ADVERTISEMENT

ದ್ವೇಷ ಉಗುಳುವ ನಾಯಕರು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 19:31 IST
Last Updated 2 ಏಪ್ರಿಲ್ 2021, 19:31 IST

‘ಇಂದಿರಾ ಪರ್ವ, ಅಮೆರಿಕದ ಗರ್ವ’ ಲೇಖನದಲ್ಲಿ (ಪ್ರ.ವಾ., ಏ. 1) ಸುಧೀಂದ್ರ ಬುಧ್ಯ, ‘ಬಾಂಗ್ಲಾ ವಿಮೋಚನೆ ಎಂದರೆ ಶೇಖ್ ಮುಜೀಬುರ್ ರಹಮಾನರ ಜೊತೆ, ಇಂದಿರಾ ಗಾಂಧಿ, ಮಾಣೆಕ್ ಶಾ ಕೂಡ ನೆನಪಾಗಬೇಕು’ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾ ದೇಶಕ್ಕೆ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಇತ್ತೀಚೆಗೆ ಭೇಟಿ ಕೊಟ್ಟಾಗ, ‘ಮುಜೀಬುರ್ ರಹಮಾನ್ ಮತ್ತು ಭಾರತೀಯ ಸೈನ್ಯವನ್ನು ಸ್ಮರಿಸಿ ಶ್ಲಾಘಿಸಿದರು’ (ಪ್ರ.ವಾ., ಮಾರ್ಚ್‌ 27). ಮೋದಿ ಅವರು ಇಂದಿರಾ ಅವರನ್ನು ಸ್ಮರಿಸದೆ, ತಾವು ಬಾಂಗ್ಲಾ ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದಾಗಿ ಎದೆ ತಟ್ಟಿಕೊಂಡಿದ್ದಾರೆ.

ಇಂದಿರಾ ಅವರ ಮೇಲಿನ ದ್ವೇಷವು ಮೋದಿಯವರಿಗಷ್ಟೇ ಸೀಮಿತವಲ್ಲ. ಬಾಂಗ್ಲಾದೇಶ ಉದಯವಾದಾಗ ಭಾರತ 90 ಸಾವಿರ ಪಾಕ್ ಸೈನಿಕರನ್ನು ಯುದ್ಧ ಕೈದಿಗಳನ್ನಾಗಿ ಒತ್ತೆ ಇಟ್ಟುಕೊಂಡಿತ್ತು. ಇಡೀ ದೇಶವೇ ಇಂದಿರಾ ಅವರನ್ನು ಕೊಂಡಾಡುತ್ತಿದ್ದಾಗ ಅಡ್ವಾಣಿ ‘ದೇಶದಲ್ಲಿ ನಮಗೇ ಆಹಾರ ಇಲ್ಲದಿರುವಾಗ ಈ ಸೈನಿಕರನ್ನು ಸಾಕಬೇಕೇ’ ಎಂದು ಟೀಕಿಸಿದ್ದರು.

ADVERTISEMENT

ಅಮೃತಸರದ ಸ್ವರ್ಣ ಮಂದಿರದಲ್ಲಿ ಅಡಗಿದ್ದ ಭಿಂದ್ರನ್ ವಾಲೆ ಮತ್ತಿತರ ಅಕಾಲಿ ಉಗ್ರಗಾಮಿಗಳನ್ನು ಸೈನಿಕರು ಕೊಂದಾಗ ಇಂದಿರಾ ಅವರಿಗೆ ಕಮಾಂಡೊಗಳ ರಕ್ಷಣೆ ಕೊಡಲಾಗಿತ್ತು. ಅದಕ್ಕೆ ಒಂದು ಕೋಟಿ ರೂಪಾಯಿ ಖರ್ಚು ಮಾಡಬೇಕಿತ್ತು. ಇದೇ ಅಡ್ವಾಣಿ ಆಗ, ಒಬ್ಬ ಹೆಣ್ಣಿಗಾಗಿ ಒಂದು ಕೋಟಿ ರೂಪಾಯಿ ಖರ್ಚು ಮಾಡಬೇಕೇ ಎಂದು ಕೂಗು ಹಾಕಿದ್ದರು‌. ಆರ್‌ಎಸ್ಎಸ್ ಮುಖ್ಯಸ್ಥರಾಗಿದ್ದ ಕೆ.ಎಸ್.ಸುದರ್ಶನ್ ಮಾತ್ರ, ವಾಜಪೇಯಿ ಅವರಿಗಿಂತ ಒಳ್ಳೆಯ ಆಡಳಿತ ನಡೆಸಿದವರು ಇಂದಿರಾ ಗಾಂಧಿ ಎಂದು ಮುಕ್ತ ಕಂಠದಿಂದ ಹೊಗಳಿದ್ದರು. ದ್ವೇಷ ಉಗುಳುವ ನಾಯಕರು ದೇಶಕ್ಕೆ ಮಾದರಿಯಾಗುವರೇ?

ಕೆ.ಎನ್.ಭಗವಾನ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.