ADVERTISEMENT

ವಾಚಕರವಾಣಿ: ಗುರುತರ ಜವಾಬ್ದಾರಿ ಮನಗಾಣಬೇಕಿದೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 20:21 IST
Last Updated 9 ಜನವರಿ 2022, 20:21 IST

ಕೋವಿಡ್ ಸಾಂಕ್ರಾಮಿಕದ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಜಾರಿ ಮಾಡುವುದಿಲ್ಲ ಎಂದು ರಾಜ್ಯ ಆರೋಗ್ಯ ಸಚಿವರು ಹೇಳಿರುವುದು ಸೂಕ್ತ ನಿರ್ಧಾರವಾಗಿದೆ. ಕೊರೊನಾ ವೈರಸ್ಸಿನ ಹರಡುವಿಕೆ ತಡೆಯಲು ರಾತ್ರಿ ಕರ್ಪ್ಯೂ, ವಾರಾಂತ್ಯದ ಕರ್ಫ್ಯೂವಿನ ಕಠಿಣ ಮಾರ್ಗಸೂಚಿಗಳು ಮಾತ್ರ ಜಾರಿಯಲ್ಲಿ ಇರುತ್ತವೆ ಎಂಬ ಸಚಿವರ ಸ್ಪಷ್ಟನೆಯು ಸ್ವಾಗತಾರ್ಹವಾಗಿದೆ. ಲಾಕ್‌ಡೌನ್ ಎಂಬುದು ಕೋವಿಡ್ ಸಾಂಕ್ರಾಮಿಕದ ಬಗೆಗೆ ಸ್ಪಷ್ಟ ಅರಿವು ಇರದ ಸಮಯದಲ್ಲಿ ಜಾರಿಗೆ ಬಂದ ಕ್ರಮವಾಗಿದೆ. ಈಗ ಕೊರೊನಾ ಮತ್ತು ಅದರ ರೂಪಾಂತರ ತಳಿಗಳ ರೋಗ ಲಕ್ಷಣಗಳ ಬಗ್ಗೆ ಅರಿತಿದ್ದೇವೆ. ಅಷ್ಟಾದರೂ ಈಗಲೂ ಲಾಕ್‌ಡೌನ್‌ನಂತಹ ಪದ್ಧತಿಯನ್ನೇ ಅನುಸರಿಸುವುದು ಸರಿಯಲ್ಲ. ಸಾಂಕ್ರಾಮಿಕ ರೋಗಾಣುವನ್ನು ಎದುರಿಸುವುದಕ್ಕೆ ನಾವೆಲ್ಲ ಸಂಪೂರ್ಣ ಸನ್ನದ್ಧರಾಗಿದ್ದೇವೆ ಎಂಬ ಆತ್ಮವಿಶ್ವಾಸದ ಮಾತನ್ನು ಸಚಿವರ ಸ್ಪಷ್ಟನೆಯಲ್ಲಿ ಕಾಣಬಹುದಾಗಿದೆ. ಜನ ಇನ್ನಾದರೂ ಎಚ್ಚೆತ್ತು ಕೊರೊನಾ ವೈರಾಣು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ದೈಹಿಕ ಅಂತರ ಪಾಲನೆ, ಕಡ್ಡಾಯ ಮಾಸ್ಕ್ ಧರಿಸುವಿಕೆ, ಶುಚಿತ್ವದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವಂತಹ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದು ನಮ್ಮೆಲ್ಲರ ಕರ್ತವ್ಯವೂ ಹೌದು. ಸದಾ ಎಚ್ಚರ ವಹಿಸಿ, ಜನದಟ್ಟಣೆ ಆಗದಂತೆ ನೋಡಿಕೊಳ್ಳುವ ಮತ್ತು ಸಭೆ, ಸಮಾರಂಭಗಳನ್ನು ಹಮ್ಮಿಕೊಳ್ಳದೆ ರೋಗ ನಿಯಂತ್ರಣಕ್ಕೆ ತರುವ ದಿಸೆಯಲ್ಲಿ ಎಲ್ಲರ ಸಹಕಾರ ಅತ್ಯವಶ್ಯವಾಗಿದೆ ಹಾಗೂ ಗುರುತರ ಜವಾಬ್ದಾರಿ ಎಲ್ಲರದಾಗಿದೆ ಎಂಬುದನ್ನು ಮನಗಾಣಬೇಕಾಗಿದೆ. ನಮ್ಮ ಸುರಕ್ಷತೆಯೊಂದಿಗೆ ಪರರ ಸುರಕ್ಷತೆಗೂ ಆದ್ಯತೆ ನೀಡಿ ಸಾಮಾಜಿಕ ಬದ್ಧತೆ ಮೆರೆಯಬೇಕಾಗಿದೆ.

- ಆರ್.ಬಿ.ಜಿ. ಘಂಟಿ,ಅಮೀನಗಡ, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT