ADVERTISEMENT

ಶಾಂತಿ ಕದಡುವ ಅಂಧರಿಗೆ ತಕ್ಕ ಶಿಕ್ಷೆಯಾಗಲಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 19:30 IST
Last Updated 20 ಡಿಸೆಂಬರ್ 2021, 19:30 IST

ಮಹಾಪುರುಷರಿಗೆ ಅವಮಾನ ಮಾಡುವುದು ಎಂತಹ ಸಂಸ್ಕೃತಿ? ಕನ್ನಡದ ಧ್ವಜ ಸುಡುವುದು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿರೂಪ, ಕನ್ನಡ ನಾಡಿನಲ್ಲಿ ಮಹಾರಾಷ್ಟ್ರಕ್ಕೆ ಜೈಕಾರ ಕೂಗುವುದು... ಇಂತಹ ಕುಚೇಷ್ಟೆಗಳಿಗೆ ಕೊನೆ ಇಲ್ಲವೇ? ಈ ನೆಲದ ಅನ್ನ ತಿಂದು, ಇಲ್ಲಿನ ಯೋಜನೆಗಳ ಫಲಾನುಭವಿಗಳಾಗಿದ್ದೂ ಭಾಷೆಯ ಹೆಸರಿನಲ್ಲಿ ಪದೇ ಪದೇ ಕ್ಯಾತೆ ತೆಗೆಯುವ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ಮುಖಂಡರ ಉಪಟಳಕ್ಕೆ ಶಾಶ್ವತವಾಗಿ ತಡೆ ಒಡ್ಡಬೇಕಾಗಿದೆ. ಮರಾಠಿ ಭಾಷಿಕರು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಇದ್ದಾರೆ. ಅವರು ಸ್ಥಳೀಯರೊಂದಿಗೆ ಅನ್ಯೋನ್ಯವಾಗಿ ಬೆರೆತು ಬಾಳುತ್ತಿದ್ದಾರೆ. ಆದರೆ ಬೆಳಗಾವಿಯ ಭಾಗದಲ್ಲಿ ಕೆಲವು ಮುಖಂಡರು ಭಾಷೆಯ ಹೆಸರಿನಲ್ಲಿ ಮುಗ್ಧರನ್ನು ದಾರಿ ತಪ್ಪಿಸುತ್ತಿದ್ದಾರೆ. ಇದು ಖಂಡನೀಯ.

ಇಂತಹ ಸಂದರ್ಭಗಳಲ್ಲಿ ಭಾಷಾಪ್ರೇಮ ಮೆರೆದು ಬಳಿಕ ಅಷ್ಟೇ ಬೇಗ ಮರೆತುಬಿಡುವ ನಮ್ಮ ಜನಪ್ರತಿನಿಧಿಗಳು ಇಂತಹ ಉಪಟಳವನ್ನು ಗಂಭೀರವಾಗಿ ಪರಿಗಣಿಸಬೇಕು. ಶಾಂತಿ ಕದಡುವಂತಹ ಪ್ರಯತ್ನ ಮಾಡುವ ಭಾಷಾಂಧರಿಗೆ ತಕ್ಕ ಶಿಕ್ಷೆ ಆಗಬೇಕು. ಸರ್ಕಾರ ಈ ವಿಚಾರದಲ್ಲಿ ದೃಢ ನಿರ್ಧಾರ ಕೈಗೊಳ್ಳಬೇಕು.

-ಗೌಡಪ್ಪಗೌಡ್ರು, ಬಾಗಲಕೋಟೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.