ADVERTISEMENT

ವಾಚಕರ ವಾಣಿ | ಪಿಕೆಟ್ಟಿಯ ಅಸಮಾನತೆ ಪ್ರಣಾಳಿಕೆ ಕಾರ್ಯರೂಪದಲ್ಲಿದೆ!

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 21:03 IST
Last Updated 18 ಜನವರಿ 2023, 21:03 IST

ಭಾರತದ ಕುರಿತು ಆಕ್ಸ್‌ಫ್ಯಾಮ್ ಬಿಡುಗಡೆ ಮಾಡಿರುವ ವರದಿಯು ವರಮಾನದ ಅಸಮಾನತೆಯು ಹೆಚ್ಚುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 1ರಷ್ಟಿರುವ ಅತಿಶ್ರೀಮಂತರು ದೇಶದ ಒಟ್ಟು ಸಂಪತ್ತಿನ ಶೇ 40ರಷ್ಟು ಹೊಂದಿದ್ದಾರೆ ಎನ್ನುತ್ತದೆ ವರದಿ (ಪ್ರ.ವಾ., ಜ. 17). ಸರಿಸುಮಾರು ನೂರರಷ್ಟು ಅಗ್ರ ಶ್ರೀಮಂತರ ಒಟ್ಟು ಸಂಪತ್ತಿನ ಮೌಲ್ಯವು ₹ 54.12 ಲಕ್ಷ ಕೋಟಿಯಾಗಿದೆ. ಅಂದರೆ ಇದು ಕರ್ನಾಟಕದ 2020-21ರ ಜಿಎಸ್‍ಡಿಪಿಯ 3.4 ಪಟ್ಟಾಗುತ್ತದೆ. ಸುಮಾರು ಮೂರು ಕರ್ನಾಟಕಗಳ ವರಮಾನಕ್ಕೆ ಈ 100 ಜನರ ವರಮಾನವು ಸಮನಾಗುತ್ತದೆ.

ಜಗತ್ತಿನಲ್ಲಿ ಅಸಮಾನತೆಯಲ್ಲಿ ಏರಿಕೆಯಾಗುತ್ತಿರುವುದರ ಕುರಿತಂತೆ ಪ್ರಸಿದ್ಧ ಸಿದ್ಧಾಂತವನ್ನು ಮಂಡಿಸಿದ್ದ ಥಾಮಸ್ ಪಿಕೆಟ್ಟಿ ಅವರ ಪ್ರಣಾಳಿಕೆಯು ಭಾರತದಲ್ಲಿ ಇಂದು ಸಂಭವಿಸುತ್ತಿದೆ. ಅವರ ಪ್ರಕಾರ, ಯಾವಾಗ ಬಂಡವಾಳದ ಮೇಲಿನ ಪ್ರತಿಫಲದ ದರವು ಆರ್ಥಿಕ ಬೆಳವಣಿಗೆ ದರಕ್ಕಿಂತ ಅಧಿಕವಾಗಿರುತ್ತದೊ ಅಲ್ಲಿ ಅಸಮಾನತೆಯು ತೀವ್ರವಾಗುತ್ತದೆ. ಭಾರತದಲ್ಲಿ ಇಂದು ಅತಿಬಂಡವಾಳಿಗರ ಸಂಪತ್ತು ನಾಗಾಲೋಟದಲ್ಲಿ ಏರಿಕೆಯಾಗುತ್ತಿದೆ, ಆದರೆ ಆರ್ಥಿಕ ಬೆಳವಣಿಗೆ ದರವು ಶೇ 6- 7ರ ನಡುವೆ ಎಡತಾಕುತ್ತಿದೆ. ಇದಕ್ಕೆ ಒಕ್ಕೂಟ ಸರ್ಕಾರವು ಪಾಲಿಸುತ್ತಿರುವ ಪ್ರತಿಗಾಮಿ ಅಪ್ರತ್ಯಕ್ಷ ತೆರಿಗೆ (ಜಿಎಸ್‌ಟಿ) ಮತ್ತು ಕಡಿತವಾಗುತ್ತಿರುವ ಪ್ರತ್ಯಕ್ಷ ತೆರಿಗೆ (ಕಾರ್ಪೊರೇಟ್ ತೆರಿಗೆ) ನೀತಿಯು ಕಾರಣವಾಗಿದೆ. ಮುಂಬರುವ ಬಜೆಟ್ಟಿನಲ್ಲಾದರೂ ಬಡವರನ್ನು ಕಾಪಿಡುವ ರೀತಿಯಲ್ಲಿ ತೆರಿಗೆ ನೀತಿಯನ್ನು ಒಕ್ಕೂಟ ಸರ್ಕಾರ ಬದಲಾಯಿಸಬೇಕು ಎಂದು ಒತ್ತಾಯಿಸೋಣ.
ಟಿ.ಆರ್.ಚಂದ್ರಶೇಖರ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.