ADVERTISEMENT

ಅನಧಿಕೃತ ಶಾಲೆಗೆ ‘ಮ್ಯಾಜಿಕ್‌’ ನೆರವು!

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 20:00 IST
Last Updated 11 ಅಕ್ಟೋಬರ್ 2019, 20:00 IST

ರಾಜ್ಯದ ನೂತನ ಶಿಕ್ಷಣ ಸಚಿವರು ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ತರಲು ಪ್ರಯತ್ನಿಸುತ್ತಿದ್ದಾರೆ. ಆದರೆ ದಶಕಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಬಹುಮುಖ್ಯ ಸಮಸ್ಯೆ ಎಂದರೆ ಅನಧಿಕೃತ ಶಾಲೆಗಳದ್ದು! ಎರಡು ದಶಕಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿ ಮಿತಿಮೀರಿದ್ದು, ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಪಡೆದ ವಿವರದಂತೆ, 1994ರಿಂದ 2000ದವರೆಗೆ ವರ್ಷಕ್ಕೆ ಸರಾಸರಿ 300ರಿಂದ 400 ಖಾಸಗಿ ಪ್ರಾಥಮಿಕ ಶಾಲೆಗಳು ಪ್ರಾರಂಭವಾಗಿದ್ದವು. ಆದರೆ 2001ರಿಂದ 2011ರವರೆಗೆ, ಪ್ರತಿವರ್ಷ 600-700 ಶಾಲೆಗಳು ಹುಟ್ಟಿಕೊಂಡಿವೆ! ಒಂದು ಖಾಸಗಿ ಶಾಲೆಗೆ ಅನುಮತಿ ಪಡೆದರೆ, ಅಲ್ಲಿ ಪ್ರತಿಯೊಂದು ತರಗತಿಯ 3-4 ವಿಭಾಗಗಳು ಪ್ರಾರಂಭವಾಗುತ್ತವೆ! ಆದರೆ ಇವುಗಳಲ್ಲಿ ಬಹಳಷ್ಟು ಶಾಲೆಗಳು ಸರ್ಕಾರಿ ನಿಯಮಾವಳಿ ಪ್ರಕಾರ ನೋಂದಾಯಿತವಾಗದ ಶಾಲೆಗಳು ಎಂಬುದು ವಿಪರ್ಯಾಸ.

ರಾಜ್ಯದಲ್ಲಿ ಇಂತಹ 5,000ಕ್ಕೂ ಹೆಚ್ಚು ಅನಧಿಕೃತ ಶಾಲೆಗಳು ವರ್ಷಾನುಗಟ್ಟಲೆಯಿಂದ ಎಗ್ಗಿಲ್ಲದೇ ಕಾರ್ಯ ನಿರ್ವಹಿಸುತ್ತಿರುವ ಅಂದಾಜಿದೆ. ಇದರ ಪಕ್ಕಾ ಲೆಕ್ಕ ಗೊತ್ತಿರುವುದು ಶಿಕ್ಷಣ ಇಲಾಖೆಯ ಡಿಡಿಪಿಐ ಮತ್ತು ಬಿಇಒಗಳಿಗೆ! ಏಕೆಂದರೆ ಇವರ ಸಹಕಾರ ಇಲ್ಲದಿದ್ದರೆ ಅನಧಿಕೃತ ಶಾಲೆಗಳು ಹುಟ್ಟಿಕೊಳ್ಳಲು, ಹೀಗೆ ರಾಕ್ಷಸಾಕಾರವಾಗಿ ಬೆಳೆದು ನಿಲ್ಲಲು ಸಾಧ್ಯವೇ ಆಗುತ್ತಿರಲಿಲ್ಲ. ಪ್ರತಿವರ್ಷ ಮೇ ತಿಂಗಳು ಬಂತೆಂದರೆ ಶಿಕ್ಷಣ ಇಲಾಖೆಯಿಂದ ಪತ್ರಿಕೆಗಳಿಗೆ ಅನಧಿಕೃತ ಶಾಲೆಗಳ ಪಟ್ಟಿ ಬಿಡುಗಡೆಗೊಳ್ಳುತ್ತದೆ. ಆನಂತರ ಅವು ಹೇಗೆ ಮ್ಯಾಜಿಕ್‍ಗೆ ಒಳಪಟ್ಟಂತೆ ಅಧಿಕೃತವಾಗುತ್ತವೆ? ಅಂತಹ ಶಾಲೆಗಳ ಮೇಲೆ ಇದುವರೆಗೆ ಯಾವುದೇ ಸರ್ಕಾರವೂ ಏಕೆ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂಬ ಪ್ರಶ್ನೆಗಳು ಹಾಗೇ ಉಳಿದಿವೆ. ಶೈಕ್ಷಣಿಕ ನಿಯಮಗಳನ್ನು ಪಾಲಿಸದ ಅನಧಿಕೃತ ಖಾಸಗಿ ಶಾಲೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಿ. ಅಲ್ಲಿ ‘ಅನಧಿಕೃತ’ವಾಗಿ ಕಲಿಯುತ್ತಿರುವ ಮಕ್ಕಳ ಭವಿಷ್ಯವನ್ನು ಕಾಪಾಡಲಿ.

-ರೂಪ, ಹಾಸನ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.