ADVERTISEMENT

ನವರಾತ್ರಿ | ವೇಷಧಾರಿಗಳೇ... ಇತ್ತ ಗಮನಹರಿಸಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 17:29 IST
Last Updated 2 ಅಕ್ಟೋಬರ್ 2019, 17:29 IST

ನವರಾತ್ರಿಯಲ್ಲಿ ರಾಜ್ಯದ ಕರಾವಳಿ ಭಾಗದ ವಿಶೇಷ ಆಕರ್ಷಣೆಗಳಲ್ಲಿ ಹುಲಿವೇಷವೂ ಒಂದು. ಈ ಭಾಗದ ಜನರ ಹುಲಿವೇಷದ ಬಣ್ಣ, ಕುಣಿತ, ಡೋಲಿನ ಸದ್ದು, ಅವರು ಪ್ರದರ್ಶಿಸುವ ಮೈ ಜುಮ್ಮೆನ್ನಿಸುವ ಸಾಹಸದ ಸರ್ಕಸ್‍ಗಳು, ವಿವಿಧ ದೇವರುಗಳನ್ನು ಬಿಂಬಿಸುವ ಇನ್ನಿತರ ವೇಷಗಳು ಎಲ್ಲವೂ ಮೇಳೈಸಿ ಭರಪೂರ ಮನರಂಜನೆ ದೊರೆಯುತ್ತದೆ. ನಮ್ಮ ಸಾಂಸ್ಕೃತಿಕ ಹಿರಿಮೆಯನ್ನು ಸಾರುವ ಅವರ ಪರಿಶ್ರಮದ ಬಗೆಗೆ ಜನರಲ್ಲಿ ಗೌರವ ಮೂಡುತ್ತದೆ.

ಇದರ ನಡುವೆ, ಒಂದಷ್ಟು ವಿಚಾರಗಳ ಕುರಿತು ಈ ವೇಷಧಾರಿಗಳು ಗಮನ ಹರಿಸುವುದು ಒಳಿತು. ಆಕರ್ಷಣೆಯ ನೆಪದಲ್ಲಿ ಮೈಮೇಲೆ ಕರೆನ್ಸಿ ನೋಟುಗಳ ಮಾಲೆಯನ್ನು ಕೆಲವರು ಧರಿಸುತ್ತಾರೆ. ಮಾಲೆಗಳಿಗಾಗಿ ನೋಟುಗಳನ್ನು ತೂತು ಮಾಡಿ ದಾರದಿಂದ ಪೋಣಿಸಲಾಗಿರುತ್ತದೆ ಅಥವಾ ಕೆಲವೊಮ್ಮೆ ಗಮ್ ಬಳಸಿ ಅಂಟಿಸಲಾಗುತ್ತದೆ. ಹೀಗೆ ನೋಟುಗಳಿಗೆ ಅವಮಾನ ಮಾಡುವುದು ಸರಿಯೇ?

ಇನ್ನು ಕೆಲವರು ಆಯಾಸದ ನೆಪವೊಡ್ಡಿ ಅತಿಯಾಗಿ ಮದ್ಯ ಸೇವಿಸಿ ಹುಚ್ಚುಚ್ಚಾಗಿ ಆಡಿ ಜನರ ದೃಷ್ಟಿಯಲ್ಲಿ ನಗೆಪಾಟಲಿಗೆ ಈಡಾಗುತ್ತಾರೆ. ಕೆಲವರು ಜನರನ್ನು ಅಡ್ಡಗಟ್ಟಿ ಬಲವಂತವಾಗಿ ಹಣ ಕೀಳುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇವೆಲ್ಲವೂ ಅಕ್ಷೇಪಾರ್ಹ ನಡವಳಿಕೆಗಳೇ ಆಗಿವೆ. ವೇಷ ಧರಿಸುವುದೇ ದುಡ್ಡು ಮಾಡಲಿಕ್ಕಾಗಿ ಎನ್ನುವಂತೆ ವರ್ತಿಸಿದರೆ, ಜನರಿಗೆ ಅದರ ನಿಜವಾದ ಮೌಲ್ಯಗಳನ್ನು ತಲುಪಿಸಲು ಆಗುವುದಿಲ್ಲ. ನಮ್ಮ ಅದ್ಭುತವಾದ ಕಲಾ ಪರಂಪರೆಯ ಕೊಂಡಿಗಳಂತಿರುವ ವೇಷಧಾರಿಗಳು ಜವಾಬ್ದಾರಿಯಿಂದ ವರ್ತಿಸುವಲ್ಲಿ ಇಡೀ ಭವ್ಯ ಪರಂಪರೆಯ ರಚನಾತ್ಮಕ ಬೆಳವಣಿಗೆ ಅಡಗಿದೆ.

ADVERTISEMENT

-ನರೇಂದ್ರ ಎಸ್. ಗಂಗೊಳ್ಳಿ,ಕುಂದಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.