ADVERTISEMENT

ಭಾವೋದ್ವೇಗದ ಹೇಳಿಕೆ ಸಮರ್ಥನೀಯವಲ್ಲ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 26 ಮಾರ್ಚ್ 2021, 19:30 IST
Last Updated 26 ಮಾರ್ಚ್ 2021, 19:30 IST

ರಾಜ್ಯದ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ತಮ್ಮನ್ನೂ ಒಳಗೊಂಡಂತೆ ರಾಜ್ಯದ ಎಲ್ಲಾ 225 ಶಾಸಕರ ಬಗ್ಗೆ ಆಡಿರುವ ಕೆಟ್ಟ ಅಭಿರುಚಿಯ ಮಾತುಗಳ ಬಗ್ಗೆ ರಾಜ್ಯದಾದ್ಯಂತ ಮಹಿಳೆಯರಿಂದ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ವಿಧಾನಸಭೆಯ ಸ್ಪೀಕರ್, ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಶಾಸಕರನ್ನು ಏಕ ಪತ್ನಿ ವ್ರತಸ್ಥರೇ ಅಲ್ಲವೇ ಎಂಬ ಬಗ್ಗೆ ಪರೀಕ್ಷೆಗೆ ಒಳಪಡಿಸಬೇಕೆಂದು ಹೇಳಿದ್ದಾರೆ. ನಂತರ ಮುಖ್ಯಮಂತ್ರಿಯವರ ಸಲಹೆಯಂತೆ, ತಾವಾಡಿದ ಮಾತುಗಳ ಬಗ್ಗೆ ಸದನದಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.

ಕೆಲವೊಮ್ಮೆ ಮಾತಿನ ಭರದಲ್ಲಿ, ಆಕ್ರೋಶಪೂರಿತ ಸನ್ನಿವೇಶಗಳಲ್ಲಿ ಇಂತಹ ಮಾತುಗಳು ಹೊರಬರಬಹುದು. ಸಿ.ಡಿ ವಿವಾದದಲ್ಲಿ ಸಿಲುಕಿರುವ ರಮೇಶ್ ಜಾರಕಹೊಳಿ ಅವರನ್ನು ಸಮರ್ಥಿಸುವ ಭರದಲ್ಲಿ ಸಚಿವರ ಬಾಯಿಯಿಂದ ಅಂತಹ ಕೆಟ್ಟ ಮಾತುಗಳು ಬಂದಿರಬಹುದು. ಆದರೆ, ಸಚಿವರಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಭಾವೋದ್ವೇಗಕ್ಕೆ ಒಳಗಾಗಿ ಈ ಬಗೆಯ ಹೇಳಿಕೆಗಳನ್ನು ನೀಡಬಾರದು. ಪ್ರಸ್ತುತ ಅವರು ಆರೋಗ್ಯ ಸಚಿವರಾಗಿದ್ದು, ಕೊರೊನಾ ವಿರುದ್ಧದ ಹೋರಾಟದ ನಾಯಕತ್ವ ವಹಿಸಿದ್ದಾರೆ. ರಾಜ್ಯದಲ್ಲಿ ಕೊರೊನಾದ ಹಾವಳಿ ಗಂಭೀರ ಸ್ವರೂಪ ಪಡೆಯುತ್ತಿದೆ. ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗಿದೆ. ಇಂತಹ ಗಂಭೀರ ಹಾಗೂ ಸೂಕ್ಷ್ಮವಾದ ಸನ್ನಿವೇಶದಲ್ಲಿ ಆರೋಗ್ಯ ಸಚಿವರು ಎಡವಟ್ಟು ಮಾಡಿಕೊಂಡಿದ್ದಾರೆ. ಇನ್ನು ಮುಂದಾದರೂ ಅವರು ಜವಾಬ್ದಾರಿಯುತವಾಗಿ ವರ್ತಿಸಲಿ.

- ಕೆ.ವಿ.ವಾಸು,ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.