ಎಸ್.ಎಲ್. ಭೈರಪ್ಪ
ಎಸ್.ಎಲ್. ಭೈರಪ್ಪನವರು ಕನ್ನಡ ಕಾದಂಬರಿ ಪ್ರಕಾರದ ಘನತೆಯನ್ನು ವಿಸ್ತರಿಸಿದ ಕೀರ್ತಿಗೆ ಭಾಜನರಾದ ಪ್ರಸಿದ್ಧ ಸಾಹಿತಿ; ಅಪಾರ ಸಂಖ್ಯೆಯ ಓದುಗರನ್ನು ಪಡೆದಿದ್ದ ವಿರಳ ಲೇಖಕರಾದ ಅವರ ಕಾದಂಬರಿಗಳ ವಸ್ತು ನಿರೂಪಣೆ ಮತ್ತು ಆಶಯಗಳು ಸಹಜವಾಗಿ ಆಕರ್ಷಣೀಯವಾಗಿದ್ದವು; ಜೊತೆಗೆ ಚರ್ಚೆ ಮತ್ತು ಚಿಂತನೆಗಳನ್ನೂ ಪ್ರೇರೇಪಿಸಿದವು; ವಾಗ್ವಾದಗಳನ್ನು ಆಹ್ವಾನಿಸಿದವು. ವಿಶೇಷವೆಂದರೆ ಅವರು ಕೃತಿ ರಚನೆಗೆ ಮುಂಚೆ ಅಪರೂಪದ ಕ್ಷೇತ್ರಕಾರ್ಯ ಮಾಡುತ್ತಿದ್ದ ಲೇಖಕರಾಗಿದ್ದರು. ನಾನು ಅವರ ಕೃತಿಗಳೊಂದಿಗೆ ಸಂವಾದ ಮತ್ತು ವಾಗ್ವಾದ – ಎರಡನ್ನೂ ನಡೆಸುವ ಮೂಲಕ ಅವರ ಕಥನ ಕಲೆಯನ್ನು ಗೌರವಿಸಿದ್ದೇನೆ.
‘ವಂಶವೃಕ್ಷ’ ಕಾದಂಬರಿ ಕುರಿತು 25ಕ್ಕೂ ಹೆಚ್ಚು ಪುಟಗಳ ಕಿರುಪುಸ್ತಕ ಬರೆದು ವಿಶ್ಲೇಷಿಸಿದ್ದೆ. ‘ವಂಶವೃಕ್ಷ’ವು ಸಿನಿಮಾ ಆದಾಗ ಕಾದಂಬರಿ ಮತ್ತು ಸಿನಿಮಾವನ್ನು ತೌಲನಿಕವಾಗಿ ಚರ್ಚೆ ಮಾಡಿದ್ದೆ. ‘ದಾಟು’ ಕಾದಂಬರಿಯನ್ನು ಯು.ಆರ್. ಅನಂತಮೂರ್ತಿಯವರ ‘ಭಾರತೀಪುರ’ ಕಾದಂಬರಿಗೆ ಹೋಲಿಸಿ ಕೆಲವು ಸಕಾರಾತ್ಮಕ ಅಂಶಗಳನ್ನು ನಿರೂಪಿಸಿದ್ದೆ. ‘ಪರ್ವ’ದಂತಹ ಪ್ರಯೋಗಾತ್ಮಕ ಮರುಸೃಷ್ಟಿಯನ್ನು ಆಸಕ್ತಿಯಿಂದ ಅರ್ಥ ಮಾಡಿಕೊಂಡಿದ್ದೆ. ‘ಆವರಣ’ ಕಾದಂಬರಿಯ ಜೊತೆ ವಾಗ್ವಾದ ಮಾಡಿದ್ದೆ. ಇಷ್ಟೆಲ್ಲ ಮಾಡಿಸಿದ್ದು ಭೈರಪ್ಪನವರ ‘ಕೃತಿಸೆಳೆತ’. ಆದರೆ, ಅವರ ಕೆಲವು ಸಾಮಾಜಿಕ-ರಾಜಕೀಯ ಅಭಿಪ್ರಾಯಗಳ ಬಗ್ಗೆ ಖಚಿತ ಭಿನ್ನಾಭಿಪ್ರಾಯ ಹೊಂದಿದ್ದೇನೆ. ತಾತ್ವಿಕ ಭಿನ್ನಾಭಿಪ್ರಾಯಗಳು ವೈಯಕ್ತಿಕ ವಿರೋಧವಾಗಬಾರದೆಂಬ ವಿವೇಕ ಮುಖ್ಯ ಎಂದು ನಾನು ನಂಬಿದ್ದೇನೆ. ಈ ಹಿನ್ನೆಲೆಯಲ್ಲಿ ಅವರು ಕಾದಂಬರಿ ಪ್ರಕಾರದಲ್ಲಿ ಜನಪ್ರಿಯತೆ ಮತ್ತು ಗಂಭೀರತೆಗಳನ್ನು ಬೆಸೆದ ಬಗೆಯನ್ನು ಸಾಹಿತ್ಯ ವಿವೇಕದಿಂದ ಗೌರವಿಸುತ್ತೇನೆ. ಅವರ ಸಾಹಿತ್ಯ ಸ್ಮರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸುತ್ತೇನೆ.
-ಬರಗೂರು ರಾಮಚಂದ್ರಪ್ಪ, ಬೆಂಗಳೂರು
****
ಸಮೀಕ್ಷೆ: ಪ್ರೀತಿಯ ಮೊಳಕೆಗಳು ಚಿಗುರಲಿ
ನಾನು ಪದವಿ ಓದುತ್ತಿದ್ದಾಗ ರಾಜೇಶ್ವರಿ ತೇಜಸ್ವಿ ಅವರನ್ನು, ‘ನಿಮ್ಮದು ಅಂತರ್ಜಾತಿ ವಿವಾಹ ಅಂತೆ ಮೇಡಂ, ಹೌದಾ?’ ಎಂದು ಕೇಳಿದ್ದೆ. ಅದಕ್ಕೆ ಅವರು, ‘ಯಾರು ನಿಮಗೆ ಹಾಗೆಂದವರು, ನಮ್ಮದು ಅಂತರ್ಜಾತಿಯದ್ದಲ್ಲ; ಆಂತರ್ಯದ ಪ್ರೀತಿ ವಿವಾಹ’ ಎಂದಿದ್ದರು. ಈಗ ಸರ್ಕಾರ ಅತ್ಯಂತ ಹಿಂದುಳಿದ ಸಮುದಾಯಗಳಿಗೆ ಸೌಲಭ್ಯ ಕಲ್ಪಿಸಲು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದೆ. ಇದರ ಉದ್ದೇಶ ಒಳ್ಳೆಯದಾಗಿದ್ದರೂ, ಇದನ್ನೇ ನೆಪವಾಗಿಟ್ಟುಕೊಂಡು ಜಾತಿ ವ್ಯವಸ್ಥೆಯು ಇನ್ನಷ್ಟು ಗಟ್ಟಿಗೊಳ್ಳಬಾರದು. ಕಾಲಕ್ರಮೇಣ ಜಾತಿಯ ಕಟ್ಟುಪಾಡುಗಳು ಸಂಪೂರ್ಣ ಇಲ್ಲವಾಗಿ ಪ್ರೀತಿಯ ಮೊಳಕೆಯು ಚಿಗುರಿ ಬೆಳೆಯುವಂತೆ ಎಚ್ಚರಿಕೆಯಿಂದ ನೋಡಿಕೊಳ್ಳುವುದು ಸರ್ಕಾರದ ಹೊಣೆ.
-ಸಂಪತ್ ಬೆಟ್ಟಗೆರೆ, ಮೂಡಿಗೆರೆ
****
ಯಕ್ಷಪ್ರಶ್ನೆ: ಖಾಲಿ ಸ್ಥಾನ ತುಂಬಬಲ್ಲರೇ?
ಎಡಪಂಥೀಯರೇ ಆಗಿರಲಿ, ಬಲಪಂಥೀಯರೇ ಆಗಿರಲಿ, ಮಧ್ಯಮ ಪಂಥೀಯರೇ ಆಗಿರಲಿ– ಒಟ್ಟಿನಲ್ಲಿ ಘನವಾದ ಲೇಖಕರು, ಈ ಲೋಕ ಬಿಟ್ಟು ಹೊರಟಾಗ, ಆ ಖಾಲಿ ಸ್ಥಾನವನ್ನು ಮುಂದಿನವರು ತುಂಬಬಲ್ಲರೇ ಎಂಬುದು ಯಕ್ಷಪ್ರಶ್ನೆಯಾಗಿದೆ.
