ADVERTISEMENT

ಶೈಕ್ಷಣಿಕ ವ್ಯವಸ್ಥೆಯ ತಿಮಿಂಗಿಲಗಳು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 20:30 IST
Last Updated 15 ಫೆಬ್ರುವರಿ 2019, 20:30 IST

‘ಸಮಸ್ಯೆ ಚಕ್ಕರ್ ಮಾತ್ರ ಅಲ್ಲ’ ಎಂಬ ಎಂ.ಜೆ.ರಾಜೀವಗೌಡ ಮೇಲೂರು ಅವರ ಲೇಖನಕ್ಕೆ (ಪ್ರ.ವಾ., ಸಂಗತ, ಫೆ. 15) ಪ್ರತಿಕ್ರಿಯೆ. ಲೇಖಕರು ಹೇಳಿರುವ ಹಲವು ಅಂಶಗಳು ಬಿಡಿಬಿಡಿಯಾಗಿ ನಿಜವಾಗಿದ್ದು, ಸಾಗರದಂತಿರುವ ಶೈಕ್ಷಣಿಕ ವ್ಯವಸ್ಥೆಯೊಳಗೆ ಇರುವ ಕೆಲವೇ ತಿಮಿಂಗಿಲಗಳಿಗೆ ಅನ್ವಯಿಸುತ್ತವೆ. ಎಲ್ಲ ಕ್ಷೇತ್ರಗಳಲ್ಲೂ ಪ್ರಾಮಾಣಿಕವಾಗಿ ದುಡಿಯುವ ಹಾಗೂ ಸೋಮಾರಿಗಳಾಗಿ ಕಾಲ ನೂಕುವ ಒಂದಷ್ಟು ನೌಕರ ವರ್ಗ ಇರುವುದಂತೂ ಸತ್ಯ. ಹಾಗೆಂದ ಮಾತ್ರಕ್ಕೆ ಯಾರೋ ಕೆಲವರನ್ನು ನೋಡಿ ಇಡೀ ವ್ಯವಸ್ಥೆಯೇ
ಕೆಟ್ಟುಹೋಗಿದೆಯೆಂದು ಸಾರ್ವತ್ರೀಕರಿಸುವುದು ಸರಿಯೆನಿಸುವುದಿಲ್ಲ.

ಅಸಲಿಗೆ, ಶಿಕ್ಷಕರ ಸಮಸ್ಯೆಗಳೇ ಬೇರೆ. ಶಿಕ್ಷಕರಿಗೆ 3 ವರ್ಷಗಳಿಂದ ವರ್ಗಾವಣೆಯಾಗಿಲ್ಲ. ಸಾವಿರಾರು ಶಿಕ್ಷಕರು ವರ್ಗಾವಣೆ- ಬಡ್ತಿಯ ಭಾಗ್ಯವಿಲ್ಲದೆ ಒಂದೇ ಕಡೆ ಕೊಳೆತು ವೇದನೆ ಅನುಭವಿಸುತ್ತಿರುವುದನ್ನು ಯಾರು ಬಲ್ಲರು? ಮೌಲ್ಯಮಾಪನಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಿರ್ವಹಿಸುವುದಕ್ಕೇ ಹೆಚ್ಚಿನ ಸಮಯ ವ್ಯರ್ಥವಾಗುತ್ತಿದೆ.

ವಿದ್ಯಾರ್ಥಿ ವೇತನ ಮಂಜೂರು ಮಾಡಿಸುವ ಹೊಣೆಯನ್ನೂ ಶಿಕ್ಷಕರ ಮೇಲೆ ಹೊರಿಸಲಾಗಿದೆ. ಆಧಾರ್ ಲಿಂಕ್ ಮಾಡಿಸಲು ಶಿಕ್ಷಕರು ಬ್ಯಾಂಕುಗಳಿಗೆ ಅಲೆಯಬೇಕಾಗಿದೆ. ಜಯಂತಿಗಳ ಆಚರಣೆಗೆ ಶಾಲೆಯ ಸಮಯ ವ್ಯರ್ಥವಾಗುತ್ತಿರುವುದನ್ನು ಶಿಕ್ಷಣಾಸಕ್ತರು ಗಮನಿಸದಿರುವುದು ದುರ್ದೈವ.

ADVERTISEMENT

ವಾಟ್ಸ್‌ಆ್ಯಪ್‌, ಫೇಸ್‌ಬುಕ್ ವ್ಯಾಧಿ ಶಿಕ್ಷಕರನ್ನು ಮಾತ್ರವಲ್ಲದೆ ಹಿರಿ ಕಿರಿಯರೆನ್ನದೆ ವ್ಯವಸ್ಥೆಯ ಬಹುಪಾಲು ಮಂದಿಯನ್ನು ಆವರಿಸಿದೆ. ಹೈಸ್ಕೂಲ್ ಮಕ್ಕಳ ಕೈಯಲ್ಲಿ ಸ್ಮಾರ್ಟ್ ಫೋನ್‍ಗಳಿವೆ. ಕೆಲವರಂತೂ ನೀಲಿಚಿತ್ರ ವೀಕ್ಷಿಸುವ ಮೂಲಕ ಜೊತೆಯಲ್ಲಿರುವವರನ್ನೂ ಹಾಳು ಮಾಡುತ್ತಿದ್ದಾರೆ; ಟಿ.ವಿ ವಾಹಿನಿಗಳ ರಿಯಾಲಿಟಿ ಷೋಗಳನ್ನು ಮಕ್ಕಳು ಮಾದರಿಯನ್ನಾಗಿ ಅನುಕರಿಸುತ್ತಿದ್ದಾರೆ. ಇವೆಲ್ಲವನ್ನೂ ಶಿಕ್ಷಕರು ನಿಯಂತ್ರಿಸಲು ಸಾಧ್ಯವಿದೆ, ಆದರೆ ಶಿಕ್ಷಿಸುವಂತಿಲ್ಲ, ಬುದ್ಧಿ ಹೇಳಿದ ಮಾತ್ರಕ್ಕೆ ಮಗು ಆತ್ಮಹತ್ಯೆ ಮಾಡಿಕೊಂಡರೂ ಶಿಕ್ಷಕರದೇ ತಪ್ಪು! ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ ಶ್ರದ್ಧೆಯಿಂದ ಪಾಠ ಮಾಡುತ್ತಾ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ನಿಜಕ್ಕೂ ಸಲಾಂ ಹೇಳಬೇಕಿದೆ.

ಪುಟ್ಟದಾಸು, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.