ADVERTISEMENT

ಪರಿಸರ ಕಾಳಜಿಯ ದ್ಯೋತಕ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2020, 19:31 IST
Last Updated 26 ಅಕ್ಟೋಬರ್ 2020, 19:31 IST

ಅತಿಯಾದ ಜನವಸತಿಯಿಂದ ನೆಲ, ಕೃಷಿಭೂಮಿ ಮೊಟಕಾಗಿರುವ ಸಂದರ್ಭದಲ್ಲಿ, ಬೆಳೆದದ್ದು ಗುಲ ಗಂಜಿಯಷ್ಟೂ ತ್ಯಾಜ್ಯವಾಗದಂತೆ ಎಚ್ಚರ ವಹಿಸಬೇಕಾದುದು ಅನಿವಾರ್ಯವಷ್ಟೇ ಅಲ್ಲ, ಜರೂರು ಕೂಡ ಎಂದಿರುವ ಯೋಗಾನಂದ ಅವರ ಲೇಖನ (ಸಂಗತ, ಅ. 24) ಸಮಯೋಚಿತ. ಈಗಷ್ಟೇ ದಸರಾ ಆಚರಿಸಿದ್ದೇವೆ.

ದೀಪಾವಳಿ ಬರಲಿದೆ. ಹಬ್ಬಗಳ ಸಂದರ್ಭದಲ್ಲಿ ಚಪ್ಪರಗಳಿಗೆ, ತೋರಣಗಳಿಗೆ ಕಂದು, ಗರಿಗಳನ್ನು ಇತಿಮಿತಿ ಇಲ್ಲದೆ ಬಳಸಿದರೆ ಆಯಾ ಫಸಲಿನ ಇಳುವರಿಗೆ ಕಂಟಕ. ಈಗಾಗಲೇ ಉಲ್ಬಣಗೊಂಡಿರುವ ತ್ಯಾಜ್ಯ ವಿಲೇವಾರಿ ಸವಾಲು ಇನ್ನಷ್ಟು ಅಧಿಕವಾಗಬಾರದೆಂದರೆ, ಇಂತಹವುಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾದುದು ಅನಿವಾರ್ಯ. ಇದು ಪರಿಸರ ಕಾಳಜಿಯ ದ್ಯೋತಕ ಸಹ.

ಆಹಾರದ ಪೋಲನ್ನು ಯಾವುದೇ ಸಂಸ್ಕೃತಿ ಪುರಸ್ಕರಿಸುವುದಿಲ್ಲ ನಿಜ. ಆದರೆ ನಮ್ಮಲ್ಲಿ ಪರಿಕಲ್ಪನಾತ್ಮಕ ಆಚಾರ, ವಿಚಾರ ಹಾಗೂ ವಿಧಿ ವಿಧಾನಗಳ ಹೆಸರಿನಲ್ಲಿ ಪರಿಸರ ವಿರೋಧಿಯಾದ ಇಂತಹ ಚಟುವಟಿಕೆಗಳು ಪ್ರಜ್ಞಾಪೂರ್ವಕವಾಗಿಯೇ ನಡೆಯುತ್ತಿರುವುದು ವಿಪರ್ಯಾಸ. ಆಹಾರ ಪೋಲು ಮಾಡದಂತೆ ನಾಗರಿಕರಿಗೆ ತಿಳಿಹೇಳಬೇಕಾದ ಮಠ ಮಂದಿರಗಳ ಮುಖಂಡರು, ಕುಟುಂಬದ ಹಿರಿಯರು ಬಾಯಿ ಮುಚ್ಚಿಕೊಂಡಿರುವುದು, ಪರಾಕಾಷ್ಠೆ ತಲುಪಿರುವ ಅಮೂಲ್ಯ ಆಹಾರ ವಸ್ತುಗಳ ವ್ಯರ್ಥಕ್ಕೆ ಪ್ರಚೋದನೆಯೇ ಸರಿ.

ADVERTISEMENT

ಇದಕ್ಕೆ ಸುಮಾರು ಮೂರುಸಾವಿರ ಜನಸಂಖ್ಯೆ, ಹತ್ತಕ್ಕೂ ಹೆಚ್ಚು ಪ್ರಮುಖ ದೇವಸ್ಥಾನಗಳಿರುವ ನಮ್ಮ ಗ್ರಾಮದ ದೇವಸ್ಥಾನವೊಂದರ ಮುಂದೆ ಪ್ರತೀ ಅಮಾವಾಸ್ಯೆಯಂದು ನಡೆಯುವ ವಾಹನಗಳ ಪೂಜೆಯನ್ನು ಉದಾಹರಿಸಬಹುದು. ಗ್ರಾಮದಲ್ಲಿ 40 ಟ್ರ್ಯಾಕ್ಟರ್, 15ಕ್ಕೂ ಹೆಚ್ಚು ಓಮ್ನಿ, ಕಾರು ಇತ್ಯಾದಿ ಹಾಗೂ ನೂರಕ್ಕೂ ಹೆಚ್ಚು ದ್ವಿಚಕ್ರವಾಹನಗಳಿರುವ ಅಂದಾಜಿದೆ. ಅವುಗಳಲ್ಲಿ ನಾಲ್ಕು ಚಕ್ರದ 40 ವಾಹನ, 75 ದ್ವಿಚಕ್ರ ವಾಹನಗಳು ಪೂಜೆಗೆ ಬಂದರೂ ನೂರಾರು ನಿಂಬೆಹಣ್ಣುಗಳು ಗಾಲಿಗಳಡಿ ಅಪ್ಪಚ್ಚಿಯಾಗುತ್ತವೆ. ಹಸಿಮೆಣಸಿನ
ಕಾಯಿ, ಅರಿಸಿನದ ಕೊಂಬು, ಗೇರುಬೀಜಗಳ ಜೊತೆ ಇನ್ನೊಂದಷ್ಟು ನಿಂಬೆಹಣ್ಣುಗಳು ವಾಹನದಲ್ಲಿ ನೇತಾಡುತ್ತಿರುತ್ತವೆ.

ಇದು ಒಂದು ಗ್ರಾಮದ ದೇವಸ್ಥಾನವೊಂದರಲ್ಲಿ ನಡೆಯುವ ಒಂದು ಅಮಾವಾಸ್ಯೆ ಪೂಜೆಗೆ ಬಳಕೆಯಾಗುವ ನಿಂಬೆ ಹಣ್ಣಿನ ಲೆಕ್ಕ. ಇನ್ನು ಗ್ರಾಮ ಭಾರತದ ಎಲ್ಲ ಪೂಜಾ ಮಂದಿರಗಳಲ್ಲಿ ಹಬ್ಬ, ಜಾತ್ರೆ, ಉತ್ಸವಗಳಲ್ಲಿ ಪೂಜೆ, ಹೋಮ ಹವನಗಳಲ್ಲಿ ಪೋಲಾಗುವ ಫಲಪುಷ್ಪ, ಆಹಾರ ವಸ್ತುಗಳ ಲೆಕ್ಕ ಆ ದೇವರಿಗೇ ಗೊತ್ತು.

–ದೇವರಾಜ ದೊಡ್ಡಗೌಡ್ರ,ನಾಗವಂದ, ರಟ್ಟಿಹಳ್ಳಿ, ಹಾವೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.