ADVERTISEMENT

ವಾಚಕರ ವಾಣಿ | ನೇಮಕಾತಿ ನಿಯಮದಲ್ಲಿ ಲೋಪ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 17:26 IST
Last Updated 4 ಆಗಸ್ಟ್ 2020, 17:26 IST

ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ವಿದ್ಯಾರ್ಹತೆಯನ್ನು ನಿಗದಿಪಡಿಸಿ ಕರ್ನಾಟಕ ಸರ್ಕಾರವು ಪ್ರಕಟಿಸಿರುವ ರಾಜ್ಯಪತ್ರದಲ್ಲಿ ಒಂದು ತೊಡಕಿದೆ. ಸ್ನಾತಕೋತ್ತರ ಪದವಿಯಲ್ಲಿ ತೇರ್ಗಡೆ ಹೊಂದಿದ ವಿಷಯವನ್ನು ಅಭ್ಯರ್ಥಿಯು ಪದವಿ ತರಗತಿಯಲ್ಲೂ ‘ಐಚ್ಛಿಕ’ವಾಗಿ ಓದಿರಬೇಕು ಎಂಬ ಷರತ್ತನ್ನು ಈ ರಾಜ್ಯಪತ್ರದಲ್ಲಿ ವಿಧಿಸಲಾಗಿದೆ. ಕನ್ನಡ ಸ್ನಾತಕೋತ್ತರ ಪದವಿಯನ್ನು ನಾಡಿನ ಯಾವುದೇ ವಿಶ್ವವಿದ್ಯಾಲಯವೂ ಈ ಮೇಲಿನ ನಿಯಮದಂತೆ ಇದುವರೆಗೂ ನೀಡಿಲ್ಲ. ಹೀಗಾಗಿ, ಸಾವಿರಾರು ಪದವೀಧರರು ಭಾಷಾ ವಿಷಯವಾಗಿ ಪದವಿ ಹಂತದಲ್ಲಿ ಓದಿ, ನಂತರ ಕನ್ನಡ ಅಥವಾ ಕನ್ನಡ ಸಾಹಿತ್ಯದಲ್ಲಿ ವಿಶ್ವವಿದ್ಯಾಲಯ ಮತ್ತು ಯುಜಿಸಿ ನಿಯಮಗಳ ಪ್ರಕಾರ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ಕನ್ನಡದಲ್ಲಿ ಪಿಎಚ್.ಡಿ ಪದವಿಯನ್ನು ಪಡೆದಿರುತ್ತಾರೆ. ಯುಜಿಸಿ ನಡೆಸುವ ನೆಟ್, ಕರ್ನಾಟಕದ ಕೆಸೆಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಇಂತಹವರು ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅನರ್ಹರೇ? ಮೇಲಿನ ನಿಯಮದಿಂದ ಅನೇಕ ಅರ್ಹ ಅಧ್ಯಾಪಕವೃತ್ತಿ ಆಕಾಂಕ್ಷಿಗಳಿಗೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟವರು ಲೋಪವನ್ನು ಸರಿಪಡಿಸಿಕೊಂಡು ಈ ನಿಯಮವನ್ನು ಕೈಬಿಡಲಿ.

- ಡಾ. ನಂದೀಶ್ವರ ದಂಡೆ, ಕೊಂಡನಾಯಕನಹಳ್ಳಿ, ಹೊಸಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT