ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕಲಬುರ್ಗಿ ಜಿಲ್ಲೆಯ ಮಹಿಳೆಯರು 33 ಕೆರೆಗಳ ಹೂಳನ್ನು ಎತ್ತಿ, ಅವುಗಳಿಗೆ ಮರುಜೀವ ತುಂಬಿದ ಸುದ್ದಿ ಓದಿ (ಪ್ರ.ವಾ., ಜುಲೈ 31) ಸಂತೋಷ ಮತ್ತು ಹೆಮ್ಮೆ ಎನಿಸಿತು. ಈ ಕೆಲಸಕ್ಕೆ ಪ್ರಜ್ಞಾ ಕಾನೂನು ಸಲಹಾ ಸಮಿತಿ ಹಾಗೂ ಜನವಾದಿ ಮಹಿಳಾ ಸಂಘಟನೆಯು ಬೆನ್ನೆಲುಬಾಗಿ ನಿಂತದ್ದು ಅಭಿನಂದನಾರ್ಹ ಸಂಗತಿ. ಅವರ ಈ ಪ್ರಯತ್ನವು ಚಳವಳಿಯ ರೂಪ ಪಡೆದು ಸ್ಥಳೀಯ ಅಧಿಕಾರಿಗಳನ್ನು ಎಚ್ಚರಿಸದೆ ಹೋಗಿದ್ದರೆ ಇಂಥ ಜನಪರ, ಜೀವಪರ ಕೆಲಸ ಆಗುವುದು ಸಾಧ್ಯವಿರಲಿಲ್ಲವೆನಿಸುತ್ತದೆ.
ಉತ್ತರ ಕರ್ನಾಟಕದ ಹೆಚ್ಚಿನ ಕೃಷಿಭೂಮಿ ಮಳೆಯಾಧಾರಿತವಾದದ್ದು. ಸಕಾಲಕ್ಕೆ ಮಳೆ ಬಂದರೆ ಬೆಳೆ, ಬಾಳು. ಮಳೆ ಕೈಕೊಟ್ಟರೆ ರೈತರೆಲ್ಲ ಉಪಜೀವನಕ್ಕಾಗಿ ಕೆಲಸ ಹುಡುಕಿಕೊಂಡು ಕರ್ನಾಟಕದ ಪಟ್ಟಣಗಳಿಗೆ ಮಾತ್ರವಲ್ಲದೆ ಪಕ್ಕದ ಗೋವಾ, ಮಹಾರಾಷ್ಟ್ರಗಳಿಗೆ ಗುಳೇ ಹೋಗುವುದು ಸರ್ವೇಸಾಮಾನ್ಯ. ಅಂತಹ ಸ್ಥಿತಿಯಲ್ಲಿ ಸಾವಿರಾರು ಮಹಿಳೆಯರು ಉರಿಬಿಸಿಲನ್ನು ಲೆಕ್ಕಿಸದೆ ಯುದ್ಧೋಪಾದಿಯಲ್ಲಿ ಕೆಲಸ ಮಾಡಿ 33 ಕೆರೆಗಳಿಗೆ ಕಾಯಕಲ್ಪ ನೀಡಿ, ಅವುಗಳ ಒಡಲು ತುಂಬಲು ಕಾರಣವಾದದ್ದು ಅನುಕರಣೀಯ. ಉತ್ತರ ಕರ್ನಾಟಕದ ರೈತಮಹಿಳೆಯರು, ಮಹಿಳಾ ಕೂಲಿಕಾರ್ಮಿಕರು ಹೆಚ್ಚು ಕಷ್ಟಜೀವಿಗಳು, ಶ್ರಮಸಂಸ್ಕೃತಿಯನ್ನು ಹಾಸಿಹೊದ್ದವರು. ಪುರುಷನಿಗೆ ಹೆಗಲೆಣೆಯಾಗಿ ದುಡಿಯುವ ಚೈತನ್ಯಶಾಲಿಗಳು.
ಹೂಳಿನಿಂದ ಹೂತುಹೋಗಿ ನಿರ್ಜೀವವಾಗಿರುವ ರಾಜ್ಯದ ಎಲ್ಲ ಕೆರೆಗಳನ್ನು ಹೀಗೆ ಉದ್ಯೋಗ ಖಾತರಿಯಂಥ ಯೋಜನೆಗಳಡಿಯಲ್ಲಿ ಮರುಜೀವ ತುಂಬಿ, ಅಭಿವೃದ್ಧಿಪಡಿಸಿದರೆ ನೀರಿನ ಕೊರತೆಯ ಬಾಧೆ ಅಷ್ಟಾಗಿ ತಟ್ಟದು ಮತ್ತು ಕೆರೆಗಳ ಅಭಿವೃದ್ಧಿಯಿಂದ ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಹೊರರಾಜ್ಯಗಳಿಗೆ ಗುಳೆ ಹೋಗುವ ಕಷ್ಟ ತಪ್ಪಲಿದೆ. ಸರ್ಕಾರ, ಸಂಘಟನೆಗಳು ಮತ್ತು ಸಾರ್ವಜನಿಕರು ಇತ್ತ ಚಿತ್ತ ಹರಿಸುವುದು ಉತ್ತಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.