ADVERTISEMENT

ಕನ್ನಡಪ್ರೇಮ

​ಪ್ರಜಾವಾಣಿ ವಾರ್ತೆ
Published 1 ಜನವರಿ 2018, 19:30 IST
Last Updated 1 ಜನವರಿ 2018, 19:30 IST

ರಾಜ್ಯದ ವಿವಿಧ ಕಾನೂನು ಮಹಾವಿದ್ಯಾಲಯಗಳಿಂದ ಪದವಿ ಪಡೆದ‌ವರು ವಕೀಲರಾಗಿ ವೃತ್ತಿ ಪ್ರಾರಂಭಿಸಲು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ನೋಂದಾಯಿತರಾಗಬೇಕಾಗುತ್ತದೆ. ಬೆಂಗಳೂರಿನ‌ ನ್ಯಾಷನಲ್‌ ಲಾ ಸ್ಕೂಲ್‌ನಿಂದ ಪದವಿ ಪಡೆದ ಮಣಿಪುರ ರಾಜ್ಯದ ವಿದ್ಯಾರ್ಥಿಗಳು ನೋಂದಣಿ ಪ್ರಕ್ರಿಯೆ ಬಗ್ಗೆ ವಿಚಾರಿಸಲು ವಕೀಲರ ಪರಿಷತ್ತಿನ ಕಾರ್ಯದರ್ಶಿಯಾದ ನನ್ನ ಬಳಿಗೆ ಬಂದರು. ‘ನಮಸ್ಕಾರ ಸರ್’ ಅಂತ ಅಚ್ಚಕನ್ನಡದಲ್ಲಿ ಮಾತು ಆರಂಭಿಸಿದರು. ವಕೀಲರಾಗಿ ಸೇವೆ ಆರಂಭಿಸಲು ಏನು ಮಾಡಬೇಕು ಅಂತ ಸ್ಪಷ್ಟವಾಗಿ ಕನ್ನಡದಲ್ಲೇ ವಿಚಾರಿಸಿದರು.

ಐದು ವರ್ಷಗಳ ಅವಧಿಯ ಕಾನೂನು ಪದವಿ ಅಧ್ಯಯನ ಮಾಡಲು ರಾಜ್ಯಕ್ಕೆ ಬಂದಿರುವ ಮಣಿಪುರದ ವಿದ್ಯಾರ್ಥಿಗಳು ಹೀಗೆ ತಿಳಿಗನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡಿದ್ದು ಕಂಡು ಬೆರಗಾದೆ, ಖುಷಿಪಟ್ಟೆ.

ಮರುದಿನ ಪರಿಷತ್ತಿನ ದಾಖಲೆಗಳನ್ನು ಪರಿಶೀಲಿಸುತ್ತಿರುವಾಗ ಬೆಂಗಳೂರಿನವರಾದ ಕಾನೂನು ಪದವೀಧರ ತಂದೆಯೊಬ್ಬರು ತಮ್ಮ ಮಗನ ನೋಂದಣಿ ಬಗ್ಗೆ ಮಾಹಿತಿ ಪಡೆಯಲು ಬಂದರು. ‘ಶರಣು ಬನ್ನಿ’ ಎಂದು ಅವರನ್ನು ಬರಮಾಡಿಕೊಂಡಾಗ ಅವರು ಇಂಗ್ಲಿಷ್‌ನಲ್ಲಿ ‘ಗುಡ್ ಮಾರ್ನಿಂಗ್ ಸರ್‌’ ಎಂದರು. ಎದುರಿಗಿದ್ದ ಕುರ್ಚಿಯಲ್ಲಿ ಕುಳಿತು ‘ವಾಟಿಜ್ ದಿ ಪ್ರೊಸೀಜರ್ ಫಾರ್ ಎನ್ರೋಲ್‌ಮೆಂಟ್‌’ ಎಂದು ಕೇಳಿದಾಗ ‘ತಮ್ಮ ಊರು ಯಾವುದು’ ಎಂದೆ. ‘ಐ ಆ್ಯಮ್ ಬಾರ್ನ್‌ ಅಂಡ್‌ ಬ್ರಾಟಪ್ ಆ್ಯಟ್ ಬೆಂಗ್ಳೂರು... ನೌ ಸೆಟಲ್ಡ್‌ ಇನ್‌ ದೆಲ್ಲಿ’ ಎಂದು ಉತ್ತರಿಸಿದರು.

ADVERTISEMENT

ಆಗ ಅವರಿಗೆ ‘ಕರ್ನಾಟಕದವರಾದ ನಾವು ನಮ್ಮ ಮಾತೃಭಾಷೆಯಲ್ಲಿ ಮಾತನಾಡುವಾ, ನಂತರ ಉಳಿದ ಭಾಷಿಕರು ನಮ್ಮ ಭಾಷೆ
ಯನ್ನು ಬಳಸಲು ಕೋರುವಾ’ ಎಂದು ಮನವಿ ಮಾಡಿಕೊಂಡಾಗ ಅವರು ಅದಕ್ಕೆ ಸಮ್ಮತಿಸಿದರು.

–ಬಸವರಾಜ ಹುಡೇದಗಡ್ಡಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.