಿದಂತಿತ್ತು.

ಲೈಫ್ ಸ್ಟೈಲ್ (ಸೆಕ್ರೆಡ್ ಹಾರ್ಟ್ ಚರ್ಚ್) ಸ್ಟಾಪ್‌ನಲ್ಲಿ ಬಸ್ ನಿಲ್ಲಿಸದ ಸಿಬ್ಬಂದಿ ಟ್ರಾಫಿಕ್ ಸಿಗ್ನಲ್ ಬಿದ್ದಾಗ ‘ಬಸ್ಸಿಂದ ಇಳಿಯಿರಿ’ ಎಂದು ಪ್ರಯಾಣಿಕರಿಗೆ ಜೋರು ಮಾಡುತ್ತಿದ್ದರು. ‘ಹಿಂದೆ ಬರುವ ವಾಹನ ಡಿಕ್ಕಿ ಹೊಡೆದರೆ’ ಎಂಬ  ಆತಂಕದ ಉದ್ಗಾರ ಪ್ರಯಾಣಿಕರದ್ದಾದರೆ, ಡ್ರೈವರ್ ಮತ್ತು ಕಂಡಕ್ಟರ್ ‘ಸಾಯಿರಿ ನಾವೇನು ಮಾಡುವುದು’ ಎಂದು ಕೆಳಗಿಳಿಯಲು ಅವಸರ ಮಾಡುತ್ತ ದಬಾಯಿಸುತ್ತಿದ್ದರು.

ಹಲಸೂರಿನ ಆದರ್ಶ ಬಸ್ ನಿಲುಗಡೆಯಲ್ಲಿ ಸಾಮಾನ್ಯವಾಗಿ ಬಸ್ಸುಗಳು ಸ್ವಲ್ಪ ಸಮಯವೂ ನಿಲ್ಲದೇ ದಾರಿ ಸಿಕ್ಕತ್ತ ಮುಂದೆ ಹೋಗುವುದರಿಂದ ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಅಲ್ಲಿ ಬಸ್ ಹತ್ತುವುದೇ ದುಸ್ತರವಾಗಿದೆ. ನಿಗದಿತ ನಿಲುಗಡೆಯಲ್ಲಿ ಬಸ್ ನಿಲ್ಲಿಸದಿರುವುದರಿಂದ ಪ್ರಯಾಣಿಕರು ಕೈಯಲ್ಲಿ ಜೀವ ಹಿಡಿದುಕೊಂಡು ಬಸ್ ಇಳಿಯಬೇಕು ಮತ್ತು ಹತ್ತಬೇಕು. ನಿಗದಿತ ನಿಲುಗಡೆಯಲ್ಲಿ ಬಸ್ ನಿಲ್ಲಿಸದ,

ಈ ರೀತಿಯ ಉದ್ಧಟತನದ ವರ್ತನೆಯ ಬಸ್ ಸಿಬ್ಬಂದಿಗಳಿಂದ  ಅಬ್ಬರದ ‘ಬಸ್ ದಿನ’ದ ಆಚರಣೆಗೆ ಯಾವುದೇ ಅರ್ಥ ಬರುವುದಿಲ್ಲ. ಸಂಬಂಧಪಟ್ಟವರು ಬಸ್ ಸಿಬ್ಬಂದಿಗೆ ಸೌಜನ್ಯದ ನಡವಳಿಕೆ ಹೇಳಿಕೊಟ್ಟರೆ ಪ್ರಯಾಣಿಕರು ನೆಮ್ಮದಿಯಿಂದ ಪ್ರಯಾಣಿಸಲು ಅನುಕೂಲವಾದೀತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.