ADVERTISEMENT

ನಿಜಜೀವನದ ನಾಯಕರಾಗಲಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 18:30 IST
Last Updated 12 ಮಾರ್ಚ್ 2021, 18:30 IST

ಸಿನಿಮಾದ ನಾಯಕನಟರನ್ನು ದೇವರಂತೆ ಆರಾಧಿಸುವ ಅಭಿಮಾನಿಗಳು ನಮ್ಮಲ್ಲಿ ಹೇರಳವಾಗಿದ್ದಾರೆ. ತೆರೆಯ ಮೇಲಿನ ಜನಪ್ರಿಯ ನಟನೊಬ್ಬನ ವೇಷಭೂಷಣ, ಹಾವಭಾವಗಳನ್ನು ಯಥಾವತ್ತಾಗಿ ನಿಜಜೀವನದಲ್ಲಿ ನಕಲು ಮಾಡುವವರ ದಂಡೇ ನಮ್ಮಲ್ಲಿದೆ. ಅಭಿಮಾನಿಗಳ ಈ ಅಂಧಾನುಕರಣೆಯ ಬಗ್ಗೆ ಕಲಾವಿದರು, ಅದರಲ್ಲೂ ವಿಶೇಷವಾಗಿ ನಾಯಕನಟರು ಜಾಗೃತರಾಗಿರಬೇಕು. ಈ ಮುಂಗಾಣುವಿಕೆ ಡಾ. ರಾಜ್‌ಕುಮಾರ್‌ ಅವರಿಗೆ ಇತ್ತು. ಆದಕಾರಣ ಅವರು ತಮ್ಮ ಸಿನಿಪಯಣದುದ್ದಕ್ಕೂ ಮದ್ಯಹೀರುವ, ಧೂಮಪಾನ ಮಾಡುವ ಅಥವಾ ಇನ್ನಾವುದೇ ಅನುಕರಣೀಯವಲ್ಲದ ದೃಶ್ಯಗಳಲ್ಲಿ ಪಾಲ್ಗೊಳ್ಳಲಿಲ್ಲ. ತಾವು ನಿರ್ವಹಿಸುತ್ತಿರುವ ಪಾತ್ರ ಅಂತಹದ್ದನ್ನು ಬಯಸುತ್ತದೆ ಎಂದೆನಿಸಿದರೆ ಅದನ್ನು ಜಾಣತನದಿಂದ ನಿಭಾಯಿಸುವ ಜವಾಬ್ದಾರಿ ಅವರಿಗಿತ್ತು.‌ ಆದರೆ ಇಂದು ಬಹುತೇಕ ನಾಯಕರ ಚಿತ್ರಗಳು ಮದ್ಯದ ಹೊಳೆ, ಧೂಮದ ಮೋಡ, ಅಸಭ್ಯ ನಡವಳಿಕೆಗಳಿಂದ ತುಂಬಿಹೋಗಿರುತ್ತವೆ. ಅವರು ಅಭಿನಯಿಸುವ ಜಾಹೀರಾತುಗಳೂ ಇದಕ್ಕೆ ಹೊರತಾಗಿರುವುದಿಲ್ಲ.

ಇದನ್ನೆಲ್ಲ ನೋಡುವವರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಹಳ್ಳಿ ಹಳ್ಳಿಗಳಿಗೂ ಈ ವ್ಯಸನದ ಬಿಸಿ ಮುಟ್ಟಿದೆ. ಒಂದು ಸುಸಮಾಜದ ಕಟ್ಟುವಿಕೆಗೆ ಸಿನಿಮಾ ಕಾರಣೀಕರ್ತವಾಗುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ನಾಯಕನಟರು‌ ಈ ಬಗ್ಗೆ ಯೋಚಿಸಿ ತಮ್ಮ ಅಭಿಮಾನಿಗಳು ಮತ್ತು ಅವರ ಕುಟುಂಬ ವರ್ಗಗಳ ಆರೋಗ್ಯ, ಆಯಸ್ಸನ್ನು ಕಾಪಾಡಿ ನಿಜಜೀವನದ ನಾಯಕರುಗಳಾಗಲಿ.

ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.