ADVERTISEMENT

ಎಷ್ಟು ಬಾರಿ ಗ್ರಾಹಕರನ್ನು ಅರಿಯುವುದು?

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 15:14 IST
Last Updated 4 ಆಗಸ್ಟ್ 2021, 15:14 IST

ದೇಶದಲ್ಲಿ ಇಂದು ಯಾವುದೇ ಬ್ಯಾಂಕ್‍ಗೆ ಹೋದರೂ ಆಧಾರ್- ಪ್ಯಾನ್ ಕಾರ್ಡ್ ಇಲ್ಲದೆ ಖಾತೆ ತೆರೆಯುವುದಿಲ್ಲ. ಖಾತೆ ತೆರೆಯಲು ಇವು ಮೂಲ ದಾಖಲೆ ಎನಿಸಿವೆ. ಈ ಮೊದಲು ಇವು ಕಡ್ಡಾಯ ಇರಲಿಲ್ಲ. ಹತ್ತು– ಹದಿನೈದು ವರ್ಷಗಳ ಹಿಂದೆ ಯಾರು ಖಾತೆ ತೆರೆದಿದ್ದರೋ ಅಂಥವರಿಗೆ ಈ ದಾಖಲೆಗಳನ್ನು ಸಲ್ಲಿಸಲು ಸೂಚಿಸಲಾಗುತ್ತಿದೆ. ಆದ್ದರಿಂದ ‘ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ’ ಸಂಕ್ಷಿಪ್ತದಲ್ಲಿ ‘ಕೆವೈಸಿ’ ಎಂಬ ವಿಧಾನವನ್ನು ಜಾರಿಗೆ ತರಲಾಯಿತು. ಇದು ಅನಿವಾರ್ಯ ಮತ್ತು ಸ್ವಾಗತಾರ್ಹ.

ಆದರೆ ವರ್ಷದಲ್ಲಿ ಮೂರು– ನಾಲ್ಕು ಬಾರಿ ಬಹುತೇಕ ಬ್ಯಾಂಕ್‍ಗಳು ತಮ್ಮದೇ ಬ್ಯಾಂಕಿನ ಹಳೆಯ ಮತ್ತು ಹೊಸ ಗ್ರಾಹಕರಿಗೂ ಆಧಾರ್- ಪ್ಯಾನ್ ಕಾರ್ಡ್ ಸಲ್ಲಿಸುವಂತೆ ಸೂಚಿಸುತ್ತವೆ. ಇಂಥ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುವ ದುರುಳರು ಬ್ಯಾಂಕ್ ಹೆಸರಿನಲ್ಲಿ ಕರೆ ಮಾಡಿ, ವಂಚನೆ ಮಾಡುತ್ತಿರುವುದನ್ನೂ ನಾವು ದಿನಂಪ್ರತಿ ನೋಡುತ್ತಿದ್ದೇವೆ. ಇಂದಿನದು ಡಿಜಿಟಲ್ ಯುಗ. ಈಗಲೂ ಪದೇ ಪದೇ ದಾಖಲೆ ಸಲ್ಲಿಸುವಂತೆ ಸೂಚಿಸುವುದಾದಲ್ಲಿ ಹಿಂದೆ ಪಡೆಯಲಾಗಿದ್ದ ದಾಖಲೆಗಳು ಎಲ್ಲಿ ಹೋಗುತ್ತವೆ?

ಈ ಕುರಿತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖಾ ಪ್ರಬಂಧಕರೊಬ್ಬರನ್ನು ವಿಚಾರಿಸಿದಾಗ, ‘ನಮಗೂ ಇದೇ ತಲೆನೋವಾಗಿದೆ. ಪ್ರಧಾನ ಕಚೇರಿಯಿಂದ ಪುನರಪಿ ದಾಖಲೆ ಕೇಳುತ್ತಾರೆ. ಪ್ರತಿದಿನವೂ ಗ್ರಾಹಕರೊಂದಿಗೆ ಇದೇ ವಿಷಯವಾಗಿ ವಾಗ್ಯುದ್ಧಗಳಾಗುತ್ತಿವೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ವರ್ಷಕ್ಕೆ ನಾಲ್ಕು ಬಾರಿ ಆಧಾರ್- ಪ್ಯಾನ್ ಕಾರ್ಡ್ ಸಂಖ್ಯೆ- ಮಾಹಿತಿ ಬದಲಾಗುತ್ತದೆಯೇ? ಈ ಬಗ್ಗೆ ಬ್ಯಾಂಕ್‍ಗಳು ಒಂದು ವ್ಯವಸ್ಥಿತ ಕ್ರಮವನ್ನು ಅಳವಡಿಸಿಕೊಂಡು ಗ್ರಾಹಕರಿಗೆ ಕಿರುಕುಳ ನೀಡುವುದನ್ನು ತಪ್ಪಿಸಬೇಕು.

ADVERTISEMENT

-ಚನ್ನು ಅ. ಹಿರೇಮಠ,ರಾಣೆಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.