ADVERTISEMENT

ದುಡ್ಡಿದ್ದವರಿಗೇ ಮಹಲು!

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 19:30 IST
Last Updated 4 ಜನವರಿ 2018, 19:30 IST

ತಾಜ್‍ಮಹಲ್ ನೋಡುವ ಪ್ರವಾಸಿಗರ ಸಂಖ್ಯೆಗೆ ಕಡಿವಾಣ ಹಾಕುವ ಬಗ್ಗೆ ಚಿಂತನೆ ನಡೆದಿರುವುದು (ಪ್ರ.ವಾ., ಜ.4) ಸರಿ ಮತ್ತು ಸ್ವಾಗತಾರ್ಹ. ಆದರೆ ತಾಜ್ ಮಹಲ್ ನೋಡಲು ₹ 1000 ಪ್ರವೇಶ ಶುಲ್ಕ ಪಾವತಿಸುವ ವಿದೇಶಿಯರಿಗೆ ನಿರ್ಬಂಧ ಇಲ್ಲ ಎಂದಿರುವುದು ಮತ್ತು ₹ 40 ಪಾವತಿಸಬೇಕಾದ ಭಾರತೀಯರು ಕೂಡಾ ₹ 1000 ಪಾವತಿಸಿದರೆ ತಾಜ್ ಮಹಲ್‌ಗೆ ಪ್ರವೇಶ ನೀಡಬಹುದು ಎಂಬ ನಿಯಮ ರೂಪಿಸಲು ಮುಂದಾಗಿರುವುದು ಯಾಕೋ ‘ದುಡ್ಡಿದ್ದವರಿಗೆ ಈ ದೇಶದ ಯಾವ ನಿಯಮವೂ ಅನ್ವಯವಾಗುವುದಿಲ್ಲ’ ಎನ್ನುವುದನ್ನು ಪರೋಕ್ಷವಾಗಿ ಹೇಳಹೊರಟಂತೆ ಕಾಣುತ್ತಿದೆ.

ದಿನಕ್ಕೆ 40 ಸಾವಿರ ಭಾರತೀಯ ಪ್ರವಾಸಿಗರು ಮಾತ್ರ ತಾಜ್ ಮಹಲ್ ನೋಡಬಹುದು ಎನ್ನುವ ನಿಯಮ ರೂಪಿಸುವ ಪ್ರಯತ್ನದ  ಮಾದರಿಯಲ್ಲೇ ದಿನವೊಂದಕ್ಕೆ ಇಷ್ಟೇ ಸಂಖ್ಯೆಯ ವಿದೇಶಿ ಪ್ರವಾಸಿಗರಿಗೆ ಮಾತ್ರ ಅವಕಾಶ ಎಂಬ ನಿಯಮವನ್ನೂ ರೂಪಿಸಬೇಕು. ವಿದೇಶಿಯರು ಕೊಡುವಷ್ಟೇ ಪ್ರವೇಶ ಶುಲ್ಕವನ್ನು ಭಾರತೀಯರೂ ಕೊಟ್ಟರೆ ಅವರನ್ನು ಒಳಬಿಡಲಾಗುವುದು ಎನ್ನುವ ನಿಯಮವೇ ಬೇಡ. ಒಂದೊಮ್ಮೆ ಹೀಗೆ ಮಾಡಿದ್ದೇ ಹೌದಾದರೆ ಈ ನೆಲದಲ್ಲಿ ಹಣ ಇರುವವನು, ಹಣ ಇಲ್ಲದೇ ಇರುವವನು ಎನ್ನುವ ತಾರತಮ್ಯವನ್ನು ಸರ್ಕಾರವೇ ಮಾಡಿದಂತಾಗುತ್ತದೆ ಹಾಗೂ ದುಡ್ಡಿರುವವರಿಗೇ ಈ ದೇಶದಲ್ಲಿ ಮರ್ಯಾದೆ, ಮಹಲುಗಳೆಲ್ಲವೂ ಎನ್ನುವ ಸಂದೇಶವನ್ನೂ ಕೊಟ್ಟಂತಾಗುತ್ತದೆ.

–ಆರುಡೋ ಗಣೇಶ, ಹೊಸನಗರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.