ADVERTISEMENT

ಪರಿಸರ ಪ್ರೇಮ ಸದಾ ಇರಲಿ

​ಪ್ರಜಾವಾಣಿ ವಾರ್ತೆ
Published 2 ಮೇ 2019, 20:00 IST
Last Updated 2 ಮೇ 2019, 20:00 IST

ಬಿರು ಬೇಸಿಗೆಯ ಧಗೆ, ಕುಡಿಯುವ ನೀರಿನ ಹಾಹಾಕಾರದಿಂದ ಜನ ರೋಸಿ ಹೋಗಿದ್ದಾರೆ. ಪ್ರತಿವರ್ಷ ಇಂತಹ ಸ್ಥಿತಿ ಮರುಕಳಿಸುತ್ತದಾದರೂ ಈ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಮಾತ್ರ ಯಾರೂ ಮುಂದಾಗುವುದಿಲ್ಲ. ಜೂನ್‌ ತಿಂಗಳಲ್ಲಷ್ಟೇ ಪರಿಸರ ಜಾಥಾ, ವನಮಹೋತ್ಸವ, ವೃಕ್ಷ ಆಂದೋಲನ, ಪರಿಸರ ದಿನ ಹೀಗೆ ಸಾಲು ಸಾಲು ಕಾರ್ಯಕ್ರಮಗಳು ನಡೆಯುತ್ತವೆ. ಗಣ್ಯರು ಗಿಡ ನೆಡುವ ಭಾವಚಿತ್ರಗಳು ಪತ್ರಿಕೆಗಳಲ್ಲಿ ರಾರಾಜಿಸುತ್ತವೆ. ಬಳಿಕ, ನೆಟ್ಟ ಗಿಡಗಳು ಬೆಳೆದವೇ, ಬಿಟ್ಟವೇ ಎಂದು ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ.

ಪರಿಸರ ಜಾಗೃತಿ ಕಾರ್ಯಕ್ರಮಗಳು ಪ್ರಾಥಮಿಕ, ಪ್ರೌಢಶಾಲೆ ಮಕ್ಕಳಿಗೆ ಮಾತ್ರ ಎಂದು ಭಾವಿಸಬಾರದು. ಅಂತಹ ಕಾರ್ಯಕ್ರಮಗಳನ್ನು ಕಾಲೇಜುಗಳಲ್ಲೂ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು. ಅಲ್ಲಿರುವ ಎನ್‌ಸಿಸಿ, ಎನ್‌ಎಸ್ಎಸ್ ಘಟಕಗಳನ್ನು ಈ ಉದ್ದೇಶಕ್ಕೆ ವರ್ಷವಿಡೀ ಬಳಸಿಕೊಳ್ಳಬೇಕು. ಬರೀ ಅಕೇಷಿಯಾ ಗಿಡಗಳನ್ನು ನೆಡದೆ ವಿವಿಧ ಜಾತಿಯ ಗಿಡಗಳನ್ನು ಬೆಳೆಸಲು ಪ್ರೋತ್ಸಾಹಿಸಬೇಕು. ಜಾಗತಿಕ ತಾಪಮಾನ, ಅಂತರ್ಜಲದ ಮಹತ್ವ, ವನ್ಯಜೀವಿಗಳ ರಕ್ಷಣೆ, ಓಝೋನ್ ಪದರ, ಹಸಿರುಮನೆ ಪರಿಣಾಮ ಮುಂತಾದ ವಿಷಯಗಳ ಬಗ್ಗೆ ವಿಚಾರ ಸಂಕಿರಣಗಳನ್ನು ಏರ್ಪಡಿಸಿ, ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೇಮ ಮೂಡಿಸಬೇಕು. ಹಾಗಾದಲ್ಲಿ ಮಾತ್ರ ನಮ್ಮ ಭಾವಿ ಪೀಳಿಗೆಗೆ ಸುಂದರ ಪರಿಸರ ಉಳಿಯುತ್ತದೆ.

–ಬಸವನಗೌಡ ಹೆಬ್ಬಳಗೆರೆ,ಚನ್ನಗಿರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.