ADVERTISEMENT

ವಾಚಕರ ವಾಣಿ | ಮೌಲಿಕ ಗ್ರಂಥಗಳ ಸಾರ ಅಳವಡಿಸಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 19:30 IST
Last Updated 22 ಮಾರ್ಚ್ 2022, 19:30 IST

ಶಾಲಾ ಮಕ್ಕಳ ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆ ಅಳವಡಿಸುವ ಕುರಿತಂತೆ ರಾಜಕೀಯ ನಾಯಕರ ಪರ, ವಿರೋಧದ ಹೇಳಿಕೆಗಳು ಹೊರಬೀಳುತ್ತಿವೆ. ಭಗವದ್ಗೀತೆಯ ಸೇರ್ಪಡೆ ಹಿಂದುತ್ವದ ಕಾರ್ಯಸೂಚಿ ಎಂಬಂತೆ ಬಿಂಬಿಸಿ ಬಿಜೆಪಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದರೆ, ಕಾಂಗ್ರೆಸ್ ನಾಯಕ ತನ್ವೀರ್ ಸೇಠ್ ‘ಸರ್ಕಾರದ ಚಿಂತನೆ ಕೊರೊನಾಗಿಂತ ಅಪಾಯಕಾರಿ’ ಎಂದು ಅಪದ್ಧ ಹೇಳಿಕೆ ನೀಡಿದ್ದಾರೆ. ಅದೇ ಪಕ್ಷದ ಸಿದ್ದರಾಮಯ್ಯ ಹಾಗೂ ಯು.ಟಿ.ಖಾದರ್ ಸಮತೂಕದ ಮಾತುಗಳನ್ನಾಡಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ‘ಭಗವದ್ಗೀತೆಯಿಂದ ಹೊಟ್ಟೆ ತುಂಬುತ್ತದೆಯೇ?’ ಎಂದು ಪ್ರಶ್ನಿಸುವ ಮೂಲಕ, ಶಿಕ್ಷಣದ ಗುರಿ ಕೇವಲ ‘ಹೊಟ್ಟೆ ಹೊರೆದುಕೊಳ್ಳುವುದು’ ಎಂದು ಭಾವಿಸಿದಂತಿದೆ! ಭಗವದ್ಗೀತೆ ಮಾತ್ರ ನೈತಿಕ ಗ್ರಂಥವೆಂದೂ ಕುರಾನ್, ಬೈಬಲ್‌ಗಳು ಧಾರ್ಮಿಕ ಗ್ರಂಥಗಳೆಂದೂ ಆ ಕಾರಣಕ್ಕಾಗಿ ಅವುಗಳನ್ನು ಪಠ್ಯದಲ್ಲಿ ಸೇರಿಸಬಾರದೆಂದು ಸಂಸದ ಪ್ರತಾಪ ಸಿಂಹ ಸಂಕುಚಿತ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.

ಭಗವದ್ಗೀತೆ ಸಾರ್ವಕಾಲಿಕ ಶ್ರೇಷ್ಠ ಗ್ರಂಥ. ಗಾಂಧೀಜಿ ಭಗವದ್ಗೀತೆಯನ್ನು ‘ತಾಯಿ’ ಎಂದು ಭಾವಿಸಿ ಅನುಸರಿಸುತ್ತಿದ್ದರು. ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರಾದಿಯಾಗಿ ವಿಶ್ವದ ಶ್ರೇಷ್ಠ ತತ್ವಜ್ಞಾನಿಗಳು ಈ ಗ್ರಂಥದಿಂದ ಪ್ರಭಾವಿತರಾದವರು. ಅನೇಕ ಮಂದಿ ಸ್ವಾತಂತ್ರ್ಯ ಹೋರಾಟಗಾರರು ಇದರಿಂದ ಸ್ಫೂರ್ತಿ ಪಡೆದಿದ್ದಾರೆ. ಗಾಂಧೀಜಿ ಯಾವುದೇ ಧರ್ಮಗ್ರಂಥಗಳ ವಿರೋಧಿಯಾಗಿರಲಿಲ್ಲ. ‘ನಾನು ನನ್ನ ಕೋಣೆಯ ಕಿಟಕಿ ಬಾಗಿಲುಗಳನ್ನು ತೆರೆದಿಡುತ್ತೇನೆ. ಎಲ್ಲ ಕಡೆಯಿಂದಲೂ ಗಾಳಿ, ಬೆಳಕು ಹರಿದುಬರಲಿ’ ಎಂದು ಮಾರ್ಮಿಕವಾಗಿ ನುಡಿದಿದ್ದರು. ಸರ್ವಜ್ಞ ಕವಿಯೂ ‘ಊರಿಂಗೆ ದಾರಿಯನು ಆರು ತೋರಿದರೇನು?’ ಎಂದಿದ್ದಾನೆ. ಆದ್ದರಿಂದ ಭಗವದ್ಗೀತೆಯ ಜೊತೆಗೆ ಕುರಾನ್, ಬೈಬಲ್, ಗ್ರಂಥಸಾಹೇಬ್ ಮುಂತಾದ ಗ್ರಂಥಗಳ ಮೌಲಿಕ ಜಾತ್ಯತೀತ ಸಾರ್ವತ್ರಿಕ ಭಾಗಗಳನ್ನು ಪಠ್ಯದಲ್ಲಿ ಅಳವಡಿಸುವ ಮೂಲಕ ಮಕ್ಕಳಲ್ಲಿ ಮಾನವೀಯ ಮೌಲ್ಯ ಮತ್ತು ಧಾರ್ಮಿಕ ಸಹಿಷ್ಣುತೆಯನ್ನು ಬೆಳೆಸುವುದು ಇಂದಿನ ತುರ್ತು ಅಗತ್ಯವಾಗಿದೆ.

-ಶಿವಕುಮಾರ ಬಂಡೋಳಿ, ಹುಣಸಗಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.