ADVERTISEMENT

ಕೊರೊನಾ ಸುದ್ದಿ ಕೇಳಿ ಕೇಳಿ...

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 15:41 IST
Last Updated 21 ಏಪ್ರಿಲ್ 2021, 15:41 IST

ದೂರದರ್ಶನದವರು ತಮ್ಮೆಲ್ಲಾ ಮನರಂಜನಾ ಕಾರ್ಯಕ್ರಮಗಳನ್ನು ನಿಲ್ಲಿಸಿ ಕೊರೊನಾ ಕುರಿತ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಬೇಕು ಎಂದು ನಾಗೇಶ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ (ವಾ.ವಾ., ಏ. 21). ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಬರೀ ಕೊರೊನಾಗೆ ಸಂಬಂಧಿಸಿದ ಸುದ್ದಿ (ಸುಳ್ಳು - ನಿಜ) ಕೇಳಿ ಕೇಳಿ ಮನಸ್ಸಿಗೆ ಬೇಸರ ಬಂದಿದೆ. ಅವರು ಹೇಳುವಂತೆ ಬರೀ ಕೊರೊನಾ ಕುರಿತು ಚರ್ಚೆ ಮಾಡಿದರೆ, ಜನರ ಭಯ ಇನ್ನೂ ಹೆಚ್ಚಾಗಲಿದೆ.

ಸರ್ಕಾರ, ದೃಶ್ಯ ಮತ್ತು ಶ್ರವಣ ಮಾಧ್ಯಮಗಳು ಜನಜಾಗೃತಿ ಮೂಡಿಸಲು ಈಗಾಗಲೇ ಪ್ರಯತ್ನಿಸುತ್ತಿವೆ. ಮಾಸ್ಕಿನ ಮಹತ್ವದ ಬಗ್ಗೆ ಸಾರಿ ಸಾರಿ ಹೇಳಿದರೂ ಬಹಳಷ್ಟು ಜನ ಅಸಡ್ಡೆಯಿಂದ ವರ್ತಿಸುತ್ತಿದ್ದಾರೆ. ಇನ್ನು ಈ ರೀತಿಯ ಪ್ರಶ್ನೆ- ಉತ್ತರ ಕಾರ್ಯಕ್ರಮಕ್ಕೆ ಬೆಲೆಯೆಲ್ಲಿ? ನಿಜವಾಗಿ ಎಚ್ಚರ ವಹಿಸಲು ಬಯಸುವ ಜನ ಒಮ್ಮೆ ಹೇಳಿದರೆ ಅದನ್ನು ಅಳವಡಿಸಿಕೊಳ್ಳುತ್ತಾರೆ. ಅಸಡ್ಡೆ ವಹಿಸುವ ಜನಕ್ಕೆ ದಿನವಿಡೀ ಎಷ್ಟು ಹೇಳಿದರೂ ಏನು ಪ್ರಯೋಜನ?

ಹೆಗಡೆ ಅವರು ಹೇಳಿದಂತೆ, ಸಹಾಯವಾಣಿ ತೆಗೆದು ಅಲ್ಲಿ ಸೂಕ್ತವಾದ ಮಾಹಿತಿ - ಸಹಾಯ ಒದಗಿಸಬೇಕಾಗಿರುವುದು ಸರ್ಕಾರದ ಕೆಲಸ. ಸಹಾಯವಾಣಿ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ವಾಹಿನಿಗಳು ಮಾಡಬಹುದು. ಶ್ರೀಯುತರು ತಮ್ಮ ಪ್ರಾಸ ಹೊಂದಿಸುವ ಭರದಲ್ಲಿ ‘ಥಟ್‌ ಅಂತ ಹೇಳಿ’ ಕಾರ್ಯಕ್ರಮವನ್ನು ಎಳೆದು ತಂದಿರುವುದು ನಿಜಕ್ಕೂ ಬೇಸರ ತರಿಸಿದೆ. ಇದು ಯಾವುದೇ ಸಾಮಾನ್ಯ ಮನರಂಜನಾ ಕಾರ್ಯಕ್ರಮವಲ್ಲ. ಜವಾಬ್ದಾರಿಯುತ, ವಿಶಿಷ್ಟ ಮಾಹಿತಿ ನೀಡುವ ಕಾರ್ಯಕ್ರಮವಾಗಿದೆ.

ADVERTISEMENT

- ಶ್ರೇಯಸ್,ತುಮಕೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.