ADVERTISEMENT

ಈಗಾಗಲೇ ಇದೆ ಕಠಿಣ ಕಾನೂನು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 20:00 IST
Last Updated 16 ಡಿಸೆಂಬರ್ 2019, 20:00 IST

ನಮ್ಮ ಸಂವಿಧಾನ, ರಾಷ್ಟ್ರ, ನಮ್ಮ ಯಾವೊಬ್ಬ ನಾಗರಿಕರೂ ರಾಷ್ಟ್ರೀಯ ಭದ್ರತೆಯ ಜೊತೆ ರಾಜಿ ಆಗಬೇಕು ಎನ್ನುವುದಿಲ್ಲ. ನಮಗೆಲ್ಲರಿಗೂ ರಾಷ್ಟ್ರದ ಭದ್ರತೆ ಮೊದಲ ಆದ್ಯತೆ. ಬೇರೆ ಬೇರೆ ದೇಶಗಳಿಂದ ಬರುವ ‘ಅಕ್ರಮ ನುಸುಳುಕೋರ’ರಿಂದ ಭದ್ರತೆಗೆ ಧಕ್ಕೆ ಆಗುತ್ತದೆ ಎಂದಾದರೆ, ಅದನ್ನು ತಡೆಯಲು ಈಗಾಗಲೇ ಸಾಕಷ್ಟು ಕಠಿಣ ಕಾನೂನುಗಳು ಇವೆ. ರಾಷ್ಟ್ರೀಯ ಭದ್ರತಾ ಕಾನೂನು ಅಂತಹುದರಲ್ಲಿ ಒಂದು. ಆದರೆ ಪೌರತ್ವ (ತಿದ್ದುಪಡಿ) ಕಾಯ್ದೆಯ ಹಿಂದಿರುವ ವಿರೋಧಕ್ಕೆ ಕಾರಣ, ಆ ಕಾನೂನನ್ನು ಪ್ರಸ್ತಾಪಿಸಿದವರ ಮನಃಸ್ಥಿತಿ ಕುರಿತಾದುದು. ಭಾರತವನ್ನು ಒಡೆದು, ಬಹುಸಂಖ್ಯಾತರ ಭಾವನೆಗಳನ್ನು ಬಡಿದೆಬ್ಬಿಸಿ ತಾವು ಬೇಳೆ ಬೇಯಿಸಿಕೊಳ್ಳುವ ಹುನ್ನಾರದ ಬಗೆಗಿನದು!

ಇಂದು ಆ ಮನಸ್ಸುಗಳಿಗೆ ಆಯುಧವಾಗಿರುವುದು ಮುಸ್ಲಿಂ ಸಮುದಾಯ. ಒಂದು ಸಲ ಇದು ಮುಗಿದ ಮೇಲೆ, ಮುಂದೆ ಒಡೆಯಲು ಸಿಗುವುದು ಇನ್ನೇನೋ- ಉತ್ತರ , ದಕ್ಷಿಣ ಭಾರತಗಳನ್ನೂ ಒಡೆಯುವುದು ಆಗಿರಬಹುದು. ಹಿಂದಿ ಭಾಷಿಕ, ಹಿಂದಿ ಅಲ್ಲದ ಭಾಷಿಕ ಪ್ರಾಂತಗಳ ಸಮುದಾಯಗಳೂ ಆಗಿರಬಹುದು. ಜಾತಿ ಜಾತಿಗಳೂ ಆಗಿರಬಹುದು ಅಥವಾ ಇನ್ನೇನೋ...?

ಭಾರತದೊಂದಿಗೇ ಸ್ವಾತಂತ್ರ್ಯ ಹೊಂದಿದ ದೇಶಗಳಿಗಿಂತ ಭಾರತ ಇಂದು ಬಹಳ ಮುಂದಿದ್ದರೆ ಅದಕ್ಕೆ ಕಾರಣ ಸಂವಿಧಾನ- ಸಂವಿಧಾನದ ಮೊದಲ ಪುಟದಲ್ಲಿ ಪ್ರಸ್ತಾಪಿಸಿರುವ ಸಹೋದರತ್ವ ಮತ್ತು ಪ್ರಜಾಪ್ರಭುತ್ವ. ಪಕ್ಷ, ಪಂಗಡ, ಜಾತಿ, ಮತಗಳ ಒಳಜಗಳ ಬಿಟ್ಟು, ಭಾರತದ ಹೆಮ್ಮೆಯ ನಾಗರಿಕರಾಗಿ ನಾವೆಲ್ಲರೂ ಸಂವಿಧಾನದ ಆಶಯ ಎತ್ತಿ ಹಿಡಿಯೋಣ. ಎತ್ತಿ ಹಿಡಿಯುವಂತೆ ಒತ್ತಾಯಿಸೋಣ.

ಪ್ರಸನ್ನ ಎಂ., ಮಾವಿನಕುಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT