ADVERTISEMENT

ಕೃಷಿ ಆಧುನೀಕರಣವೆಂದರೆ ಕಾರ್ಪೊರೇಟೀಕರಣವೇ?

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 19:31 IST
Last Updated 30 ಮಾರ್ಚ್ 2021, 19:31 IST

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 75ನೆಯ ಮನ್ ಕಿ ಬಾತ್‍ನಲ್ಲಿ ‘ಕೃಷಿಗೆ ಆಧುನಿಕತೆಯ ಅಗತ್ಯವಿದೆ’ ಎಂದು ಒತ್ತಿ ಹೇಳಿದ್ದಾರೆ (ಪ್ರ.ವಾ., ಮಾರ್ಚ್‌ 29). ಇದರ ಜೊತೆಗೆ ಅವರು ಕೃಷಿ ಕ್ಷೇತ್ರದಲ್ಲಿ ಉದ್ಯೋಗಅವಕಾಶಗಳನ್ನು ಸೃಷ್ಟಿಸಲು, ರೈತರ ಆದಾಯವನ್ನು ವೃದ್ಧಿಸಲು ಸಾಂಪ್ರದಾಯಿಕ ಕೃಷಿ ಪದ್ಧತಿಗಳ ಜೊತೆಗೆ ಹೊಸ ಪರ್ಯಾಯಗಳು, ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂದೂ ಕರೆ ನೀಡಿದ್ದಾರೆ.

ಪ್ರಧಾನಮಂತ್ರಿ ಆಶಯವೇನೋ ಸ್ವಾಗತಾರ್ಹ. ಆದರೆ ಇದು ಕೃಷಿಯ ಖಾಸಗೀಕರಣ ಮತ್ತು ಕಾರ್ಪೊರೇಟೀಕರಣಗಳಿಂದಲೇ ನಡೆಯಬೇಕೇ? ಗುತ್ತಿಗೆ ಕೃಷಿ, ಕೃಷಿ ಉತ್ಪನ್ನಗಳ ಮುಕ್ತ ಮಾರಾಟ, ಯಾರು ಬೇಕಾದರೂ ಎಷ್ಟು ಬೇಕಾದರೂ ಕೃಷಿ ಉತ್ಪನ್ನಗಳನ್ನು ದಾಸ್ತಾನಿಡಲು ಅನುವಾಗಿಸುವ ಕೃಷಿಗೆ ಸಂಬಂಧಿಸಿದ ಕಾಯ್ದೆಗಳು ಕೃಷಿಯನ್ನು ಆಧುನೀಕರಣಗೊಳಿಸುತ್ತವೋ ಅಥವಾ ಇದನ್ನು ಬಂಡವಾಳಿಗರ ಸಾಮ್ರಾಜ್ಯವನ್ನಾಗಿ ಮಾಡುತ್ತವೋ?

ಯಾವತ್ತೂ ನಮ್ಮ ಕೃಷಿಯು ರೈತ-ಪ್ರಣೀತ ಖಾಸಗಿ ಚಟುವಟಿಕೆಯಾಗಿತ್ತು. ಅಲ್ಲಿ ಆಧುನೀಕರಣವೂ ನಡೆಯುತ್ತಿತ್ತು. ಈಗ ಕಾರ್ಪೊರೇಟ್‌ ಪ್ರಣೀತ ಕೃಷಿಯಿಂದ ಅದು ಹೆಚ್ಚು ಹೆಚ್ಚು ಆಧುನೀಕರಣಗೊಳ್ಳಬಹುದು. ಆದರೆ ರೈತಕೇಂದ್ರಿತ ಕೃಷಿಯಾಗಿ ಉಳಿಯುವುದಿಲ್ಲ. ಇವು ಕೃಷಿ ವಲಯದಲ್ಲಿರುವ ಒಟ್ಟು ಭೂಹಿಡುವಳಿಗಾರರಲ್ಲಿ ಶೇ 85ರಷ್ಟಿರುವ ಅತಿಸಣ್ಣ ಮತ್ತು ಸಣ್ಣ ಹಿಡುವಳಿಗಾರರ ಬದುಕನ್ನು ಮತ್ತು ಭೂರಹಿತ ದಿನಗೂಲಿ ದುಡಿಮೆಗಾರರ ಬದುಕನ್ನು ಅಧೋಗತಿಗೆ ಇಳಿಸಿಬಿಡಬಹುದು. ಈ ಬಗ್ಗೆಯೂ ಪ್ರಧಾನಿ ಗಮನ ನೀಡುವ ಅಗತ್ಯವಿದೆ.

ADVERTISEMENT

ಟಿ.ಆರ್.ಚಂದ್ರಶೇಖರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.