ADVERTISEMENT

ಶಾಲಾ ಪಾಠ: ವೇಳಾಪಟ್ಟಿ ಪ್ರಕಟವಾಗಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 13 ಜುಲೈ 2021, 19:30 IST
Last Updated 13 ಜುಲೈ 2021, 19:30 IST

ಹೊಸ ಶೈಕ್ಷಣಿಕ ವರ್ಷದಲ್ಲಿ, ದೂರದರ್ಶನದ ಚಂದನ ವಾಹಿನಿಯು ಶಾಲಾ ವಿದ್ಯಾರ್ಥಿಗಳಿಗಾಗಿ ಆರಂಭಿಸಿರುವ ವಿಡಿಯೊ ಪಾಠಗಳು ಹಿಂದಿನ ವರ್ಷಕ್ಕಿಂತಲೂ ಚೆನ್ನಾಗಿ ಮೂಡಿಬರುತ್ತಿವೆ. ಆದರೆ ಯಾವ ದಿನ ಯಾವ ತರಗತಿಯ ಪಾಠಗಳನ್ನು ಬಿತ್ತರಿಸಲಾಗುತ್ತದೆ ಎಂಬುದು ತಿಳಿಯದೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ತೀವ್ರ ತೊಂದರೆ ಆಗಿದೆ. ತನ್ನ ತರಗತಿಯ ಪಾಠ ಇವತ್ತು ಇದೆಯೋ ಇಲ್ಲವೋ, ಇದ್ದರೆ ಎಷ್ಟು ಗಂಟೆಗೆ ಇದೆ ಎಂಬ ಮಾಹಿತಿ ತಿಳಿಯದೆ ವಿದ್ಯಾರ್ಥಿಗಳು ಅತ್ಯಮೂಲ್ಯವಾದ ಪಾಠಗಳನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಶನಿವಾರ ಮತ್ತು ಭಾನುವಾರಗಳಂದು ಪಾಠಗಳು ಬಹುತೇಕ ಇರುವುದಿಲ್ಲ. ಆದರೂ ಅಂದು ಕೆಲವೊಮ್ಮೆ ಹಠಾತ್ತನೆ ಯಾವುದಾದರೂ ತರಗತಿಯ ಪಾಠಗಳನ್ನು ಬಿತ್ತರಿಸುವುದು ಕಂಡುಬಂದಿದೆ. ನನ್ನ ಹೆಂಡತಿ, ಮಕ್ಕಳು ಬೆಳಿಗ್ಗೆಯಿಂದ ಸಂಜೆಯವರೆಗೆ ಟಿ.ವಿ ಮುಂದೆ ಕೂತು, ಇವತ್ತು ಯಾವಾಗ ಯಾವ ತರಗತಿಯ ಪಾಠ ಇದೆ ಎಂಬುದನ್ನು ತಿಳಿಯಲು ಪರದಾಡುವುದನ್ನು ನೋಡಿದರೆ, ನನಗೆ ಮಳೆಗಾಗಿ ಆಕಾಶವನ್ನೇ ನೋಡುತ್ತಿರುವ ರೈತನ ನೆನಪಾಗುತ್ತದೆ.

ಹಿಂದಿನ ವರ್ಷದ ಅನುಭವದಲ್ಲಿ ಹೇಳುವುದಾದರೆ, ಮೊಬೈಲ್‌ ಮೂಲಕ ನಡೆದ ಆನ್‌ಲೈನ್ ಪಾಠಗಳು ಬಹುತೇಕ ಯಶಸ್ವಿಯಾಗಿಲ್ಲ. ಇಂದು ಪ್ರತಿಯೊಬ್ಬರ ಮನೆಯಲ್ಲೂ ಟಿ.ವಿ ಇರುವುದರಿಂದ ಆನ್‌ಲೈನ್ ಮೊಬೈಲ್‌ ಪಾಠಕ್ಕಿಂತಲೂ ಚಂದನ ವಾಹಿನಿಯಲ್ಲಿ ಬಿತ್ತರಿಸುವ ಶಾಲಾ ಪಾಠಗಳು ಬಹಳ ಪ್ರಯೋಜನಕಾರಿ ಆಗುವುದರಲ್ಲಿ ಸಂಶಯವೇ ಇಲ್ಲ. ಆದ್ದರಿಂದ ತರಗತಿವಾರು ಪಾಠಗಳು ಬಿತ್ತರಿಸುವ ಕಾರ್ಯಕ್ರಮದ ವೇಳಾಪಟ್ಟಿಯನ್ನು ಮುಂಚಿತ ವಾಗಿ ಪ್ರಕಟಿಸಿದರೆ ವಿದ್ಯಾರ್ಥಿಗಳು ಪೂರ್ಣ ಪ್ರಯೋಜನ ಪಡೆಯುಬಹುದು. ಶಾಲೆಗಳಲ್ಲಿರುವ ವೇಳಾಪಟ್ಟಿ ಯಂತೆ ಇಡೀ ಶೈಕ್ಷಣಿಕ ವರ್ಷಕ್ಕೆ ಒಂದು ನಿಶ್ಚಿತ ವೇಳಾಪಟ್ಟಿ ಇದ್ದರೆ ಇನ್ನೂ ಉತ್ತಮ.

– ಪ್ರಕಾಶ ವಿ. ಹೆಬ್ಬಳ್ಳಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.