ADVERTISEMENT

ಶಿಕ್ಷಣವೆಂಬ ಸಾಮಾಜಿಕ ನ್ಯಾಯ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 20:00 IST
Last Updated 5 ಫೆಬ್ರುವರಿ 2019, 20:00 IST

‘70 ಸಾವಿರ ಮಕ್ಕಳು ಶಾಲೆ ಹೊರಗೆ’ (ಪ್ರ.ವಾ., ಫೆ. 5) ಉಳಿದಿರುವುದು ನಿಜಕ್ಕೂ ದುರದೃಷ್ಟಕರ. ರಾಜ್ಯದಲ್ಲಿ ಇಷ್ಟೊಂದು ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಾರೆ ಎಂದರೆ, ಇದು ವ್ಯವಸ್ಥೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಷಯ. ಶಿಕ್ಷಣ ಎಂಬುದು ಕೇವಲ ಓದಿಸಿ, ಬರೆಸಿ, ಪಾಸು ಮಾಡಿಸುವ ಕೆಲಸವಾಗಿರದೆ, ಸಾಮಾಜಿಕ ನ್ಯಾಯದ ಕೆಲಸವಾಗಿದೆ ಎಂಬುದನ್ನು ಅರಿಯಬೇಕು.

ಸಾಮಾಜಿಕ ನ್ಯಾಯದ ಪರಿಕಲ್ಪನೆ ಶೈಕ್ಷಣಿಕ ಸಮುದಾಯದಲ್ಲಿ ಸದಾ ಎಚ್ಚರದ ರೂಪದಲ್ಲಿ ಇದ್ದರೆ ಇಂತಹ ಸ್ಥಿತಿಗೆ ನಿಜವಾದ ಕಾರಣ ತಿಳಿಯುತ್ತದೆ. ಹಾಗೆಯೇ ವಲಸೆ, ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯ, ಬಾಲ ಕಾರ್ಮಿಕ ಸಮಸ್ಯೆ, ವಿದ್ಯಾರ್ಥಿನಿಯರು ಪ್ರೌಢಾವಸ್ಥೆಗೆ ಬರುವುದು ಇತ್ಯಾದಿ ಉಲ್ಲೇಖಿತ ಸಮಸ್ಯೆಗಳಿಗೆ ಮೂಲ ಕಾರಣ, ಇಂತಹ ಸಾಮಾಜಿಕ ಅನ್ಯಾಯ ಈಗಲೂ ಅಸ್ತಿತ್ವದಲ್ಲಿ ಇರುವುದು. ಶೈಕ್ಷಣಿಕ ಸಮುದಾಯಕ್ಕೆ ಈ ಬಗ್ಗೆ ಅರಿವು ಮೂಡಿದಾಗ ಅಲ್ಲಿ ಪಾಠ ಮಾಡಿ, ಹಾಜರಾತಿ ಹಾಕಿ ಮುಂದೆ ಕಳುಹಿಸುವ ಯಾಂತ್ರಿಕ ಕೆಲಸ ಪ್ರಾಧಾನ್ಯ ಪಡೆಯುವುದಿಲ್ಲ. ಬದಲಿಗೆ, ಸಂವಿಧಾನಬದ್ಧ ಸಾಮಾಜಿಕ ನ್ಯಾಯ ಒದಗಿಸುವ ಮಾನವೀಯ ಕೆಲಸಕ್ಕೆ ಆದ್ಯತೆ ದೊರೆಯುತ್ತದೆ. ಶಿಕ್ಷಣ ಎಂಬುದುಸಾರ್ವತ್ರಿಕ ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಎಂಬ ಸತ್ಯವನ್ನು ವ್ಯವಸ್ಥೆ ಅರಿಯಬೇಕು.

–ರಘೋತ್ತಮ ಹೊ.ಬ.,ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.