ADVERTISEMENT

ವಾಚಕರ ವಾಣಿ | ಒಂಟಿ ಮನೆ ಯೋಜನೆ: ಸುಳ್ಳು ಭರವಸೆ ಬೇಡ

​ಪ್ರಜಾವಾಣಿ ವಾರ್ತೆ
Published 17 ಜನವರಿ 2023, 19:36 IST
Last Updated 17 ಜನವರಿ 2023, 19:36 IST

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಸ್ವಂತ ನಿವೇಶನ ಹೊಂದಿದವರು ಒಂಟಿ ಮನೆ ಯೋಜನೆಯಡಿ ₹ 5 ಲಕ್ಷ ಪಡೆಯಲು ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದೆ. ಇದನ್ನೇ ನಂಬಿ ತಮ್ಮ ಗುಡಿಸಲು ಇಲ್ಲವೇ ಇರುವ ಸೂರನ್ನು ಒಡೆದುಹಾಕಿ ಪಾಯವನ್ನೋ ಬಾಗಿಲಿನವರೆಗೆ ಕಟ್ಟಡವನ್ನೋ ಸಾಲ ಸೋಲ ಮಾಡಿ ನಿರ್ಮಿಸಿ ಸುಮಾರು 3-4 ವರ್ಷಗಳಿಂದ ಹಣಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿರುವವರು ಇದ್ದಾರೆ. ಅವರಿಗೆ ಬರಬೇಕಾದ ಹಣವೇ ಇನ್ನೂ ಬಿಡುಗಡೆ ಆಗಿಲ್ಲ, ಇನ್ನು ಹೊಸ ಅರ್ಜಿ ಪಡೆಯುವುದಾದರೂ ಏಕೆ? ಅದಕ್ಕಾಗಿ ಅವಧಿಯನ್ನು ವಿಸ್ತರಿಸುವುದಾದರೂ ಏಕೆ?

ಪೂರ್ತಿ ಸಾಲ ಮಾಡಿ ಮನೆ ಕೆಲಸ ಮುಗಿಸೋಣ ಎಂದುಕೊಂಡರೆ ಬಿಬಿಎಂಪಿ ನಿಯಮಗಳು ಒಪ್ಪುವುದಿಲ್ಲ. ಮನೆ ಕಟ್ಟಿಕೊಂಡರೆ ಎಲ್ಲಿ ಸಾಲ ಕೊಡುವುದಿಲ್ಲವೋ ಎಂಬ ಭಯ ಬೇರೆ. ಈ ಸಹಾಯಧನವನ್ನು ಪಡೆಯಲು ಲಂಚ ಕೊಡಬೇಕಾಗಿದೆ ಎಂಬ ಅರ್ಜಿದಾರರ ನೋವಿಗೆ ಸರ್ಕಾರ ಸ್ಪಂದಿಸಬೇಕಾಗಿದೆ. ಈಗಾಗಲೇ ಅರ್ಜಿ ಸಲ್ಲಿಸಿದವರ ಮನೆ ನಿರ್ಮಾಣಕ್ಕೆ ಬಿಬಿಎಂಪಿ ಮೊದಲು ಸಹಾಯಧನ ನೀಡಬೇಕು ಮತ್ತು ಅಮಾಯಕರಿಗೆ ಸುಳ್ಳು ಭರವಸೆ ನೀಡುವುದನ್ನು ಬಿಡಬೇಕು.
ಮಲ್ಲತ್ತಹಳ್ಳಿ ಡಾ. ಎಚ್. ತುಕಾರಾಂ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT