ADVERTISEMENT

ಬರೆದಂತೆ ಬದುಕಿದರು ಈ ಕವಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 19:30 IST
Last Updated 9 ಜುಲೈ 2021, 19:30 IST

ಅತಿಯಾದ ಉಪದೇಶಾಮೃತ ಕುರಿತ ಮಲ್ಲಿಕಾರ್ಜುನ ಹೆಗ್ಗಳಗಿ ಅವರ ಲೇಖನ (ಸಂಗತ, ಜುಲೈ 9) ಓದುತ್ತಿದ್ದಂತೆ, ಬರೆದಂತೆ ಬದುಕಿದ ಕವಿಯೊಬ್ಬರು ನನ್ನ ನೆನಪಿಗೆ ಬಂದರು. ಅವರೇ ಬನಹಟ್ಟಿಯ ಕವಿ ಬ.ಗಿ.ಯಲ್ಲಟ್ಟಿ. ಅವರು ಶ್ರೀಮಂತಿಕೆಯಿಂದ ಬಡತನಕ್ಕೆ ನೂಕಲ್ಪಟ್ಟ ದುರ್ದೈವಿ. ಬರೀ ಇಂಟರ್‌ಮೀಡಿಯಟ್ ಪಾಸಾಗಿದ್ದ ಅವರಿಗೆ ಎಸ್‍.ಎಂ.ಅಂಗಡಿ ಎಂಬ ಸಹೃದಯಿ ಮುಖ್ಯಾಧ್ಯಾಪಕರು ರಬಕವಿ ಹೈಸ್ಕೂಲಿನಲ್ಲಿ ನೌಕರಿ ಕೊಟ್ಟರು. ರಂ.ಶ್ರೀ.ಮುಗಳಿಯವರು ಪ್ರಾಂಶುಪಾಲರಾಗಿದ್ದ ಸಾಂಗಲಿಯ ವಿಲ್ಲಿಂಗ್ಟನ್ ಕಾಲೇಜಿನಲ್ಲಿ ಬಿ.ಎ., ಎಂ.ಎ ಪದವಿಗಳನ್ನು ಪಡೆದುಕೊಂಡರು. ಅಕ್ಕಲಕೋಟೆಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕನ ಹುದ್ದೆಗೆ ಅರ್ಜಿ ಹಾಕಿದ್ದರು. ಸಂದರ್ಶನಕ್ಕೆ ಕರೆ ಬಂದಿತು. ಆದರೆ ಯಲ್ಲಟ್ಟಿಯವರು ಅಕ್ಕಲಕೋಟೆಗೆ ತಡವಾಗಿ ಹೋದರು. ಅಷ್ಟರಲ್ಲಿ ಸಂದರ್ಶನ ಪ್ರಕ್ರಿಯೆ ಮುಗಿದು ಬೇರೊಬ್ಬರ ಆಯ್ಕೆಯಾಗಿತ್ತು. ಆದರೆ ಕೆಲಸದ ಆದೇಶ ಕೊಟ್ಟಿರಲಿಲ್ಲ. ಆಡಳಿತ ಮಂಡಳಿಯವರನ್ನು ಕಂಡು ಕಾರಣ ವಿವರಿಸಿದರು. 50 ವರ್ಷ ಮೀರಿದ್ದ ಯಲ್ಲಟ್ಟಿಯವರ ಬಗ್ಗೆ ಮರುಕಗೊಂಡ ಆಡಳಿತ ಮಂಡಳಿ, ಮೊದಲು ಆಯ್ಕೆಗೊಂಡವರ ಬದಲು ಅವರನ್ನೇ ನೇಮಕ ಮಾಡಿಕೊಳ್ಳುವುದಾಗಿ ಹೇಳಿತು.

‘ಮತ್ತೊಬ್ಬರ ಹೊಟ್ಟೆಯ ಮೇಲೆ ಕಲ್ಲು ಹಾಕಿ ನಾನು ಬದುಕು ಕಂಡುಕೊಳ್ಳುವುದು ತಪ್ಪು, ನಾನು ಈಗಾಗಲೇ ಹೈಸ್ಕೂಲ್‍ನಲ್ಲಿ ಶಿಕ್ಷಕ ವೃತ್ತಿಯಲ್ಲಿದ್ದೇನೆ. ಈಗ ಆಯ್ಕೆಯಾಗಿರುವ ತರುಣನನ್ನೇ ತೆಗೆದುಕೊಳ್ಳಿ’ ಎಂದು ಯಲ್ಲಟ್ಟಿ ಅವರು ಸಮಜಾಯಿಷಿ ನೀಡಿ ಬನಹಟ್ಟಿಗೆ ಬಂದರು. ಯಲ್ಲಟ್ಟಿಯವರ ಈ ಪ್ರಾಮಾಣಿಕತೆ ವ್ಯರ್ಥವಾಗಲಿಲ್ಲ. ಅಕ್ಕಲಕೋಟೆ ಕಾಲೇಜಿನ ಪ್ರಾಚಾರ್ಯರು ಕಲಬುರ್ಗಿಯ ಶರಣಬಸವೇಶ್ವರ ಕಾಲೇಜಿನ ಪ್ರಾಚಾರ್ಯರಿಗೆ ಯಲ್ಲಟ್ಟಿಯವರನ್ನು ಶಿಫಾರಸು ಮಾಡಿ ಪತ್ರ ಬರೆದರು. ಕೆಲವೇ ದಿನಗಳಲ್ಲಿ ಅಲ್ಲಿಯ ಪ್ರಾಧ್ಯಾಪಕ ಹುದ್ದೆ ಯಲ್ಲಟ್ಟಿಯವರಿಗೆ ಒಲಿದು ಬಂದಿತು. ‘ದೇವನ ಮನೆಯಿದು ಈ ಜಗವೆಲ್ಲ, ಬಾಡಿಗೆದಾರರು ಜೀವಿಗಳೆಲ್ಲಾ’ ಹಾಡನ್ನು ಬರೆದು ನಾಡಿಗೆ ಖ್ಯಾತಿಯಾದವರೇ ಕವಿ ಬ.ಗಿ.ಯಲ್ಲಟ್ಟಿ.

–ಜಯವಂತ ಕಾಡದೇವರ, ಬನಹಟ್ಟಿ, ಬಾಗಲಕೋಟೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.