-ರಾಜಶೇಖರ ಕುಕ್ಕುಂದಾ, ಬಾಗಲಕೋಟೆ
****
ಬಾಯಿಪಾಠದ ಉತ್ತರಕ್ಕೆ ಚುನಾಯಿಸಿಲ್ಲ
‘ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ರಸ್ತೆಯಲ್ಲೂ ಗುಂಡಿಗಳಿವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿರುವ ಮಾತುಗಳು ಎಷ್ಟರ ಮಟ್ಟಿಗೆ ಸರಿ? ವಿಪಕ್ಷಗಳು ಮಾಡಲಾಗದ್ದನ್ನು ತಾವು (ಕಾಂಗ್ರೆಸ್) ಮಾಡುತ್ತೀರಿ ಎಂಬ ನಂಬಿಕೆಯ ಮೇಲೆ ತಾನೆ ಜನ ಓಟು ಹಾಕಿ ನಿಮ್ಮನ್ನು ಗೆಲ್ಲಿಸಿದ್ದು. ‘ನೀವು ಮಾಡಿಲ್ಲ, ಅದಕ್ಕೆ ನಾವು ಮಾಡಿಲ್ಲ’ ಎಂಬ ಬಾಯಿ ಪಾಠದ ಉತ್ತರ ನೀಡುವ ಸ್ಥಾನದಲ್ಲಿ ನೀವಿಲ್ಲ ಎಂಬುದನ್ನು ತಿಳಿದುಕೊಂಡರೆ ಒಳ್ಳೆಯದು.
-ಆಕಾಶ್, ಬಾಗಲಕೋಟೆ
****
ಹೆಲಿಕಾಪ್ಟರ್ ಹಾರಾಟ ತಂದ ಪೀಕಲಾಟ
ತುಮಕೂರು ದಸರಾ ಉತ್ಸವದ ಅಂಗವಾಗಿ ತುಮಕೂರು ವಿ.ವಿ. ಆವರಣದಲ್ಲಿ ಹೆಲಿಕಾಪ್ಟರ್ ಸವಾರಿ ಆರಂಭಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಏಕಾಗ್ರತೆಯಿಂದ ಪಾಠ ಕೇಳಲು ಆಗುತ್ತಿಲ್ಲ. ಹೆಲಿಕಾಪ್ಟರ್ ಹಾರಾಟದ ವೇಳೆ ಏಳುವ ದೂಳು ಕ್ಯಾಂಪಸ್‌ನ ಪರಿಸರದ ಮೇಲೆ ಪರಿಣಾಮ ಬೀರಿದೆ. ಜನದಟ್ಟಣೆಯ ಶೈಕ್ಷಣಿಕ ಸ್ಥಳದಲ್ಲಿ ಹೆಲಿಕಾಪ್ಟರ್ ಕಾರ್ಯಾಚರಣೆಯು ಸಂಭಾವ್ಯ ಅಪಾಯವನ್ನು ಉಂಟು ಮಾಡುವ ಆತಂಕವಿದೆ. ಕ್ಯಾಂಪಸ್‌ನ ಮೂಲ ಉದ್ದೇಶ ಶಿಕ್ಷಣಕ್ಕಾಗಿ, ಮನರಂಜನೆಗಾಗಿ ಅಲ್ಲ. ಹಬ್ಬಗಳು ನಮಗೆ ಮುಖ್ಯ. ಆದರೆ, ಆಚರಣೆ ನೆಪದಲ್ಲಿ ವಿದ್ಯಾರ್ಥಿಗಳ ಹಕ್ಕಿನ ಮೊಟಕಿಗೆ ಕಾರಣವಾಗಬಾರದು. ಜಿಲ್ಲಾಡಳಿತದ ಅವೈಜ್ಞಾನಿಕ ನಡೆಗೆ ಇದು ನಿದರ್ಶನವಾಗಿದೆ.
-ಶ್ರೀನಿವಾಸ ಎಲ್., ತುಮಕೂರು
****
ಹಿರಿಯರಿಗೆ ಸಿಗದ ‘ಆಯುಷ್ಮಾನ್’ ಆಸರೆ
ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತರಿಗೆ ಅಕ್ಟೋಬರ್ 1ರಿಂದ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ ಜಾರಿ ಆಗುತ್ತಿರುವುದು ಸ್ವಾಗತಾರ್ಹ.
ಕೇಂದ್ರ ಸರ್ಕಾರವು 70 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಸೌಲಭ್ಯ ನೀಡುವುದಾಗಿ ಘೋಷಿಸಿ ಒಂದು ವರ್ಷ ಸಂದಿದೆ. ಆದರೆ, ಇಲ್ಲಿಯವರೆಗೂ ‘ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ’ಯ ಕಾರ್ಡನ್ನು ಯಾವುದೇ ಖಾಸಗಿ ಆಸ್ಪತ್ರೆಯೂ ಮಾನ್ಯ ಮಾಡುತ್ತಿಲ್ಲ. ಸರ್ಕಾರವು ಈ ಸಮಸ್ಯೆಯನ್ನು ಬಗೆಹರಿಸಬೇಕಿದೆ.
-ಎ.ವಿ. ಶಾಮರಾವ್, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.