ADVERTISEMENT

ರೈತರ ಸಂಭ್ರಮಕ್ಕೆ ಚ್ಯುತಿ ಬಾರದಿರಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 23 ಜುಲೈ 2020, 19:31 IST
Last Updated 23 ಜುಲೈ 2020, 19:31 IST

ಪ್ರಸಕ್ತ ಹಂಗಾಮಿನಲ್ಲಿ ಶೇ 88ರಷ್ಟು ಕೃಷಿಭೂಮಿ ಬಿತ್ತನೆಯಾಗಿರುವುದು (ಪ್ರ.ವಾ., ಜುಲೈ 17) ಸಂತಸದ ಸಂಗತಿ. ವಲಸೆ ಕಾರ್ಮಿಕರೆಲ್ಲಾ ಊರು ಸೇರಿ, ಪಾಳು ಬಿದ್ದ ತಮ್ಮ ನೆಲಕ್ಕೆ ಮತ್ತೆ ಜೀವ ತುಂಬುತ್ತಿದ್ದಾರೆ. ಲಾಕ್‍ಡೌನ್ ಸಮಯದಲ್ಲೂ ರೈತ ಸಾಲ ಸೋಲ ಮಾಡಿ ಬೆಳೆ ಬಿತ್ತಿದ್ದಾನೆ. ಆದರೆ ಹೀಗೆ ಬಿತ್ತುವಾಗಿನ ಅವನ ಸಂಭ್ರಮ ಮಾರುವವರೆಗೂ ಉಳಿಯುತ್ತದೆಯೇ ಎಂಬುದೇ ಅನುಮಾನ. ಬಹುಪಾಲು ಕೃಷಿ ಬಿತ್ತನೆಯಾಗಿರುವುದರಿಂದ ಫಸಲು ಹೆಚ್ಚಾಗುತ್ತದೆ. ಎಲ್ಲರೂ ಏಕಕಾಲಕ್ಕೆ ಕಟಾವು ಮಾಡಿದ ಬೆಳೆಗಳು ಮಾರುಕಟ್ಟೆಯನ್ನು ಪ್ರವೇಶಿಸಿದಾಗ ದಲ್ಲಾಳಿಗಳ ಅಬ್ಬರವೂ ಹೆಚ್ಚಾಗಿ, ತಾನು ಖರ್ಚು ಮಾಡಿದ ಹಣ ಮರಳಿ ಪಡೆಯದೆ ರೈತ ಸಾಲ ತೀರಿಸಲಾಗದೆ ಹತಾಶನಾಗುತ್ತಾನೆ.

ಸ್ಥಳೀಯವಾಗಿ ಮಾತ್ರವಲ್ಲದೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲೂ ತನ್ನ ಬೆಳೆಗಳನ್ನು ಹೇಗೆ ತಲುಪಿಸಬಹುದೆಂಬ ಅರಿವು ರೈತನಿಗೆ ಅಗತ್ಯ. ಲಾಕ್‍ಡೌನ್ ಸಮಯದಲ್ಲಿ ಕೆಲ ಸಚಿವರು ರೈತನ ಹೊಲ, ಗದ್ದೆಗೆ ತೆರಳಿ ಅಲ್ಲಿಯೇ ವ್ಯಾಪಾರ ನಡೆಸಿದ್ದರು. ಇದೇ ರೀತಿ ಸರ್ಕಾರವು ರೈತನಿಂದ ನೇರಾನೇರ ವ್ಯಾಪಾರ ನಡೆಸಲು ಕ್ರಮ ಕೈಗೊಳ್ಳಬೇಕು. ಊರುಗಳಿಗೆ ಮರಳಿರುವ ವಲಸೆ ಕಾರ್ಮಿಕರು ಮತ್ತೆ ಅತಂತ್ರ ಸ್ಥಿತಿಗೆ ಬರುವುದು ಬೇಡ ಎಂದಾದರೆ, ಸರ್ಕಾರ ಈ ಕುರಿತು ಗಂಭೀರ ಚಿಂತನೆ ನಡೆಸಬೇಕು.

- ಆಶಾ,ಶಿವಮೊಗ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.