ADVERTISEMENT

ತಲೆಬಾಗುವ ಧೋರಣೆಯಿಂದ ಅಸ್ಮಿತೆಗೆ ಸವಾಲು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 2:48 IST
Last Updated 30 ಮಾರ್ಚ್ 2021, 2:48 IST

ರಾಜ್ಯಗಳ ವಿಚಾರದಲ್ಲಿ ಕೇಂದ್ರ ಹಸ್ತಕ್ಷೇಪ ನಡೆಸುತ್ತಿದೆ ಎಂಬ ಸಚಿವ ಮಾಧುಸ್ವಾಮಿ ಅವರ ಹೇಳಿಕೆಗೆ ಸಂಸದ ತೇಜಸ್ವಿ ಸೂರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ರಾಜ್ಯದಲ್ಲಿ ಬೇರೆ ಪಕ್ಷದ ನೇತೃತ್ವದ ಸರ್ಕಾರವಿದ್ದು ಅದರ ಸಚಿವರಾಗಿ ಮಾಧುಸ್ವಾಮಿಯವರು ಇದೇ ಮಾತುಗಳನ್ನು ಹೇಳಿದ್ದರೆ, ಅದರಲ್ಲಿ ಸತ್ಯಾಂಶ ಇದ್ದರೂ ತೇಜಸ್ವಿ ತಮ್ಮ ಪಕ್ಷದ (ಬಿಜೆಪಿ) ನೇತೃತ್ವದ ಕೇಂದ್ರ ಸರ್ಕಾರದ ಪರವಾಗಿಯೇ ಮಾತನಾಡುವುದನ್ನು ಅರ್ಥಮಾಡಿಕೊಳ್ಳಬಹುದಿತ್ತು! ಯಾಕೆಂದರೆ, ರಾಜಕೀಯ ಪಕ್ಷಗಳ ವಿದ್ಯಮಾನಗಳು ಇಂದು ಸೃಷ್ಟಿಸಿರುವುದು ಇಂಥ ವಾತಾವರಣವನ್ನೇ!

ನೀಟ್, ಉತ್ತರ ಭಾರತದವರಿಗೆ ಇಲ್ಲಿ ಪ್ರವೇಶಾವಕಾಶ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಇಲ್ಲದಿರುವುದು, ಒರಾಕಲ್ ಕಂಪನಿಯಲ್ಲಿನ ಅನುಭವ, ತುಮಕೂರಿನಲ್ಲಿ ಕಾರಿಡಾರ್ ಸ್ಥಾಪನೆಯಾದರೂ ಕನ್ನಡಿಗರಿಗೆ ಉದ್ಯೋಗದಲ್ಲಿ ವಂಚನೆ, ಪ್ರಧಾನಿ ಉದ್ಘಾಟಿಸಿದ ಫುಡ್ ಪಾರ್ಕಿನಲ್ಲಿ ಸ್ಥಳೀಯರಿಗೆ ಕೆಲಸ ಕೊಟ್ಟಿಲ್ಲದಿರುವುದು ಈ ಸಂಗತಿಗಳನ್ನು ಪ್ರಸ್ತಾಪ ಮಾಡಿರುವವರು, ತಮ್ಮ ಪಕ್ಷದವರೇ ಆದ, ಹೊಣೆಗಾರಿಕೆ ಇರುವ ಸಚಿವರೇ, ಅದೂ ಸಾರ್ವಜನಿಕ ವೇದಿಕೆಯ ಮೇಲಿಂದ ಎನ್ನುವುದನ್ನು ತೇಜಸ್ವಿ ಅವರು ಮರೆಯಬಾರದಿತ್ತು. ಕೇಂದ್ರ ಸರ್ಕಾರ ಮಾಡುವುದೆಲ್ಲವೂ ಪ್ರಶ್ನಾತೀತ ಎಂದು ತಲೆಬಾಗುವ ಧೋರಣೆ ಸಂಸದರ ಅಸ್ಮಿತೆಗೇ ಸವಾಲಾಗುತ್ತದೆ. ವಿವಿಧ ರಾಜ್ಯಗಳಲ್ಲಿರುವ ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಅರ್ಜಿ ಸಲ್ಲಿಸಬಹುದು ಎನ್ನುವ ಅವರ ಧೋರಣೆಯೇ ಅತಂತ್ರದ್ದು. ಕನ್ನಡಿಗರಿಗೆ ಕರ್ನಾಟಕದಲ್ಲೇ ನೆಲೆ ಬೇಡವೇ ಹಾಗಾದರೆ? ಖಾಸಗಿ ಉದ್ದಿಮೆದಾರರು ಬಂಡವಾಳ ಹಾಕಿ ದೇಶವನ್ನು ಸಂಪದ್ಭರಿತವನ್ನಾಗಿ ಮಾಡುತ್ತಾರೆ ಎನ್ನುವ ಮಾತುಗಳನ್ನಾಡುವಾಗ, ಸಂಪತ್ತು ಸೃಷ್ಟಿ ಮಾಡುವವರು ಸ್ಥಳೀಯರನ್ನು ನಿರಾಕರಿಸುವಂತಾದರೆ ಹೇಗೆ ಎನ್ನುವುದನ್ನೂ ಮರೆಯಬಾರದು. ಈಗ ಆಗಿರುವುದು ಇದೇ ತಾನೆ!

ಈ ಹಿಂದೆ ಗ್ರಾಮೀಣ ಬ್ಯಾಂಕುಗಳ ಹುದ್ದೆಗಳನ್ನು ಕರ್ನಾಟಕದವರಲ್ಲದವರೇ ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಂಡದ್ದು ಮಾಧ್ಯಮಗಳಲ್ಲಿ ಪ್ರಕಟಗೊಂಡು ರಂಪವಾಯಿತು. ಈಗೇನಾದರೂ ಪರಿಸ್ಥಿತಿ ಸುಧಾರಿಸಿದೆಯೇ? ರಾಜ್ಯದ 28 ಸಂಸದರಲ್ಲಿ 25 ಮಂದಿ ಬಿಜೆಪಿಯವರು. ರಾಜ್ಯಸಭೆಗೆ ಕರ್ನಾಟಕದಿಂದ ಆಯ್ಕೆಯಾದವರುಕೇಂದ್ರದಲ್ಲಿ ಹಣಕಾಸು ಸಚಿವೆಯಾಗಿದ್ದಾರೆ. ರಾಜ್ಯದ ಹಿತಾಸಕ್ತಿಗೆ, ಕನ್ನಡಿಗರ ಹಿತಾಸಕ್ತಿಗೆ ಈ ಮುಖಂಡರು ಮಾಡುತ್ತಿರುವುದೇನು, ಸಾಧಿಸಿರುವುದೇನು ಎನ್ನುವ ಬಗ್ಗೆ ವಿವರಗಳನ್ನು ರಾಜ್ಯದ ಜನರ ಮುಂದೆ ಇಡುವ
ಔದಾರ್ಯವನ್ನಾದರೂ ಇವರು ತೋರುವರೇ?

ADVERTISEMENT

-ಸಾಮಗ ದತ್ತಾತ್ರಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.